ಬೆಂಗಳೂರು : ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್)ವನ್ನು ಟಿಪ್ಪು ಸುಲ್ತಾನ್ ಕಟ್ಟಿಸಿದ್ದು ಎಂದು ನಾನೆಲ್ಲೂ ಹೇಳಿಲ್ಲ. ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ನನ್ನ ಹೇಳಿಕೆಯನ್ನು ತಿರುಚಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ತುಂಬಾ ದೊಡ್ಡದಿದೆ. ಅವರೇ ಕೆಆರ್‌ಎಸ್ ಅಣೆಕಟ್ಟನ್ನೂ ನಿರ್ಮಿಸಿದ್ದರು. ಟಿಪ್ಪು ಸುಲ್ತಾನ್ ಅವರು ಕಟ್ಟಿಸಿದ್ದರು ಎಂದು ನಾನೆಲ್ಲೂ ಹೇಳಿಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1911ರಲ್ಲಿ ಕೆಆರ್‌ಎಸ್ ನಿರ್ಮಾಣ ಕಾರ್ಯ ಶುರು ಮಾಡಿದ್ದರು. ಆ ವೇಳೆ ಅಲ್ಲಿ ಒಂದು ಶಿಲಾಶಾಸನ ಪತ್ತೆಯಾಗಿತ್ತು. 1794ನೇ ಇಸವಿಯ ಶಿಲಾಶಾಸನದಲ್ಲಿ ಪರ್ಷಿಯನ್ ಬರಹ ಇತ್ತು. ಇದನ್ನು ಕನ್ನಡ ಮತ್ತು ಇಂಗ್ಲೀಷ್‌ಗೆ ತರ್ಜುಮೆ ಮಾಡಿ ಈಗಲೂ ಅಲ್ಲೇ ಇಡಲಾಗಿದೆ. ಇದರಿಂದ ಟಿಪ್ಪು ಸುಲ್ತಾನ್ ಅವರಿಗೂ ಕಾವೇರಿ ನೀರನ್ನು ನಿಲ್ಲಿಸಿ ರೈತರ ಉಪಯೋಗಕ್ಕೆ ಏನಾದರೂ ಮಾಡಬೇಕು ಎಂಬ ಯೋಚನೆ ಇತ್ತು ಎಂಬುದು ಗೊತ್ತಾಗುತ್ತದೆ. ಅದನ್ನಷ್ಟೇ ನಾನು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಟಿಪ್ಪು ಹೆಸರಿನ ಅಡಿಗಲ್ಲು ಪತ್ತೆಯಾಗಿದ್ದರಿಂದ ಟಿಪ್ಪು ಸುಲ್ತಾನ್ ಅವರಿಗಿಂತ ಮೊದಲೇ ಕಾವೇರಿ ನೀರನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳುವ ಉದ್ದೇಶ ಇದ್ದಿರಬಹುದು ಎಂದಿದ್ದೇನೆ. ಇದನ್ನು ಸಂಶೋಧಕರು, ಇತಿಹಾಸಕಾರರು ಹೇಳಬೇಕು. ಆದರೆ ಕೆಆರ್‌ಎಸ್‌ನಂತಹ ದೊಡ್ಡ ಜಲಾಶಯ ನಿರ್ಮಿಸಲು ಟಿಪ್ಪು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಈ ವಿನ್ಯಾಸವನ್ನು ವಿಶ್ವೇಶ್ವರಯ್ಯ ಹಾಗೂ ಎಂಜಿನಿಯರ್ ತಂಡ ಮಾಡಿದ್ದು. ಇಂತಹ ದೊಡ್ಡ ಯೋಜನೆಯ ಪರಿಕಲ್ಪನೆ ಟಿಪ್ಪುಗೆ ಇರಲಿಕ್ಕಿಲ್ಲ. ಇಂತಹ ಎಂಜಿನಿಯರಿಂಗ್ ಪರಿಕಲ್ಪನೆಯೂ ಆ ಕಾಲದಲ್ಲಿ ಇರಲಿಲ್ಲ ಎನಿಸುತ್ತದೆ ಎಂದು ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.