ಬೆಂಗಳೂರು : ಕೇಂದ್ರ ಕಾರಾಗೃಹದಲ್ಲಿ ಉಗ್ರರಿಗೆ ನೆರವು ನೀಡಿದ ಆರೋಪದಡಿ ಬಂಧಿಸಲಾಗಿರುವ ಮೂವರು ಆರೋಪಿಗಳ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.
ಬಂಧಿತ ಮನೋ ವೈದ್ಯ ನಾಗರಾಜ್ ಜೈಲಿನಲ್ಲಿ ಉಗ್ರರು ಮಾತ್ರವಲ್ಲದೆ ಹೈಪ್ರೊಫೈಲ್ ಪ್ರಕರಣಗಳ ಆರೋಪಿಗಳಿಗೂ ಮೊಬೈಲ್ ಕೊಟ್ಟು ಹಣ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೈಲಿನಲ್ಲಿ ಚಿಕಿತ್ಸೆ ನೆಪದಲ್ಲಿ ಆರೋಪಿಗಳನ್ನು ಸಂಪರ್ಕಿಸುತ್ತಿದ್ದ ವೈದ್ಯ ನಾಗರಾಜ್ ಹಣ ಪಡೆದು ಕೀ ಪ್ಯಾಡ್, ಆ್ಯಂಡ್ರಾಯ್ಡ್ ಮೊಬೈಲ್‌ಗಳನ್ನು ನೀಡುತ್ತಿದ್ದ. ಕೆಲ ಬಾರಿ ಆರೋಪಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಮೊಬೈಲ್ ಕೊಡುತ್ತಿದ್ದ. ಮಾತನಾಡಿದ ಸಮಯದ ಆಧಾರದ ಮೇಲೆ ಅವರಿಂದ ಹಣ ವಸೂಲಿ ಮಾಡುತ್ತಿದ್ದ. ಹೀಗೆ ಡಾ। ನಾಗರಾಜ್ ಸುಮಾರು 250ಕ್ಕೂ ಅಧಿಕ ಮೊಬೈಲ್‌ಗಳನ್ನು ಜೈಲಿನಲ್ಲಿ ಆರೋಪಿಗಳಿಗೆ ಪೂರೈಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಉಗ್ರರು, ಶಂಕಿತ ಉಗ್ರರು ಹಾಗೂ ಇತರೆ ಪ್ರಕರಣಗಳ ಆರೋಪಿಗಳಿಗೆ ಮೊಬೈಲ್ ಪೂರೈಕೆ ಮಾಡಲು ತನ್ನ ಸಹಾಯಕಿ ಪವಿತ್ರಾಳನ್ನು ಬಳಸಿಕೊಂಡಿರುವುದೂ ತನಿಖೆಯಲ್ಲಿ ಬಯಲಾಗಿದೆ. ಈ ಮೊಬೈಲ್‌ಗಳಲ್ಲಿ ಯಾರೊಂದಿಗೆ ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಎನ್‌ಐಎ ಅಧಿಕಾರಿಗಳು ಬಂಧಿತ ಆರೋಪಿಗಳ ಇಂಟರ್‌ನೆಟ್ ಪ್ರೋಟೋಕಾಲ್ ಡಿಟೇಲ್ಸ್ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಬಂಧಿತರ ಖಾತೆಗಳಿಗೆ ಹಣ ಜಮೆ
ಬಂಧಿತ ಮೂವರು ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರು. ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಮನೋವೈದ್ಯ ಡಾ। ನಾಗರಾಜ್, ಎಎಸ್‌ಐ ಚಾಂದ್ ಪಾಷಾ, ಶಂಕಿತ ಉಗ್ರನ ತಾಯಿ ನಫೀಸಾ ಫಾತಿಮಾ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿರುವ ಎನ್‌ಐಎ ಅಧಿಕಾರಿಗಳು, ಲಕ್ಷಾಂತರ ರು. ವಹಿವಾಟು ನಡೆದಿರುವುದು ಪತ್ತೆ ಹಚ್ಚಿದ್ದಾರೆ.
ಮೂವರು ಆರೋಪಿಗಳು ಆನ್‌ಲೈನ್, ನಗದು ಹಾಗೂ ಗಿಫ್ಟ್ ರೂಪದಲ್ಲಿ ಲಕ್ಷಾಂತರ ರು. ಹಣ ಸ್ವೀಕರಿಸಿದ್ದಾರೆ. ಉಗ್ರ ಟಿ.ನಾಸೀರ್ ಸೂಚನೆ ಮೇರೆಗೆ ಈ ಮೂವರೂ ಹಣ ಪಡೆದುಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹಣದ ಮೂಲ ಪತ್ತೆಗೆ ತನಿಖೆ:
ಎಎಸ್‌ಐ ಚಾಂದ್ ಪಾಷಾ ತನ್ನ ಖಾತೆ ಮಾತ್ರವಲ್ಲದೆ ತನ್ನ ಪುತ್ರನ ಬ್ಯಾಂಕ್ ಖಾತೆಗೂ ಹಣ ಹಾಕಿಸಿಕೊಂಡಿದ್ದಾನೆ. ಇನ್ನು ಡಾ.ನಾಗರಾಜ್ ಸಹಾಯಕಿ ಪವಿತ್ರಾ ಬ್ಯಾಂಕ್ ಖಾತೆಯಲ್ಲಿ ಸುಮಾರು 70 ಲಕ್ಷ ರು. ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಹೀಗಾಗಿ ಎನ್‌ಐಎ ಅಧಿಕಾರಿಗಳು ಈ ಹಣದ ಮೂಲ ಪತ್ತೆ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ.
ಬಂಧಿತರ ಬ್ಯಾಂಕ್ ಖಾತೆಗಳ ಮಾಹಿತಿ ಆಧರಿಸಿ ಎಲ್ಲೆಲ್ಲಿಂದ ಯಾರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ದೇಶ ಹಾಗೂ ಹೊರದೇಶಗಳಿಂದ ಆರೋಪಿಗಳಿಗೆ ಹಣ ಸಂದಾಯವಾಗಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಎನ್‌ಐಎ ಅಧಿಕಾರಿಗಳು ಆ ಹಣದ ಮೂಲ ಪತ್ತೆಗೆ ಮುಂದಾಗಿದ್ದಾರೆ.