ಶೀಲ ಶಂಕೆ : ಕಿರುತೆರೆ ನಟಿ, ಪತ್ನಿಗೆ ಚಾಕು ಇರಿದ ಪತಿ

Published : Jul 12, 2025, 10:25 AM IST
crime news

ಸಾರಾಂಶ

ಶೀಲ ಶಂಕಿಸಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪದ ಮೇರೆಗೆ ಕಿರುತೆರೆ ನಟಿಯೊಬ್ಬರ ಪತಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು :  ಶೀಲ ಶಂಕಿಸಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪದ ಮೇರೆಗೆ ಕಿರುತೆರೆ ನಟಿಯೊಬ್ಬರ ಪತಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರದ ಮುನೇಶ್ವರ ಬ್ಲಾಕ್‌ ನಿವಾಸಿ ಅಂಬರೀಷ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಮನೆಯಲ್ಲಿ ತನ್ನ ಪತ್ನಿ ಮಂಜುಳಾ ಅಲಿಯಾಸ್ ಶೃತಿಗೆ ಚಾಕುವಿನಿಂದ ಇರಿದಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

20 ವರ್ಷಗಳ ಹಿಂದೆ ಆಟೋ ಚಾಲಕ ಅಂಬರೀಷ್ ಹಾಗೂ ಕಿರುತೆರೆ ನಟಿ ಮಂಜುಳಾ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೀ ಕನ್ನಡ ವಾಹಿನಿಯ ‘ಅಮೃತಧಾರೆ’ ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ಮಂಜುಳಾ ನಟಿಸಿದ್ದಾರೆ.

ಕೌಟುಂಬಿಕ ವಿಚಾರಗಳಿಗೆ ಈ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ತನ್ನ ಪತ್ನಿ ಚಾರಿತ್ರ್ಯದ ಮೇಲೆ ಆತನಿಗೆ ಅನುಮಾನವಿತ್ತು. ಇದೇ ವಿಷಯಕ್ಕೆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿದ್ದವು. ಸಂಸಾರ ನಡೆಸದೆ ಪತ್ನಿ ಮನಬಂದಂತೆ ತಿರುಗುತ್ತಾಳೆ. ಪಾರ್ಟಿ ನೆಪದಲ್ಲಿ ತಡ ರಾತ್ರಿ ಮನೆಗೆ ಬರುತ್ತಾಳೆ ಎಂದು ಅಂಬರೀಷ್‌ನ ಆರೋಪವಾಗಿತ್ತು. ಈ ಗಲಾಟೆಗೆ ಮಧ್ಯೆ ಪ್ರವೇಶಿಸಿ ಎರಡು ಕುಟುಂಬಗಳ ಹಿರಿಯರು ರಾಜಿ ಸಂಧಾನ ಮೂಲಕ ಸಮಸ್ಯೆ ಪರಿಹರಿಸಲು ಯತ್ನಿಸಿ ವಿಫಲರಾಗಿದ್ದರು.

ಜು.4 ರಂದು ತಮ್ಮ ಮಕ್ಕಳು ಕಾಲೇಜಿಗೆ ತೆರಳಿದ ಬಳಿಕ ಮನೆಯಲ್ಲಿ ದಂಪತಿ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಅಂಬರೀಷ್‌, ತನ್ನ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಚೀರಾಟ ಕೇಳಿ ನೆರೆಹೊರೆಯವರು ಹಲ್ಲೆಗೊಳಗಾದ ಮಂಜುಳಾ ನೆರವಿಗೆ ಧಾವಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Read more Articles on

Recommended Stories

ಪರಿಶಿಷ್ಟರ ಅವಕಾಶ ವಂಚನೆ ತಡೆಗೆ ಜಾತಿ ಸಮೀಕ್ಷೆ ಸಹಕಾರಿ
ಬಸ್ ನಿಲ್ದಾಣದಲ್ಲಿ ಪೆಟ್ರೋಲ್ ಬಂಕ್‌ ಅನುಮತಿಗೆ ಕನ್ನಡಿಗರ ಕರವೇ ವಿರೋಧ