ಎಂಎಲ್ಸಿ ರಾಜೇಂದ್ರ ಹತ್ಯೆ ಸುಪಾರಿ ಪ್ರಕರಣ ದಿನಕ್ಕೊಂದು ತಿರುವು : 1ನೇ ಆರೋಪಿ ಶರಣು

ಸಾರಾಂಶ

ಎಂಎಲ್ಸಿ ರಾಜೇಂದ್ರ ಹತ್ಯೆ ಸುಪಾರಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಬೆಳವಣಿಗೆಯೊಂದಲ್ಲಿ

 ತುಮಕೂರು : ಎಂಎಲ್ಸಿ ರಾಜೇಂದ್ರ ಹತ್ಯೆ ಸುಪಾರಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಬೆಳವಣಿಗೆಯೊಂದಲ್ಲಿ

ಪ್ರಕರಣದ 1ನೇ ಆರೋಪಿ, ರೌಡೀ ಶೀಟರ್ ಸೋಮ ಮತ್ತು ಎ-3 ಆರೋಪಿ ಅಮಿತ್‌ ಬುಧವಾರ ರಾತ್ರಿ ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಬಂದು‌ ಶರಣಾಗಿದ್ದಾರೆ. ಈ ಶರಣಾಗತಿಯೊಂದಾಗಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದ್ದು, ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅನಂತರ ಇವರಿಬ್ಬರನ್ನು ಪೊಲೀಸರು ಮೆಡಿಕಲ್ ಟೆಸ್ಟ್ ಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋದಲ್ಲಿ ಮಾತನಾಡಿದ್ದ ಪುಷ್ಪಾ, ಆರೋಪಿ ಗುಂಡನ ಸ್ನೇಹಿತೆ ಯಶೋಧ ಹಾಗೂ ಪ್ರಕರಣದ 5ನೇ ಆರೋಪಿ ಯತೀಶ್‌ನನ್ನು ತನಿಖಾ ತಂಡ ಬಂಧಿಸಿದೆ. ತಲೆಮರೆಸಿಕೊಂಡಿರುವ ಎ- 2 ಆರೋಪಿ ಭರತ್, ಎ- 4 ಆರೋಪಿ ಗುಂಡನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಏತನ್ಮಧ್ಯೆ ಪ್ರಕರಣದ ಎ1 ಆರೋಪಿ ಸೋಮನ ಸ್ನೇಹಿತ ಕಾರ್ಪೆಂಟರ್ ಮನುನನ್ನು ತುಮಕೂರಿನ ಉಪ್ಪಾರಹಳ್ಳಿ ಮನೆಯಲ್ಲಿ ಮಂಗಳವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎ1 ಆರೋಪಿ ಸೋಮ, ಮನು ಬ್ಯಾಂಕ್ ಖಾತೆ ಮೂಲಕ ವ್ಯವಹಾರ ನಡೆಸುತ್ತಿದ್ದನು. 70 ಲಕ್ಷ ರು. ಡೀಲ್‌ನ ಮುಂಗಡ 5 ಲಕ್ಷ ರು. ಕಾರ್ಪೆಂಟರ್ ಮನು ಖಾತೆಗೆ ಜಮಾ ಆಗಿತ್ತು ಎಂದು ಆಡಿಯೋದಲ್ಲಿ ಪುಷ್ಪಾ ಪ್ರಸ್ತಾಪ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಮನು ಖಾತೆ ಹಾಗೂ ಸೋಮನ ಖಾತೆ ಫ್ರೀಜ್ ಮಾಡಲಾಗಿತ್ತು. ಈ ಬಗ್ಗೆ ಪೊಲೀಸರು ಮನುನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಸೋಮನಿಂದ ದೂರವಾಗಿದ್ದ ಪುಷ್ಪಾ

ರೌಡಿಶೀಟರ್ ಸೋಮನ ಆಪ್ತಳಾಗಿದ್ದ ಪುಷ್ಪಾ ಎರಡು ವರ್ಷದ ಹಿಂದೆ ಸೋಮನಿಂದ ದೂರವಾಗಿದ್ದಳು. ಹಣದ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪವಾಗಿತ್ತು ಎನ್ನಲಾಗಿದೆ. ಪುಷ್ಪಾಳಿಗೆ ಸಂಬಂಧಿಸಿದ ಆಸ್ತಿ ಪತ್ರಗಳನ್ನು ಸೋಮ ತನ್ನ ಬಳಿ ಇರಿಸಿಕೊಂಡಿದ್ದ. ಹಣ ಪಡೆದು ವಾಪಸ್ ಕೊಡದಿದ್ದಕ್ಕೆ ಸೋಮನ ಮೇಲೆ ಪುಷ್ಪಾ ಮುನಿಸಿಕೊಂಡಿದ್ದಳು. ಎರಡು ವರ್ಷದ ಹಿಂದೆ ನಡೆದ ದರೋಡೆ ಪ್ರಕರಣದ ಬಳಿಕ ದೂರವಾಗಿದ್ದರು. ಸೋಮನ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಸುಪಾರಿ ಮಾಹಿತಿಯನ್ನು ರಾಕಿಗೆ ಪುಷ್ಪಾ ಹೇಳಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತನಿಖಾ ತಂಡದಿಂದ ಮುಂಜುನಾಥ್‌ ಔಟ್‌

ಈ ಎಲ್ಲದರ ಮಧ್ಯೆ ಮಧುಗಿರಿ ಡಿವೈಎಸ್‌ಪಿ ಮಂಜುನಾಥ್ ಅವರನ್ನು ತನಿಖಾ ತಂಡದಿಂದ ಹೊರಹಾಕಿದ್ದು, ಮಾಗಡಿ ಡಿವೈಎಸ್ ಪಿ ಪ್ರವೀಣ್ ಗೆ ತನಿಖಾ ತಂಡದ ಹೊಣೆ ನೀಡಲಾಗಿದೆ. ಶಿರಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರಾಘವೇಂದ್ರ, ಕ್ಯಾತಸಂದ್ರ ಠಾಣೆ ಪಿಎಸ್ಐ ಚೇತನ್ ಕುಮಾರ್ ಬದಲಿಗೆ ಕ್ಯಾತಸಂದ್ರ ಠಾಣೆ ಸಿಪಿಐ ರಾಮ್ ಪ್ರಸಾದ್ ಹಾಗೂ ಎಸ್‌ಪಿ ಕಚೇರಿ ಇನ್ ಸ್ಪೆಕ್ಟರ್ ಅವಿನಾಶ್ ತನಿಖಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Share this article