ಶೌಚಾಲಯ ಬಳಕೆಗೂ ಶುಲ್ಕ ವಿಧಿಸಿದ ಮೆಟ್ರೋ: ಜನಾಕ್ರೋಶ

ಮೆಟ್ರೋ ಟಿಕೇಟ್‌ ದರವನ್ನು ಶೇ.70ರಷ್ಟು ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ಈಗ ತನ್ನ ವ್ಯಾಪ್ತಿಯ 12 ಶೌಚಾಲಯ ಬಳಕೆಗೆ ಶುಲ್ಕ ನಿಗದಿಸಿದೆ.

Follow Us

  ಬೆಂಗಳೂರು : ಮೆಟ್ರೋ ಟಿಕೇಟ್‌ ದರವನ್ನು ಶೇ.70ರಷ್ಟು ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ಈಗ ತನ್ನ ವ್ಯಾಪ್ತಿಯ 12 ಶೌಚಾಲಯ ಬಳಕೆಗೆ ಶುಲ್ಕ ನಿಗದಿಸಿದೆ. ಬಿಎಂಆರ್‌ಸಿಎಲ್‌ ಈ ನಡೆಯೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ನಮ್ಮ ಮೆಟ್ರೋ ಆರಂಭವಾದ 2011ರಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ಶೌಚಾಲಯ ಸೌಲಭ್ಯ ಇತ್ತು. ಸದ್ಯ ಏಕಾಏಕಿ ದರ ನಿಗದಿ ಮಾಡಿದೆ. ಬಿಎಂಆರ್‌ಸಿಎಲ್‌ ತನ್ನ ವ್ಯಾಪ್ತಿಯ ಶೌಚಾಲಯಗಳ ನಿರ್ವಹಣೆಗೆ ಖಾಸಗಿ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ ಆ ಸಂಸ್ಥೆಯೇ ಮೆಟ್ರೋ ನಿಲ್ದಾಣಗಳ ಶೌಚಾಲಯಗಳನ್ನು ನಿರ್ವಹಣೆ ಮಾಡಲಿದೆ. ಇದಕ್ಕಾಗಿ ಶೌಚಾಲಯ ಬಳಕೆಗೆ ಶುಲ್ಕ ನಿಗದಿಸಿದ್ದು, ಮೂತ್ರ ವಿಸರ್ಜನೆಗೆ ₹2, ಮಲ ವಿಸರ್ಜನೆಗೆ ₹5 ನಿಗದಿಸಲಾಗಿದೆ.

ಎಲ್ಲೆಲ್ಲಿ ನಿಗದಿ: ನ್ಯಾಷನಲ್‌ ಕಾಲೇಜು, ಲಾಲ್‌ಬಾಗ್, ಸೌಥ್‌ ಆ್ಯಂಡ್‌ ಸರ್ಕಲ್‌, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ ನಗರ, ಯೆಲಚೇನಹಳ್ಳಿ, ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್‌ ಕಾಲೇಜು, ಡಾ.ಅಂಬೇಡ್ಕರ್‌ ನಿಲ್ದಾಣ, ವಿಧಾನಸೌಧ, ಕಬ್ಬನ್‌ ಪಾರ್ಕ್‌ ಮತ್ತು ಮೆಜೆಸ್ಟಿಕ್‌ ನಿಲ್ದಾಣಗಳಲ್ಲಿನ ಶೌಚಾಲಯಗಳನ್ನು ಇನ್ನು ಮುಂದೆ ಪಾವತಿಸಿ ಬಳಸಬೇಕಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್‌ಸಿಎಲ್‌ ಅಧಿಕಾರಿಗಳು, ಈ ನಿಲ್ದಾಣಗಳಲ್ಲಿರುವ ಶೌಚಾಲಯಗಳು ಮೆಟ್ರೋ ಟಿಕೆಟ್‌ ಇಲ್ಲದೆ ಪ್ರವೇಶಿಸಬಹುದಾದ ಸ್ಥಳದಲ್ಲಿವೆ. ಹೀಗಾಗಿ ಈ ಶೌಚಾಲಯಗಳನ್ನು ಮೆಟ್ರೋ ಪ್ರಯಾಣಿಕರು ಮಾತ್ರವಲ್ಲದೆ ಇತರರೂ ಬಳಸುತ್ತಿದ್ದಾರೆ. ಹೀಗಾಗಿ ಅದರ ನಿರ್ವಹಣೆಯನ್ನು ಸುಲಭ್‌ ಇಂಟರ್‌ನ್ಯಾಷನಲ್‌ ಸಂಸ್ಥೆಗೆ ವಹಿಸಿದ್ದೇವೆ ಎಂದು ತಿಳಿಸಿದರು. ಅನಗತ್ಯ ಖರ್ಚು ತಡೆಯುತ್ತಿಲ್ಲ:

ಮೆಟ್ರೋ ಆಡಳಿತ ಮಂಡಳಿಯಿಂದ ಕೆಲ ಅಧಿಕಾರಿಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಸಂಬಳವೂ ಸೇರಿ ಪ್ರತಿ ತಿಂಗಳು ಅನಗತ್ಯವಾಗಿ ಲಕ್ಷಾಂತರ ರುಪಾಯಿ ಖರ್ಚಾಗುತ್ತಿದೆ. ಈ ಹಣದ ಪೋಲು ತಡೆಯಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಜನಬಳಕೆಯ ಶೌಚಾಲಯದ ಮೇಲೆಯೂ ಶುಲ್ಕ ವಿಧಿಸುತ್ತಿರುವುದು ವಿಪರ್ಯಾಸ ಎಂದು ಬಿಎಂಆರ್‌ಸಿಎಲ್‌ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯ ನಾರಾಯಣಮೂರ್ತಿ ಹೇಳಿದ್ದಾರೆ. ಮೆಟ್ರೋ ನಿರ್ಧಾರ ಸರಿಯಲ್ಲ:

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಜನರು, ಬಿಎಂಆರ್‌ಸಿಎಲ್‌ ದೇಶದ ಇತರೆ ಮೆಟ್ರೋಗಳಂತೆ ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ತನ್ನ ಪ್ರಯಾಣಿಕರಿಗೆ ಕಲ್ಪಿಸುತ್ತಿಲ್ಲ. ಜೆ.ಪಿ.ನಗರದಿಂದ ಕೆ.ಆರ್‌.ಮಾರುಕಟ್ಟೆಗೆ ಹೋಗಬೇಕಾದರೆ ಮೆಟ್ರೋಗೆ ₹40 ಟಿಕೆಟ್‌ ಇದೆ. ಈಗ ಮೂಲಭೂತ ಸೌಕರ್ಯ ಶೌಚಾಲಯ ಬಳಕೆಗೂ ಶುಲ್ಕ ವಿಧಿಸುತ್ತಿರುವುದು ಸರಿಯಲ್ಲ. ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.

Read more Articles on