ತುಮಕೂರಿಗೆ ಮೆಟ್ರೋ: ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಕೆ

Follow Us

ಸಾರಾಂಶ

ಬೆಂಗಳೂರು ಹಾಗೂ ತುಮಕೂರು ಮಧ್ಯೆ ಮೆಟ್ರೋ ರೈಲು ಸಂಪರ್ಕ ಯೋಜನೆ ಸಂಬಂಧ ಖಾಸಗಿ ಕಂಪನಿ ಸಲ್ಲಿಸಿದ್ದ ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸರ್ಕಾರಕ್ಕೆ ಬಿಎಂಆರ್​ಸಿಎಲ್ ಸಲ್ಲಿಸಿದೆ.

 ಬೆಂಗಳೂರು : ಬೆಂಗಳೂರು ಹಾಗೂ ತುಮಕೂರು ಮಧ್ಯೆ ಮೆಟ್ರೋ ರೈಲು ಸಂಪರ್ಕ ಯೋಜನೆ ಸಂಬಂಧ ಖಾಸಗಿ ಕಂಪನಿ ಸಲ್ಲಿಸಿದ್ದ ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸರ್ಕಾರಕ್ಕೆ ಬಿಎಂಆರ್​ಸಿಎಲ್ ಸಲ್ಲಿಸಿದೆ.

ಇದು 59.60ಕಿಮೀ ಉದ್ದದ ಮಾರ್ಗವಾಗಿದ್ದು, ಪ್ರಾಥಮಿಕವಾಗಿ 26 ನಿಲ್ದಾಣಗಳನ್ನು ಗುರುತಿಸಲಾಗಿದೆ. ಇದಕ್ಕೆ ಸಮ್ಮತಿ ಸಿಕ್ಕಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಎರಡು ನಗರಗಳ ನಡುವೆ ಮೆಟ್ರೋ ಸಂಪರ್ಕ ಸಾಧ್ಯವಾಗಲಿದೆ. ಹೈದ್ರಾಬಾದ್‌ ಮೂಲದ ಆರ್‌ವೀ ಅಸೋಸಿಯೇಟ್ಸ್‌ ಆರ್ಕಿಟೆಕ್ಟ್ಸ್‌ ಎಂಜಿನಿಯರ್ಸ್‌ ಆ್ಯಂಡ್‌ ಕನ್ಸಲ್ಟಂಟ್‌ ಪ್ರೈ. ಲಿ. ಕಂಪನಿ ಈ ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನ ನಡೆಸಿದೆ. ಇದಕ್ಕಾಗಿ ಬಿಎಂಆರ್‌ಸಿಎಲ್‌ ಕಳೆದ ಅಕ್ಟೋಬರ್‌ನಲ್ಲಿ ಈ ಅಧ್ಯಯನಕ್ಕೆ ₹ 1.25ಕೋಟಿ ಗುತ್ತಿಗೆ ನೀಡಿತ್ತು.

ಕಂಪನಿಯು ತಾಂತ್ರಿಕ, ಆರ್ಥಿಕ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿದೆ. ಈ ಕಾರಿಡಾರನ್ನು ಬಿಎಂಆರ್‌ಸಿಎಲ್‌ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ) ನಿರ್ಮಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಾರ್ಗದಲ್ಲಿ ಮಾಕಳಿ, ದಾಸನಪುರ, ನೆಲಮಂಗಲ, ನೆಲಮಂಗಲ ಟೋಲ್‌ಗೇಟ್‌, ಟಿ.ಬೇಗೂರ, ತಿಪ್ಪಗೊಂಡನಹಳ್ಳಿ, ಸೋಮಪುರ ಇಂಡಸ್ಟ್ರಿಯಲ್‌ ಏರಿಯಾ, ದಾಬಸ್‌ಪೇಟೆ, ಹಿರೇಹಳ್ಳಿ ಇಂಡಸ್ಟ್ರಿಯಲ್‌ ಏರಿಯಾ, ಕ್ಯಾತಸಂದ್ರ, ತುಮಕೂರು ಬಸ್‌ ನಿಲ್ದಾಣ, ಟುಡಾ ಲೇಔಟ್‌, ನಾಗಣ್ಣನಪಾಳ್ಯದಲ್ಲಿ ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದೆ.

ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗಾಗಿ ಕಾರ್ಯಸಾಧ್ಯತಾ ಅಧ್ಯಯನ ಘೋಷಿಸಿದ್ದರು. ವರದಿಗೆ ಹಸಿರುನಿಶಾನೆ ಸಿಕ್ಕಲ್ಲಿ ಮುಂದೆ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗುವುದು. ಬಳಿಕ ಸಂಪುಟ ಸಭೆ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Read more Articles on