ಬಾಲಕಿಯರ ಶೈಕ್ಷಣಿಕ ಪ್ರಗತಿಗಾಗಿ ‘ಗೆಳತಿಯರೊಂದಿಗೆ ಹಾರೋಣ’! - ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ

ಸಾರಾಂಶ

ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಸ್ವತಾಲೀಮು ಫೌಂಡೇಷನ್‌ ಸಹಯೋಗದಲ್ಲಿ ಕಸ್ತೂರಬಾ ಗಾಂಧಿ ಕಲಿಕಾ ವಿದ್ಯಾಲಯಗಳು   ಮತ್ತು ಕರ್ನಾಟಕ ಕಸ್ತೂರಬಾ ಗಾಂಧಿ ಕಲಿಕಾ ವಿದ್ಯಾಲಯಗಳ  ಬಾಲಕಿಯರ ಶೈಕ್ಷಣಿಕ ಪ್ರಗತಿಗಾಗಿ ರೂಪಿಸಿರುವ ‘ಗೆಳತಿಯರೊಂದಿಗೆ ಹಾರೋಣ’ ಕಾರ್ಯಕ್ರಮಕ್ಕೆ   ಸಚಿವ ಮಧು ಬಂಗಾರಪ್ಪ   ಚಾಲನೆ ನೀಡಿದರು.

ಬೆಂಗಳೂರು : ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಸ್ವತಾಲೀಮು ಫೌಂಡೇಷನ್‌ ಸಹಯೋಗದಲ್ಲಿ ರಾಜ್ಯದ ಕಸ್ತೂರಬಾ ಗಾಂಧಿ ಕಲಿಕಾ ವಿದ್ಯಾಲಯಗಳು (ಕೆಜಿಬಿವಿ) ಮತ್ತು ಕರ್ನಾಟಕ ಕಸ್ತೂರಬಾ ಗಾಂಧಿ ಕಲಿಕಾ ವಿದ್ಯಾಲಯಗಳ(ಕೆಕೆಜಿಬಿವಿ) ಬಾಲಕಿಯರ ಶೈಕ್ಷಣಿಕ ಪ್ರಗತಿಗಾಗಿ ರೂಪಿಸಿರುವ ‘ಗೆಳತಿಯರೊಂದಿಗೆ ಹಾರೋಣ’ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಬುಧವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಇದೊಂದು ಮೊಬೈಲ್‌ ಆಧಾರಿತ ಕಾರ್ಯಕ್ರಮ. ಈ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳ ಕಲಿಕಾ ಪ್ರಗತಿ, ಬೆಳವಣಿಗೆ ಕುರಿತು ಕಾಲ್‌ ಮೂಲಕ (ಇಂಟರಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಂ-ಐವಿಆರ್‌ಎಸ್‌) ಪೋಷಕರುಗಳಿಗೆ ವಾರಕ್ಕೊಮ್ಮೆ ಮಾಹಿತಿ ನೀಡಲಾಗುತ್ತದೆ. ಸ್ವತಾಲೀಮು ಫೌಂಡೇಷನ್‌ನವರು ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ 135 ಕೆಜಿಬಿವಿ ಮತ್ತು ಕೆಕೆಜಿಬಿವಿ ಶಾಲೆಗಳ 10,300 ವಿದ್ಯಾರ್ಥಿಗಳಿಗೆ ಅನುಷ್ಠಾನ ಮಾಡಲಾಗುತ್ತಿದೆ. 4700 ಪೋಷಕರು ಮತ್ತು 135 ವಾರ್ಡನ್‌ಗಳು ಇದರಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದರು.

ಶಾಲೆ ಮತ್ತು ಪೋಷಕರ ನಡುವಿನ ಸಂಬಂಧ ಬಲಪಡಿಸುವುದು. ತಮ್ಮ ಹೆಣ್ಣು ಮಕ್ಕಳ ಶಿಕ್ಷಣ, ಆಕಾಂಕ್ಷೆಗಳ ಬಗ್ಗೆ ಪೋಷಕರಿಗೆ ಮಾಹಿತಿ ಪಡೆಯುವಂತೆ ಮಾಡುವುದು. ಶಾಲೆ ಚಟುವಟಿಕೆಗಳು, ಶೈಕ್ಷಣಿಕ ಪ್ರಗತಿ ಮತ್ತು ಭವಿಷ್ಯದ ಅವಕಾಶಗಳನ್ನು ಕುರಿತು ಮಾಹಿತಿ ಹಂಚಿಕೊಳ್ಳಲಾಗುವುದು. ಪೋಷಕರು ತಮ್ಮ ಮೊಬೈಲ್‌ನಲ್ಲಿ 8047190143 ಸಂಖ್ಯೆಯನ್ನು ಸೇವ್‌ ಮಾಡಿಕೊಳ್ಳಬೇಕು. ಈ ನಂಬರ್‌ನಿಂದ ಕರೆ ಬರಲಿದ್ದು, ಕರೆ ಸ್ವೀಕರಿಸಿ ತಮ್ಮ ಮಕ್ಕಳ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ಸ್ವತಾಲೀಮು ಫೌಂಡೇಷನ್‌ನ ಪ್ರತಿನಿಧಿಗಳು ವಿವರಿಸಿದರು.

ಇದೇ ವೇಳೆ ಸಚಿವರು ಈ ಶಾಲೆಗಳ ಬಾಲಕಿಯರಿಗೆ ಇಂಗ್ಲಿಷ್‌ ಬ್ರಿಡ್ಜ್‌ ಕೋರ್ಸ್‌ ಮತ್ತು ಕೌಶಲ್ಯಗಳ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌, ಆಯುಕ್ತ ತ್ರಿಲೋಕ್‌ ಚಂದ್ರ ಉಪಸ್ಥಿತರಿದ್ದರು.

ಟ್ರೋಲ್‌ಗೆ ತಲೆಕೆಡಿಸಿಕೊಳ್ಳುವುದಿಲ್ಲ: ಮಧು

‘ಕೆಜಿಬಿವಿ ಬಾಲಕಿಯರ ಸಬಲೀಕರಣ ಕಾರ್ಯಕ್ರಮಕ್ಕೆ ‘ಗೆಳತಿಯರೊಂದಿಗೆ ಹಾರೋಣ’ ಎಂದು ಹೆಸರಿಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದೆ, ಈ ಹೆಸರು ಹೇಗೆ ತರಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಜಿಬಿವಿಗಳಲ್ಲಿ ಹೆಣ್ಣು ಮಕ್ಕಳೇ ಇರುವುದರಿಂದ ಆ ಹೆಸರು ನೀಡಲಾಗಿದೆ. ಟ್ರೋಲ್‌ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಮಕ್ಕಳಿಗೆ ಯಾವ ಕಾರ್ಯಕ್ರಮ ನೀಡಿದ್ದೇವೆ ಎನ್ನುವುದು ಮುಖ್ಯ ಅಷ್ಟೆ ಎಂದರು.

ನಂತರ ಈ ಬಗ್ಗೆ ಫೌಂಡೇಷನ್‌ನ ಪ್ರತಿನಿಧಿಗಳು ಸ್ಪಷ್ಟನೆ ನೀಡಿ, ರಾಷ್ಟ್ರಮಟ್ಟದಲ್ಲಿ ‘ಸಹೇಲಿ ಕಿ ಉಡಾನ್‌-ಪ್ಲೈಯಿಂಗ್‌ ವಿತ್‌ ಫ್ರೆಂಡ್ಸ್‌’ ಎಂಬ ಹೆಸರು ಈ ಕಾರ್ಯಕ್ರಮಕ್ಕೆ ಇದೆ. ಇದನ್ನು ಕನ್ನಡಕ್ಕೆ ತರುವಾಗ ಗೆಳತಿಯರೊಂದಿಗೆ ಹಾರೋಣ, ಗೆಳತಿಯರೊಂದಿಗೆ ನಲಿಯೋಣ, ಆಡೋಣ ಎಂಬ ಹೆಸರು ಚರ್ಚೆ ಆಯಿತು. ಕೊನೆಗೆ ವಿದ್ಯಾರ್ಥಿನಿಯರೇ ಗೆಳತಿಯರೊಂದಿಗೆ ಹಾರೋಣ ಎಂಬ ಹೆಸರು ಆಯ್ಕೆ ಮಾಡಿದರು ಎಂದು ಹೇಳಿದರು.

Share this article