ಹೆಬ್ಬಗೋಡಿ ಡಿಪೋದಲ್ಲಿ ಮೆಟ್ರೋ 3ನೇ ರೈಲು ಜೋಡಣೆ

Published : May 17, 2025, 09:36 AM IST
yellow line Namma Metro

ಸಾರಾಂಶ

ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ ತೀತಾಘರ್‌ ರೈಲ್‌ ಸಿಸ್ಟಂ ಪೂರೈಸಿರುವ ಮೂರನೇ ರೈಲನ್ನು ಇಲ್ಲಿನ ಹೆಬ್ಬಗೋಡಿ ಡಿಪೋದಲ್ಲಿ ಜೋಡಣೆ ಮಾಡಲಾಗುತ್ತಿದೆ.

 ಬೆಂಗಳೂರು : ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ ತೀತಾಘರ್‌ ರೈಲ್‌ ಸಿಸ್ಟಂ ಪೂರೈಸಿರುವ ಮೂರನೇ ರೈಲನ್ನು ಇಲ್ಲಿನ ಹೆಬ್ಬಗೋಡಿ ಡಿಪೋದಲ್ಲಿ ಜೋಡಣೆ ಮಾಡಲಾಗುತ್ತಿದೆ. ಬಹುತೇಕ ಮೇ ಅಂತ್ಯಕ್ಕೆ ಇದರ ತಪಾಸಣೆ, ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ಬಳಿಕ ಈ ಮಾರ್ಗ ಸಾರ್ವಜನಿಕರಿಗೆ ಮುಕ್ತಗೊಳ್ಳುವ ಸಾಧ್ಯತೆಯಿದೆ.

ಕಳೆದ ಏಫ್ರಿಲ್‌ ಹಾಗೂ ಈ ತಿಂಗಳ ಆರಂಭದಲ್ಲಿ ತಿತಾಘರ್‌ನಿಂದ ತಲಾ ಮೂರು ಬೋಗಿಗಳು ರಸ್ತೆ ಮಾರ್ಗದ ಮೂಲಕ ಬೆಂಗಳೂರು ತಲುಪಿದ್ದವು. ಇದಕ್ಕೂ ಮೊದಲು ಚೀನಾದಿಂದ ಬಂದ ಪ್ರೊಟೊಟೈಪ್‌ ರೈಲು ಹಾಗೂ ತಿತಾಘರ್‌ ಕಳಿಸಿದ ಒಂದು ರೈಲು ಹಳದಿ ಮಾರ್ಗಕ್ಕಿದೆ. ಎರಡು ಸೆಟ್‌ಗಳಲ್ಲಿ ಬಂದಿರುವ ಬೋಗಿಗಳನ್ನು ಜೋಡಿಸಿ ಬಳಿಕ ಸಿಎಂಆರ್‌ಎಸ್‌ ತಪಾಸಣೆ ಪ್ರಾಯೋಗಿಕ ಸಂಚಾರ ನಡೆಯಲಿದೆ.

ಒಟ್ಟಾರೆ 19.15ಕಿಮೀ ಈ ಮಾರ್ಗದ ಸಿವಿಲ್‌ ಕಾಮಗಾರಿ ಮುಗಿದು ಒಂದು ವರ್ಷವಾಗಿದೆ. ಆದರೆ, ರೈಲು ಇಲ್ಲದೆ ಸಂಚಾರ ಆರಂಭವಾಗಿಲ್ಲ. ಇಷ್ಟೊಂದು ವಿಳಂಬವಾದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಮೂರು ರೈಲುಗಳ ಮೂಲಕವೇ ಹಳದಿ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ನಿರ್ಧರಿಸಿದೆ.

ಈಗಾಗಲೇ ಬಿಎಂಆರ್‌ಸಿಎಲ್‌ನಿಂದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡವನ್ನು ( ದಕ್ಷಿಣ ) ತಪಾಸಣೆಗೆ ಆಹ್ವಾನಿಸಿದೆ. ತಂಡವು ಈ ತಿಂಗಳ ಅಂತ್ಯದಲ್ಲಿ ಆಗಮಿಸಿ ತಪಾಸಣೆ ನಡೆಸುವ ಸಾಧ್ಯತೆ ಹೆಚ್ಚಿದೆ. ಸಿಬಿಟಿಸಿ ಸಿಗ್ನಲ್‌ ವ್ಯವಸ್ಥೆಯ ರೈಲು ಇದಾದ ಕಾರಣ ವಿಶೇಷ ಪರಿಶೀಲನೆಗಳು ನಡೆಯಲಿವೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಇನ್ನು ಮೂರೇ ರೈಲುಗಳು ಇರುವ ಹಿನ್ನೆಲೆಯಲ್ಲಿ ಎಲ್ಲ 16 ನಿಲ್ದಾಣಗಳಲ್ಲಿ ನಿಲ್ಲುತ್ತ ರೈಲು ಸಾಗಿದರೆ ವಿಳಂಬ ಆಗುವ ಸಾಧ್ಯತೆ ಇದೆ. ಹೀಗಾಗಿ ನಿಗದಿತವಾಗಿ ಆರ್‌.ವಿ.ರಸ್ತೆ, ಜಯದೇವ, ಸಿಲ್ಕ್ ಬೋರ್ಡ್, ಇನ್ಫೋಸಿಸ್‌, ಹೆಬ್ಬಗೋಡಿ, ಬೊಮ್ಮಸಂದ್ರ ನಿಲ್ದಾಣದಲ್ಲಿ ಮಾತ್ರ ರೈಲುಗಳನ್ನು ನಿಲ್ಲಿಸುವ ಚಿಂತನೆ ಇದೆ. ಇದರಿಂದ 15-20 ನಿಮಿಷಕ್ಕೆ ಒಮ್ಮೆ ರೈಲು ಸಂಚರಿಸಬಹುದು ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

PREV
Read more Articles on

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ