;Resize=(412,232))
ಬೆಂಗಳೂರು : ಪ್ರತಿಷ್ಠಿತ ಸಾಹಿತ್ಯೋತ್ಸವಗಳಲ್ಲಿ ಒಂದಾದ ಮಂಗಳೂರು ಲಿಟ್‌ಫೆಸ್ಟ್‌ನ 8ನೇ ಆವೃತ್ತಿ ಜ.10 ಮತ್ತು ಜ.11ರಂದು ನಡೆಯಲಿದ್ದು, ಈ ಸಲದ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿಗೆ ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯರಾದ ಪದ್ಮಶ್ರೀ ಡಾ.ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಡಾ.ಟಿ.ಎಂ.ಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ 2 ದಿನ ನಡೆಯಲಿರುವ ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಲಿಟ್ ಫೆಸ್ಟ್ ಆಯೋಜಿಸುತ್ತಿರುವ ಭಾರತ್ ಫೌಂಡೇಷನ್ ತಿಳಿಸಿದೆ.
ಸಮಾರಂಭದಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಮುಖ್ಯಸ್ಥರಾದ ವಿಕ್ರಂ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ರುಚಿರಾ ಕಾಂಬೋಜ್, ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ಟಿ.ಎಸ್.ತಿರುಮೂರ್ತಿ ಸೇರಿದಂತೆ 70ಕ್ಕೂ ಹೆಚ್ಚು ಚಿಂತಕರು ಭಾಗವಹಿಸಿ ಸಂವಾದ ನಡೆಸಲಿದ್ದಾರೆ.
ಶತಾವಧಾನಿ ಡಾ.ಆರ್.ಗಣೇಶ್, ಡಾ.ಮೀನಾಕ್ಷಿ ಜೈನ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ರವಿ. ಎಸ್ (ಮಿಥಿಕ್ ಸೊಸೈಟಿ), ಡಾ.ಅಜಕ್ಕಳ ಗಿರೀಶ್ ಭಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪದ್ಮಭೂಷಣ ಡಾ.ಎಸ್.ಎಲ್. ಭೈರಪ್ಪ ಗೌರವಾರ್ಥವಾಗಿ ‘ಭೈರಪ್ಪ ಅವರ ಬೆಳಕಲ್ಲಿ ಮುಂದೆ ಬೆಳೆಯಬಹುದಾದ ಸಾಹಿತ್ಯ’ ಎಂಬ ಗೋಷ್ಠಿ ಆಯೋಜಿಸಲಾಗಿದ್ದು, ಶತಾವಧಾನಿ ಆರ್. ಗಣೇಶ್ ಮತ್ತು ಜಿ.ಬಿ. ಹರೀಶ ಈ ಗೋಷ್ಠಿ ನಡೆಸಿಕೊಡಲಿದ್ದಾರೆ.
ರಾಷ್ಟ್ರಮಟ್ಟದ ಚಿಂತಕರಾದ ವಿಕ್ರಂ ಸೂದ್ ಮತ್ತು ಡಾ.ಶ್ರೀಪರ್ಣಾ ಪಾಠಕ್ ವಿಶ್ವ ಮಟ್ಟದ ಪವರ್ ಗೇಮ್ ವಿಚಾರವಾಗಿ, ರುಚಿರಾ ಕಾಂಬೋಜ್, ಡಾ.ಸ್ವಸ್ತಿ ರಾವ್, ಪತ್ರಕರ್ತ ಆದಿತ್ಯ ರಾಜ್ ಕೌಲ್ ಮತ್ತು ಡಾ.ಬಿದ್ದಂಡ ಚೆಂಗಪ್ಪ ಭಾರತದ ನೆರೆಹೊರೆಯ ಸಂಬಂಧಗಳ ಕುರಿತು, ತಿರುಮೂರ್ತಿ, ಡಾ.ಶ್ರೀರಾಮ್ ಚೌಲಿಯಾ, ವಿಜಿತ್ ಕನಹಳ್ಳಿ ‘ಜಾಗತೀಕರಣಗೊಂಡ ವಿಶ್ವದಲ್ಲಿ ಭಾರತೀಯ ಚಿಂತನೆ’ ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ.
ಪತ್ರಕರ್ತರಾದ ಸ್ಮಿತಾ ಪ್ರಕಾಶ್, ಪದ್ಮಜಾ ಜೋಶಿ ಮತ್ತು ಸುರಭಿ ಹೊದಿಗೆರೆ ಸಾರ್ವಜನಿಕ ಕ್ಷೇತ್ರವನ್ನು ಡಿಜಿಟಲ್ ಸುದ್ದಿಗಳು ಹೇಗೆ ರೂಪಿಸುತ್ತಿವೆ ಎಂಬುದರ ಕುರಿತು ಚರ್ಚಿಸಲಿದ್ದಾರೆ. ಚಿತ್ರ ಮತ್ತು ಚಿಂತನೆ ಗೋಷ್ಠಿಯಲ್ಲಿ ನಿರ್ದೇಶಕ ಪಿ. ಶೇಷಾದ್ರಿ, ಮಾಳವಿಕಾ ಅವಿನಾಶ್ ಮತ್ತು ಪಲ್ಲವಿ ರಾವ್ ಕಾರಂತ್ ಭಾಗವಹಿಸಲಿದ್ದಾರೆ.
ಪುಸ್ತಕ ಸಂವಾದ:
ಪತ್ರಕರ್ತ ವಿಶ್ವೇಶ್ವರ ಭಟ್ ಅವರ ‘ಬದುಕುಳಿದವರು ಕಂಡಂತೆ’ ಪುಸ್ತಕ ಸಂವಾದವನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ‘ಕಲ್ಪನೆ, ಕಥನ ಮತ್ತು ಕ್ಯಾಮರಾ’ ಗೋಷ್ಠಿಯಲ್ಲಿ ನಟಿ ರಂಜನಿ ರಾಘವನ್, ಸು ಫ್ರಂ ಸೋ ಖ್ಯಾತಿಯ ಪೂರ್ಣಿಮಾ ಸುರೇಶ್ ಮತ್ತು ಲೇಖಕಿ ಸೀಮಾ ಬುರುಡೆ ಭಾಗವಹಿಸಲಿದ್ದಾರೆ. ಶತಾವಧಾನಿ ಡಾ. ಆರ್. ಗಣೇಶ್, ಡಾ. ಅಜಕ್ಕಳ ಗಿರೀಶ ಭಟ್ ‘ಸಾಹಿತ್ಯದ ಮುಖಾಂತರ ಮೌಲ್ಯಗಳ ಅಣ್ವೇಷಣೆ’ ಗೋಷ್ಠಿ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಲಭ್ಯವಿದೆ.