ಸಚಿವ ಲಾಡ್‌ ತಂಡದಿಂದ ಕನ್ನಡಿಗರಿಗೆ ನೆರವು - ಕಾಶ್ಮೀರದಲ್ಲಿ 200ಕ್ಕೂ ಹೆಚ್ಚು ರಾಜ್ಯದ ಪ್ರವಾಸಿಗರು

ಸಾರಾಂಶ

ಪಹಲ್ಗಾಂ ಉಗ್ರರ ದಾಳಿ ಘಟನೆ ಬಳಿಕ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರ ವಾಪಸ್‌ ಕರೆತರಲು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ನೇತೃತ್ವದ ಸಚಿವರ ತಂಡ ಮಂಗಳವಾರದಿಂದಲೇ ಕನ್ನಡಿಗರನ್ನು ಸಂಪರ್ಕಿಸಿ, ಅವರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯದಲ್ಲಿ ನಿರತವಾಗಿದೆ.

ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿ ಘಟನೆ ಬಳಿಕ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರ ವಾಪಸ್‌ ಕರೆತರಲು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ನೇತೃತ್ವದ ಸಚಿವರ ತಂಡ ಮಂಗಳವಾರದಿಂದಲೇ ಕನ್ನಡಿಗರನ್ನು ಸಂಪರ್ಕಿಸಿ, ಅವರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯದಲ್ಲಿ ನಿರತವಾಗಿದೆ.

ಸಂತ್ರಸ್ತರ ನೆರವಿವಾಗಿ ಕರ್ನಾಟಕ ಸರ್ಕಾರ ಆರಂಭಿಸಿರುವ ಸಹಾಯವಾಣಿಗೆ ಸುಮಾರು 20ಕ್ಕೂ ಹೆಚ್ಚು ಮಂದಿ ಕರೆ ಮಾಡಿದ್ದು ತಮ್ಮ ಕುಟುಂಬಗಳಿಂದ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಒಟ್ಟು ಸದಸ್ಯರ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಪ್ರಕಾರ, ಸುಮಾರು 200 ಮಂದಿ ಕರ್ನಾಟಕ ಮೂಲದ ಪ್ರವಾಸಿಗರು ತೆರಳಿರುವ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ. ಹೋಟೆಲ್‌ ಮಸ್ಕಾನ್‌ನಲ್ಲಿ ಅತಿ ಹೆಚ್ಚು 30 ಮಂದಿ ಉಳಿದಿದ್ದಾರೆ. ಇತರೆ ಹೋಟೆಲ್‌ಗಳಲ್ಲಿ ಉಳಿದವರು ತಂಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಕನ್ನಡಿಗರ ರಕ್ಷಣೆಗಾಗಿ ಕಾಶ್ಮೀರ ತಲುಪಿದ್ದ ಸಚಿವರ ನೇತೃತ್ವದ ತಂಡ ಕೇಂದ್ರ ಹಾಗೂ ಸ್ಥಳೀಯ ಸರ್ಕಾರಗಳಿಂದ ಕರ್ನಾಟಕದ ಪ್ರವಾಸಿಗರ ಬಗ್ಗೆ ವಿವರಣೆ ಪಡೆದು ವಿವಿಧ ಹೋಟೆಲ್‌, ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಅವರ ಸುರಕ್ಷತೆ, ಮೂಲಸೌಲಭ್ಯ, ಆಹಾರ ವ್ಯವಸ್ಥೆಗಳ ಬಗ್ಗೆ ವಿಚಾರಿಸಿದರು. ತಮ್ಮೆಲ್ಲರನ್ನೂ ಕರ್ನಾಟಕ್ಕೆ ವಾಪಸ್‌ ಕರೆದೊಯ್ಯಲು ಅಗತ್ಯ ವ್ಯವಸ್ಥೆ ಮಾಡುತ್ತಿದ್ದು ಆತಂಕ ಪಡದಂತೆ ಅಭಯ ನೀಡಿದರು.

ಮೃತರ ಸಂಬಂಧಿಕರಿಗೆ ನೆರವಾದ ಸಚಿವರ ತಂಡ

ಸಚಿವ ಸಂತೋಷ್ ಲಾಡ್‌ ನೇತೃತ್ವದ ತಂಡ ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ರಾಜ್ಯ ಸರ್ಕಾರದ ಅಧಿಕಾರಿಗಳ ಸಹಕಾರದೊಂದಿಗೆ ದಾಳಿಯಿಂದ ಮೃತಪಟ್ಟವರ ಮೃತದೇಹಗಳನ್ನು ಇರಿಸಿರುವ ಶ್ರೀನಗರದ ಎಸ್‌ಎಂಎಚ್‌ಎಸ್‌ ಆಸ್ಪತ್ರೆ ಸೇರಿ ಇನ್ನಿತರೆ ಸ್ಥಳಗಳಿಗೆ ತೆರಳಿ ಮೃತದೇಹ ಗುರುತಿಸಲು ಸಂಬಂಧಿಕರಿಗೆ ನೆರವಾದರು. ಮೃತದೇಹಗಳಿಗೆ ನಮನ ಸಲ್ಲಿಸಿ ಸಂತಾಪ ಸೂಚಿಸಿದರು. 

ಮೃತರ ಕುಟುಂಬದವರು ಹಾಗೂ ಮಕ್ಕಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಆದಷ್ಟು ಬೇಗ ಮೃತದೇಹಗಳನ್ನು ರಾಜ್ಯಕ್ಕೆ ಕೊಡೊಯ್ಯಲು ಸ್ಥಳೀಯ ಸರ್ಕಾರದ ನೇರವಿನೊಂದಿಗೆ ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು. ಜೊತೆಗೆ ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಚಿವರು, ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಚಿಕಿತ್ಸೆಗೆ ಕ್ರಮ ವಹಿಸಿದರು.

Share this article