ಸೈಕಲ್‌ನಲ್ಲಿ ತಿರುಪತಿಗೆ ಶಾಸಕ ಸುರೇಶ್‌

Published : Jul 12, 2026, 07:52 AM IST
S Suresh Kumar

ಸಾರಾಂಶ

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ತಮ್ಮ 70ನೇ ವಯಸ್ಸಿನಲ್ಲೂ 14 ಗಂಟೆ 10 ನಿಮಿಷ ಸೈಕಲ್‌ ತುಳಿದು 265 ಕಿ.ಮೀ. ದೂರ ಕ್ರಮಿಸಿ ಯಶಸ್ವಿಯಾಗಿ ತಿರುಪತಿ ಪ್ರವಾಸ ಮಾಡಿದ್ದಾರೆ.

 ಬೆಂಗಳೂರು :  ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ತಮ್ಮ 70ನೇ ವಯಸ್ಸಿನಲ್ಲೂ 14 ಗಂಟೆ 10 ನಿಮಿಷ ಸೈಕಲ್‌ ತುಳಿದು 265 ಕಿ.ಮೀ. ದೂರ ಕ್ರಮಿಸಿ ಯಶಸ್ವಿಯಾಗಿ ತಿರುಪತಿ ಪ್ರವಾಸ ಮಾಡಿದ್ದಾರೆ.

ಮೂರನೇ ಬಾರಿಗೆ ತಿರುಪತಿಗೆ ಯಶಸ್ವಿ ಸೈಕ್ಲಿಂಗ್‌

ರಾಜಾಜಿನಗರದ ‘ಪೆಡಲ್‌ ಪವರ್‌’ ಸೈಕ್ಲಿಂಗ್‌ ತಂಡದೊಂದಿಗೆ ಈ ಪ್ರವಾಸ ಮಾಡಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ತಿರುಪತಿಗೆ ಯಶಸ್ವಿ ಸೈಕ್ಲಿಂಗ್‌ ಪ್ರವಾಸ ಮಾಡಿದ್ದಾರೆ. ಈ ಯಶಸ್ವಿ ಸೈಕಲ್‌ ಯಾತ್ರೆ ಬಗ್ಗೆ ಖದ್ದು ಎಸ್.ಸುರೇಶ್‌ ಕುಮಾರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಗುರುವಾರ ಮುಂಜಾನೆ 4.30ಕ್ಕೆ ಬೆಂಗಳೂರಿನ ಬಸವೇಶ್ವರನಗರದಿಂದ ನಮ್ಮ ಸೈಕ್ಲಿಸ್ಟ್‌ಗಳ ತಂಡ ತಿರುಪತಿಯತ್ತ ಹೊರಟಿತು. ನಾನೂ ಸೇರಿ ತಂಡದ ಸದಸ್ಯರಾದ ಬಾಲು, ಮಹೇಶ್‌, ದಿವಾಕರ್‌, ಮೋಹನ್‌, ಅಯ್ಯಪ್ಪ, ಶಶಾಂಕ್‌, ಪ್ರಸನ್ನ, ಗಿರೀಶ್‌, ರಾಘವ್‌ ಮತ್ತು ದಿನೇಶ್‌ ಈ ಸೈಕ್ಲಿಂಗ್‌ ಪ್ರವಾಸದಲ್ಲಿ ಭಾಗವಹಿಸಿದ್ದರು. ಈ ನಡುವೆ ಗುರುವಾರ ರಾತ್ರಿ ಮದನಪಲ್ಲಿಯಲ್ಲಿ ವಾಸ್ತವ್ಯ ಹೂಡಿದ್ದೆವು.

ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ತಿರುಪತಿ ತಲುಪಿತು

ಬಸವೇಶ್ವರನಗರ, ರಾಜಾಜಿನಗರ ಒಂದನೇ ಬ್ಲಾಕ್, ಯಶವಂತಪುರ, ಬಿಇಎಲ್‌ ವೃತ್ತ, ಅವಲಹಳ್ಳಿ ಅರಣ್ಯ ಪ್ರದೇಶ, ರಾಜಾನುಕುಂಟೆ, ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ, ದೇವನಹಳ್ಳಿ, ವಿಜಯಪುರ, ಕೈವಾರ, ಮದನಪಲ್ಲಿ, ಪೀಲೇರು ಮಾರ್ಗವಾಗಿ ಸಾಗಿ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ತಿರುಪತಿ ತಲುಪಿತು. ಶನಿವಾರ ಮುಂಜಾನೆ ತಿರುಮಲ ಪುಣ್ಯಕ್ಷೇತ್ರದಲ್ಲಿ ವೆಂಕಟರಮಣನ ದರ್ಶನ ಪಡೆದವು ಎಂದು ಸೈಕಲ್‌ ಯಾತ್ರೆ ಬಗ್ಗೆ ಮಾಹಿತಿ ನೀಡಿದ್ದಾರೆ.

ದೇವಾಲಯದಲ್ಲಿ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ, ರಾಜ್ಯದ ನಿವೃತ್ತ ಎಡಿಜಿಪಿ ಹಾಗೂ ನಮ್ಮ ಪಕ್ಷದ ಪ್ರಮುಖರಾದ ಭಾಸ್ಕರ್‌ ರಾವ್‌ ಅವರ ಒಡನಾಟ ಲಭಿಸಿತು. ನಮ್ಮ ಬೆಳಗಾವಿ ಮೂಲದ ಆಂಧ್ರಪ್ರದೇಶದ ಐಎಎಸ್‌ ಅಧಿಕಾರಿ, ಆಂಧ್ರಪ್ರದೇಶದ ಲೋಕಸೇವಾ ಆಯೋಗದ ಕಾರ್ಯದರ್ಶಿ ರವಿ ಪಟ್ಟಣಶೆಟ್ಟಿ ಸಹ ಭೇಟಿಯಾದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ನಮ್ಮ ತಂಡವು 2013ರಲ್ಲಿ ತಿರುಪತಿಗೆ ಪಾದಯಾತ್ರೆ ಮಾಡಿತ್ತು. ಸುಮಾರು ಏಳು ದಿನಗಳ ಪಾದಯಾತ್ರೆ ಮಾಡಿ ತಿರುಪತಿ ಕ್ಷೇತ್ರ ತಲುಪಿದ್ದೆವು. ಇದಾದ ಬಳಿಕ 2024, 2025, 2026 ಸತತ ಮೂರು ವರ್ಷ ಸೈಕಲ್‌ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಇದರಿಂದ ನಮಗೆ ಲವಲವಿಕೆ, ಉತ್ಸಾಹದ ಜೊತೆಗೆ ಸಂತೋಷವಾಗಿದೆ. ಈ ಸೈಕಲ್‌ ಪ್ರಯಾಣ ನಮ್ಮ ತಂಡಕ್ಕೆ ಇನ್ನಷ್ಟು ಹುಮ್ಮಸ್ಸು ತಂದಿದೆ. ಇದೇ ವರ್ಷ ವಿವಿಧ ಸ್ಥಳಗಳಿಗೆ ಸೈಕಲ್‌ ಯಾತ್ರೆ ಮಾಡುವ ಯೋಜನೆ ಇದೆ ಎಂದು ಎಸ್.ಸುರೇಶ್‌ ಕುಮಾರ್‌ ಹೇಳಿಕೊಂಡಿದ್ದಾರೆ. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಚಿಲ್ಲರೆ ನೀಡದ್ದಕ್ಕೆ ಬಸ್‌ನಿಂದ ಸಾರಿಗೆ ಸಚಿವರನ್ನೇ ಕೆಳಗೆ ಇಳಿಸಿದ ಕಂಡಕ್ಟರ್
ಕೆ.ಆರ್.ಮಾರುಕಟ್ಟೆ ಅಕ್ರಮ ಮಳಿಗೆ ತೆರವು ಕಾರ್ಯಕ್ಕೆ ತಾತ್ಕಾಲಿಕ ತಡೆ