ಪಿಯುಸಿ ಮತ್ತೆ ಫೇಲಾಯ್ತಾ? ಜೂ.9ರಿಂದ ಮತ್ತೆ ಪ್ರಯತ್ನಿಸಿ

Follow Us

ಸಾರಾಂಶ

ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ ಪರೀಕ್ಷೆ-3ರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ

  ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ ಪರೀಕ್ಷೆ-3ರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ. ಜೂ.9ರಿಂದ 20ರವರೆಗೆ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲಿ ಮೇ 26ರೊಳಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಪರೀಕ್ಷೆ 1 ಮತ್ತು 2ರಲ್ಲಿ ಅನುತ್ತೀರ್ಣರಾಗಿದ್ದು, ಇದೀಗ ಪರೀಕ್ಷೆ-3 ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಬಾರಿ ಶುಲ್ಕ ಇರುವುದಿಲ್ಲ. ಆದರೆ, ಈಗಾಗಲೇ ಪಡೆದಿರುವ ಫಲಿತಾಂಶ ಸುಧಾರಣೆಗಾಗಿ ಮತ್ತು ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಅವರು ತೆಗೆದುಕೊಳ್ಳುವ ವಿಷಯವಾರು ಶುಲ್ಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ದೂ: 080-23310076 ಸಂಪರ್ಕಿಸಬಹುದು.

ಪರೀಕ್ಷೆ-3 ವೇಳಾಪಟ್ಟಿ:

ಜೂ.9- ಕನ್ನಡ, ಅರೇಬಿಕ್‌. ಜೂ.10- ಇತಿಹಾಸ, ಭೌತಶಾಸ್ತ್ರ. ಜೂ.11- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ. ಜೂ.12- ರಸಾಯನಶಾಸ್ತ್ರ, ಅರ್ಥಶಾಸ್ತ್ರ. ಜೂ.13- ಇಂಗ್ಲಿಷ್‌. ಜೂ.14- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ. ಜೂ.16- ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ. ಜೂ.17- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ. ಜೂ.18- ಹಿಂದಿ. ಜೂ.19- ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ. ಜೂ.20- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್(ಬೆಳಗ್ಗೆ) ಹಿಂದೂ ಸ್ಥಾನಿ ಸಂಗೀತ ಹಾಗೂ ಎನ್‌ಎಸ್‌ಕ್ಯೂಎಫ್ ವಿಷಯಗಳು.

ದಂಡ ರಹಿತವಾಗಿ ಶುಲ್ಕ ಪಾವತಿಸಲು ಮೇ 16ರಿಂದ 23ರವರೆಗೆ, ದಂಡ ಸಹಿತ ಶುಲ್ಕ ಪಾವತಿಗೆ ಮೇ 24ರಿಂದ 26ರವರೆಗೆ ಕಾಲಾವಕಾಶವಿರುತ್ತದೆ. ಪ್ರತಿ ವಿಷಯಕ್ಕೆ(ಮೊದಲ ಬಾರಿಗೆ) 175 ರು, ಎರಡನೇ ಬಾರಿಗೆ 350 ರು. ಶುಲ್ಕ ನಿಗದಿಪಡಿಸಲಾಗಿದೆ.

ಪಿಯು ಪರೀಕ್ಷೆ-2ರಲ್ಲಿ 31% ಮಕ್ಕಳು ಪಾಸ್‌

 ಬೆಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ. ಪರೀಕ್ಷೆ ಬರೆದಿದ್ದ 1,94,077 ವಿದ್ಯಾರ್ಥಿಗಳ ಪೈಕಿ 60,692 ಮಂದಿ ಉತ್ತೀರ್ಣರಾಗಿದ್ದು, ಶೇ.31.27ರಷ್ಟು ಫಲಿತಾಂಶ ದಾಖಲಾಗಿದೆ.

ವಿಶೇಷವೆಂದರೆ ಪರೀಕ್ಷೆ 2 ಬರೆದವರಲ್ಲಿ ಪರೀಕ್ಷೆ 1ರಲ್ಲಿ ತೇರ್ಗಡೆಯಾಗದ ತರಗತಿ ವಿದ್ಯಾರ್ಥಿಗಳ (ಫ್ರೆಷರ್ಸ್‌) ಸಂಖ್ಯೆಯೇ ಹೆಚ್ಚು. ಹಾಗಾಗಿ ಪಾಸಾದವರ ಸಂಖ್ಯೆಯಲ್ಲಿ 54 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವರೇ ಆಗಿದ್ದಾರೆ. ಪರೀಕ್ಷೆಗೆ ನೋಂದಾಯಿಸಿದ್ದ 1.94 ಲಕ್ಷ ಮಂದಿಯಲ್ಲಿ 1.53 ಲಕ್ಷಕ್ಕೂ ಹೆಚ್ಚು ಮಂದಿ ತರಗತಿ ವಿದ್ಯಾರ್ಥಿಗಳು. ಇದರಲ್ಲಿ 54,168 ಮಂದಿ (ಶೇ.35.26) ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ 1ರಲ್ಲಿ ಪಾಸಾಗಿದ್ದರೂ ಫಲಿತಾಂಶ ಹೆಚ್ಚಿಸಿಕೊಳ್ಳಲು ಪರೀಕ್ಷೆ ಬರೆದಿದ್ದ 71,964 ಮಂದಿಯಲ್ಲಿ 41,719 ಜನರ ಫಲಿತಾಂಶ ಉತ್ತಮಗೊಂಡಿದೆ. ಆದರೆ, 28,617 ವಿದ್ಯಾರ್ಥಿಗಳ ಅಂಕಗಳು ಮೊದಲ ಪರೀಕ್ಷೆಗಿಂತ ಕಡಿಮೆಯಾಗಿವೆ. ವಿಶೇಷವೆಂದರೆ 1628 ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಫಲಿತಾಂಶ ಉತ್ತಮಗೊಳಿಸಿಕೊಳ್ಳಲು ಪರೀಕ್ಷೆ ಬರೆದವರ ಪೈಕಿ ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತ ವಿಷಯದವರೇ ಹೆಚ್ಚಿದ್ದಾರೆ.

ಪರೀಕ್ಷೆ-2 ಫಲಿತಾಂಶವನ್ನು ವಿದ್ಯಾರ್ಥಿಗಳು https://karresults.nic.in ಜಾಲತಾಣದಲ್ಲಿ ತಮ್ಮ ಪರೀಕ್ಷಾ ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕ ದಾಖಲಿಸಿ ಪಡೆಯಬಹುದಾಗಿದೆ.

ಪರೀಕ್ಷೆ-1, 2ರಿಂದ ಒಟ್ಟಾರೆ ರಿಸಲ್ಟ್‌77.96%ಕ್ಕೇರಿಕೆ

ಪರೀಕ್ಷೆ-1 ಮತ್ತು 2ರಿಂದ 2024-25ನೇ ಸಾಲಿನ ಒಟ್ಟಾರೆ ಫಲಿತಾಂಶ (ಹೊಸಬರು, ಪುನರಾವರ್ತಿತ ಸೇರಿ) ಶೇ.77.96ಕ್ಕೆ ಏರಿಕೆಯಾಗಿದೆ. ಅದೇ ರೀತಿ ತರಗತಿ ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ಶೇ.81.94ಕ್ಕೆ ಹೆಚ್ಚಳವಾಗಿದೆ ಎಂದು ಮಂಡಳಿ ತಿಳಿಸಿದೆ.

ಪರೀಕ್ಷೆ 1ಕ್ಕೆ ನೋಂದಾಯಿಸಿದ್ದ ಒಟ್ಟು 6.88 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ 4,76,256 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.69.16ರಷ್ಟು ಫಲಿತಾಂಶ ಬಂದಿತ್ತು. ಬಹುತೇಕ ಆಗ ಅನುತ್ತೀರ್ಣರಾಗಿದ್ದವರೇ ನೋಂದಾಯಿಸಿಕೊಂಡು ಈಗ ಪರೀಕ್ಷೆ 2 ಬರೆದಿದ್ದು 60,692 ಮಂದಿ(ಶೇ.31.27) ಪಾಸಾಗಿದ್ದಾರೆ. ಎರಡೂ ಪರೀಕ್ಷೆಗಳಿಂದ ಒಟ್ಟಾರೆ 5,36,948 ಮಂದಿ ತೇರ್ಗಡೆಯಾದಂತಾಗಿದ್ದು, ಇದರಿಂದ ಒಟ್ಟಾರೆ ಫಲಿತಾಂಶ ಶೇ.77.96ಕ್ಕೆ ಏರಿಕೆಯಾದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೊದಲ ಪರೀಕ್ಷೆಯಲ್ಲಿ ಶೇ.12ರಷ್ಟು ಕುಸಿದಿದ್ದ ಫಲಿತಾಂಶ ಈಗ ಶೇ.8ರಷ್ಟು ಸುಧಾರಿಸಿದ್ದು, ಕುಸಿತ ಪ್ರಮಾಣ ಶೇ.4ರಷ್ಟಾಗಿದೆ.

ಇನ್ನು ಪರೀಕ್ಷೆ ಬರೆದಿದ್ದ 1.94 ಲಕ್ಷ ವಿದ್ಯಾರ್ಥಿಗಳಲ್ಲಿ ಪರೀಕ್ಷೆ 1ರಲ್ಲಿ ಅನುತ್ತೀರ್ಣರಾಗಿದ್ದ ತರಗತಿ ವಿದ್ಯಾರ್ಥಿಗಳೇ (ಫ್ರೆಷರ್ಸ್‌) 1.53 ಲಕ್ಷದಷ್ಟಿದ್ದರು. ಇವರಲ್ಲಿ 54,168 ಮಂದಿ ತೇರ್ಗಡೆಹೊಂದಿದ್ದು, ಇದರೊಂದಿಗೆ ಹೊಸಬರಲ್ಲಿ ಶೇ.35.26 ರಷ್ಟು ಪಾಸಾದಂತಾಗಿದೆ. ಪರೀಕ್ಷೆ 1ರಲ್ಲಿ 4.68 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದರು. ಇದರೊಂದಿಗೆ ಪರೀಕ್ಷೆ1 ಮತ್ತು 2ರ ಒಟ್ಟಾರೆ 5.22 ಲಕ್ಷಕ್ಕೂ ಹೆಚ್ಚು ತರಗತಿ ವಿದ್ಯಾರ್ಥಿಗಳು ಪಾಸಾದಂತಾಗಿದ್ದು ಇವರ ಫಲಿತಾಂಶ ಶೇ.81.94ಕ್ಕೆ ಏರಿಕೆಯಾಗಿದೆ.

ಭೌತಶಾಸ್ತ್ರ ವಿಷಯ ಪರೀಕ್ಷೆ ಬರೆದಿದ್ದ 46,270 ಮಂದಿಯಲ್ಲಿ 26,518 ಮಂದಿಯ ಅಂಕಗಳು ಹೆಚ್ಚಳವಾಗಿದೆ. ರಸಾಯನಶಾಸ್ತ್ರ ವಿಷಯ ಪರೀಕ್ಷೆ ಬರೆದಿದ್ದ 44,947 ಮಂದಿಯಲ್ಲಿ 31,974 ಮಂದಿ ಅಂಕಗಳು ಸುಧಾರಿಸಿವೆ. ಅದೇ ರೀತಿ ಗಣಿತ ಪರೀಕ್ಷೆ ಬರೆದಿದ್ದ 45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 25 ಸಾವಿರ ವಿದ್ಯಾರ್ಥಿಗಳ ಅಂಕ ಏರಿಕೆಯಾಗಿದೆ.

ಜೀವಶಾಸ್ತ್ರ ಪರೀಕ್ಷೆ ಬರೆದಿದ್ದ 20 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ 9,492 ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಂಡಿದೆ. ಕನ್ನಡ ಭಾಷಾ ವಿಷಯದಲ್ಲಿ 4,243 ಮಂದಿಯಲ್ಲಿ 783 ಮಂದಿ ಅಂಕಗಳು ಮಾತ್ರ ಉತ್ತಮಗೊಂಡಿದೆ. ಪಿಯು ಫಲಿತಾಂಶದ ಶೇ.50ರಷ್ಟನ್ನು ಸಿಇಟಿ ರ್‍ಯಾಂಕಿಂಗ್‌ಗೆ ಪರಿಗಣಿಸುವುದರಿಂದ ಅಂಕ ಹೆಚ್ಚಳ ರ್‍ಯಾಂಕಿಂಗ್‌ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ.

ಸಂಯೋಜನೆವಾರು ಫಲಿತಾಂಶ: ಕಲಾ ವಿಭಾಗದಲ್ಲಿ 20,427(ಶೇ.25.38), ವಾಣಿಜ್ಯ ವಿಭಾಗದಲ್ಲಿ 21,052 (ಶೇ.35.74) ಮತ್ತು ವಿಜ್ಞಾನ ವಿಭಾಗದಲ್ಲಿ 19,213(ಶೇ.35.14) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Read more Articles on