ಮೇಕೆದಾಟು ಡಿಪಿಆರ್‌ ಕರ್ನಾಟಕಕ್ಕೆ ವಾಪಸ್‌- ಕಾವೇರಿ ಕಿಚ್ಚಿನ ಹೊತ್ತಲ್ಲೇ ಮತ್ತೊಂದು ಹಿನ್ನಡೆ

Published : Jul 31, 2026, 06:49 AM IST
Mekedatu project

ಸಾರಾಂಶ

ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿ ಕರ್ನಾಟಕಕ್ಕೆ ಮತ್ತೊಂದು ಭಾರೀ ಹಿನ್ನಡೆಯಾಗಿದೆ. ಕರ್ನಾಟಕ ಸರ್ಕಾರ ಸಿದ್ಧಪಡಿಸಿ ಕಳುಹಿಸಿಕೊಟ್ಟಿದ್ದ ಪರಿಷ್ಕೃತ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಅನ್ನು ಕಾವೇರಿ ಜಲ ಆಯೋಗ (ಸಿಡಬ್ಲ್ಯುಸಿ) ವಾಪಸ್‌ ಮಾಡಿದೆ.

ಚೆನ್ನೈ: ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿ ಕರ್ನಾಟಕಕ್ಕೆ ಮತ್ತೊಂದು ಭಾರೀ ಹಿನ್ನಡೆಯಾಗಿದೆ. ಕರ್ನಾಟಕ ಸರ್ಕಾರ ಸಿದ್ಧಪಡಿಸಿ ಕಳುಹಿಸಿಕೊಟ್ಟಿದ್ದ ಪರಿಷ್ಕೃತ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಅನ್ನು ಕಾವೇರಿ ಜಲ ಆಯೋಗ (ಸಿಡಬ್ಲ್ಯುಸಿ) ವಾಪಸ್‌ ಮಾಡಿದೆ.

ಮೂಲಗಳ ಪ್ರಕಾರ, ಜೂ.29ರಂದೇ ಸಿಡಬ್ಲ್ಯುಸಿಯು ಪರಿಷ್ಕೃತ ಡಿಪಿಆರ್‌ ಅನ್ನು ಕರ್ನಾಟಕಕ್ಕೆ ವಾಪಸ್‌ ಕಳುಹಿಸಿಕೊಟ್ಟಿದೆ. ಪರಿಷ್ಕೃತ ಡಿಪಿಆರ್‌ನಲ್ಲಿ ಕುಡಿಯುವ ನೀರಿನ ಬಳಕೆ ಪ್ರಮಾಣ ಹೆಚ್ಚಿಸಲಾಗಿದೆ ಹಾಗೂ ಶಿವನಸಮುದ್ರ ಬಳಿ ವಿದ್ಯುತ್‌ ಉತ್ಪಾದನೆ ಯೋಜನೆಯ ಪ್ರಸ್ತಾಪವೂ ಇದೆ. ‘ಇವೆರಡೂ ಮೂಲ ಡಿಪಿಆರ್‌ನ ಭಾಗ ಆಗಿರಲಿಲ್ಲ’ ಎಂಬುದು ಸಿಡಬ್ಲ್ಯುಸಿ ಆಕ್ಷೇಪವಾಗಿದೆ. ಅಲ್ಲದೆ, ‘ನೀರಿನ ಬಳಕೆ ಪ್ರಮಾಣ ಹೆಚ್ಚಳ ಕಾವೇರಿ ನ್ಯಾಯಾಧಿಕರಣ ಹಾಗೂ ಸುಪ್ರೀಂ ಕೋರ್ಟ್‌ನ 2018ರ ಕಾವೇರಿ ತೀರ್ಪಿಗೆ ಅನುಗುಣವಾಗಿಲ್ಲ’ ಎಂದು ಹೇಳಿ ಸಿಡಬ್ಲ್ಯುಸಿಯು ಡಿಪಿಆರ್‌ ವಾಪಸ್‌ ಕಳುಹಿಸಿಕೊಟ್ಟಿದೆ.

ಏಕೆ ಆಕ್ಷೇಪ?:

2018ರಲ್ಲಿ ಮೇಕೆದಾಟು ಯೋಜನೆ ಕುರಿತು ಪ್ರಸ್ತಾಪ ಮಾಡಿದ್ದ ಕರ್ನಾಟಕವು ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ 4.75 ಟಿಎಂಸಿ ನೀರು ಬಳಸುವ ಉದ್ದೇಶ ಇಟ್ಟುಕೊಂಡಿರುವುದಾಗಿ ಹೇಳಿತ್ತು. ಅದರಂತೆ ಯೋಜನೆಯ ಡಿಪಿಆರ್‌ ಸಲ್ಲಿಸಲು ಸಿಡಬ್ಲ್ಯುಸಿ ಅನುಮತಿ ನೀಡಿತ್ತು.

ಅದರಂತೆ ಕರ್ನಾಟಕವು 2019ರಲ್ಲಿ ಮೂಲ ಡಿಪಿಆರ್‌ ಸಲ್ಲಿಸಿತ್ತು. ಅದಕ್ಕೆ ಸಂಬಂಧಿಸಿ ಎತ್ತಿದ್ದ ಆಕ್ಷೇಪಗಳಿಗೆ ಪೂರಕವಾಗಿ ಇದೇ ವರ್ಷ ಏ.21ರಂದು ಪರಿಷ್ಕೃತ ಡಿಪಿಆರ್‌ ಸಲ್ಲಿಸಿತ್ತು.

ಪರಿಷ್ಕೃತ ಡಿಪಿಆರ್‌ನಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿಗೆ ಕುಡಿಯುವ ನೀರಿನ ಬಳಕೆ ಪ್ರಮಾಣವನ್ನು 2.2 ಟಿಎಂಸಿಯಷ್ಟು ಹೆಚ್ಚಿಸುವ ಅಂದರೆ ಈ ಹಿಂದಿನ 4.75 ಟಿಎಂಸಿಯಿಂದ 6.95 ಟಿಎಂಸಿಗೆ ಹೆಚ್ಚಿಸುವ ಪ್ರಸ್ತಾಪವಿದೆ.

ಇದರ ಜತೆಗೆ ಪರಿಷ್ಕೃತ ಡಿಪಿಆರ್‌ನಲ್ಲಿ ‘ಶಿವಸಸಮುದ್ರ ರನ್‌ ಆಫ್‌ ರಿವರ್‌’ ಎಂಬ ಹೊಸ ಯೋಜನೆಯ ಪ್ರಸ್ತಾಪ ಮಾಡಲಾಗಿದೆ. ಇದು ಶಿವನಸಮುದ್ರದ ಭರಚುಕ್ಕಿ ಕವಲಿನ ಬಳಿ ಕಾವೇರಿ ನೀರಿಗೆ ಅಡ್ಡಲಾಗಿ ಮಾರ್ಗ ಬದಲಾವಣೆ ಅಣೆಕಟ್ಟು (ನದಿ ನೀರು ಸಂಗ್ರಹಿಸುವ ಅಣೆಕಟ್ಟು ಅಲ್ಲ) ನಿರ್ಮಿಸಿ ಈ ಮೂಲಕ ನೀರನ್ನು ಭೂಗತ ವಿದ್ಯುತ್‌ ಸ್ಥಾವರಕ್ಕೆ ತಿರುಗಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆ ಆಗಿದೆ.

ಇದು ಮೂಲ ಡಿಪಿಆರ್‌ನ ಭಾಗವೇ ಆಗಿರಲಿಲ್ಲ ಎಂದಿರುವ ಸಿಡಬ್ಲ್ಯುಸಿ, 59.46 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಮೇಕೆದಾಟು ಜಲಾಶಯ ನಿರ್ಮಿಸುವ ಕುರಿತು ಕರ್ನಾಟಕವು ಏನು ಸ್ಪಷ್ಟನೆ ನೀಡುತ್ತದೆ ಎಂದೂ ಕೇಳಿದೆ.

ಆಕ್ಷೇಪ ಏನು?

- ಮೂಲಯೋಜನೆಯಲ್ಲಿ ಕುಡಿವ ನೀರಿಗೆ 4.75 ಟಿಎಂಸಿ ಬಳಕೆ ಪ್ರಸ್ತಾಪ. ಆದರೆ ಪರಿಷ್ಕೃತ ಡಿಪಿಆರ್‌ನಲ್ಲಿ ಇದು 6.95 ಟಿಎಂಸಿಗೆ ಹೆಚ್ಚಳ.

- ಪರಿಷ್ಕೃತ ಡಿಪಿಆರ್‌ನಲ್ಲಿ ಶಿವಸಸಮುದ್ರ ರನ್‌ ಆಫ್‌ ರಿವರ್‌ ಎಂಬ ಹೊಸ ಯೋಜನೆಯ ಪ್ರಸ್ತಾಪ. ಇದು ನದಿ ನೀರು ಸಂಗ್ರಹಿಸದೆ ವಿದ್ಯುತ್‌ ಉತ್ಪಾದಿಸುವ ಯೋಜನೆಯಾಗಿದೆ.

- ಇವೆರಡೂ ಮೂಲ ಡಿಪಿಆರ್‌ನ ಭಾಗ ಆಗಿರಲಿಲ್ಲ ಎಂದ ಕಾವೇರಿ ಜಲ ಆಯೋಗ. ರಾಜ್ಯಕ್ಕೆ ಡಿಪಿಆರ್‌ ವಾಪಸ್‌

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಆದೇಶದ ಬೆನ್ನಲ್ಲೇ ಹೆಚ್ಚಾಯ್ತು ಕಾವೇರಿ ಕಿಚ್ಚು
ಸುಪ್ರೀಂ ಹೇಳೋವರೆಗೂ ನೀರು ಬಿಡಬೇಕಿಲ್ಲ : ತಜ್ಞರು