ಲಾರ್ಡ್ಸ್‌ನಲ್ಲಿ ಕುಸಿದ ಇಂಗ್ಲೆಂಡ್‌ಗೆ ರೂಟ್‌ ಆಸರೆ

Published : Jul 11, 2025, 12:25 PM ISTUpdated : Jul 11, 2025, 12:28 PM IST
India Lord's Test against England

ಸಾರಾಂಶ

ಬಾಜ್‌ಬಾಲ್‌’ ಹೆಸರಿನಲ್ಲಿ ಆಕ್ರಮಣಕಾರಿ ಆಟವಾಡುವುದಕ್ಕೆ ಪ್ರಸಿದ್ಧಿಯಾಗಿರುವ ಇಂಗ್ಲೆಂಡ್‌ ಈ ಬಾರಿ ಟೆಸ್ಟ್‌ ಕ್ರಿಕೆಟ್‌ನ ನೈಜ ಆಟಕ್ಕೆ ಮರಳಿತು. ಲಾರ್ಡ್ಸ್‌ ಕ್ರೀಡಾಂಗಣದ ಪಿಚ್‌ನಲ್ಲಿ ಕಂಡುಬಂದ ಅನಿರೀಕ್ಷಿತ ಬೌನ್ಸ್‌, ಸ್ವಿಂಗ್‌ಗಳ ಮುಂದೆ ಆತಿಥೇಯರು ರನ್‌ ಗಳಿಸಲು ಬಹಳಷ್ಟು ಶ್ರಮವಹಿಸಬೇಕಾಯಿತು

ಲಂಡನ್‌: ‘ಬಾಜ್‌ಬಾಲ್‌’ ಹೆಸರಿನಲ್ಲಿ ಆಕ್ರಮಣಕಾರಿ ಆಟವಾಡುವುದಕ್ಕೆ ಪ್ರಸಿದ್ಧಿಯಾಗಿರುವ ಇಂಗ್ಲೆಂಡ್‌ ಈ ಬಾರಿ ಟೆಸ್ಟ್‌ ಕ್ರಿಕೆಟ್‌ನ ನೈಜ ಆಟಕ್ಕೆ ಮರಳಿತು. ಲಾರ್ಡ್ಸ್‌ ಕ್ರೀಡಾಂಗಣದ ಪಿಚ್‌ನಲ್ಲಿ ಕಂಡುಬಂದ ಅನಿರೀಕ್ಷಿತ ಬೌನ್ಸ್‌, ಸ್ವಿಂಗ್‌ಗಳ ಮುಂದೆ ಆತಿಥೇಯರು ರನ್‌ ಗಳಿಸಲು ಬಹಳಷ್ಟು ಶ್ರಮವಹಿಸಬೇಕಾಯಿತು. ಇದರೊಂದಿಗೆ ಭಾರತ ವಿರುದ್ಧ ಗುರುವಾರ ಆರಂಭಗೊಂಡ 3ನೇ ಟೆಸ್ಟ್‌ನ ಮೊದಲ ದಿನ ಇಂಗ್ಲೆಂಡ್‌ ತಂಡ ಸಾಧಾರಣ ಮೊತ್ತ ಕಲೆಹಾಕಿದೆ.

ಲಾರ್ಡ್ಸ್‌ ಕ್ರೀಡಾಂಗಣದ ಪಿಚ್‌ನಲ್ಲಿ ಹೆಚ್ಚು ಹುಲ್ಲಿರಲಿದೆ, ವೇಗಿಗಳಿಗೆ ಹೆಚ್ಚಿನ ನೆರವಾಗಲಿದೆ ಎಂಬ ವರದಿಗಳ ನಡುವೆ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಭಾರತದ ನಾಯಕ ಶುಭ್‌ಮನ್‌ ಗಿಲ್‌ಗೂ ಬೌಲಿಂಗ್‌ ಬೇಕಿತ್ತು. ಆದರೆ ಇಂಗ್ಲೆಂಡ್‌ ಬ್ಯಾಟಿಂಗ್‌ ಆರಂಭಿಸಿದಾಗ ಅಚ್ಚರಿ ಕಾದಿತ್ತು. ಹುಲ್ಲು ಕತ್ತರಿಸಿದ್ದರಿಂದ ಚೆಂಡು ಹೆಚ್ಚಿನ ವೇಗದಲ್ಲಿ ಬೀಳುತ್ತಿರಲಿಲ್ಲ. ಹೆಚ್ಚಿನ ಸ್ವಿಂಗ್‌, ಅನಿರೀಕ್ಷಿತವಾಗಿ ಬರುತ್ತಿದ್ದ ಬೌನ್ಸರ್‌ಗಳ ಮುಂದೆ ಸಮರ್ಥವಾಗಿ ಆಡಿದ ಇಂಗ್ಲೆಂಡ್‌ ಮೊದಲ ದಿನ ಹೆಚ್ಚಿನ ವಿಕೆಟ್‌ ಕಳೆದುಕೊಳ್ಳದಂತೆ ನೋಡಿಕೊಂಡಿತು.

ಉತ್ತಮ ಆರಂಭ: ಆರಂಭಿಕರಾದ ಜ್ಯಾಕ್‌ ಕ್ರಾವ್ಲಿ ಹಾಗೂ ಬೆನ್‌ ಡಕೆಟ್‌ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ದೊಡ್ಡ ಹೊಡೆತಗಳಿಗೆ ಕೈಹಾಕದ ಜೋಡಿ, 13.3 ಓವರ್‌ಗಳಲ್ಲಿ 43 ರನ್‌ ಜೊತೆಯಾಟವಾಡಿತು. ಆದರೆ ಡ್ರಿಂಕ್ಸ್‌ ಬ್ರೇಕ್‌ ಬಳಿಕ ಇಂಗ್ಲೆಂಡ್‌ಗೆ ಆಘಾತ ಕಾದಿತ್ತು.

ನಿತೀಶ್‌ ಕುಮಾರ್‌ ತಾವೆಸೆದ ಮೊದಲ ಓವರ್‌ನಲ್ಲೇ ಇಬ್ಬರೂ ಆರಂಭಿಕರನ್ನು ಪೆವಿಲಿಯನ್‌ಗೆ ಅಟ್ಟಿದರು. ಕ್ರಾವ್ಲಿ 18, ಡಕೆಟ್‌ 23 ರನ್‌ ಗಳಿಸಿದರು.

ಆ ಬಳಿಕ ತಂಡಕ್ಕೆ ಆಸರೆಯಾಗಿದ್ದು ಜೋ ರೂಟ್‌ ಹಾಗೂ ಓಲಿ ಪೋಪ್‌. ಜವಾಬ್ದಾರಿಯುತ ಆಟವಾಡಿದ ಈ ಜೋಡಿ 3ನೇ ವಿಕೆಟ್‌ಗೆ 211 ಎಸೆತಗಳಲ್ಲಿ 109 ರನ್‌ ಸೇರಿಸಿತು. ಭಾರತೀಯದ ಅರ್ಥವತ್ತಾದ ದಾಳಿ ಮುಂದೆ ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳಲು ಈ ಜೋಡಿ ತಯಾರಾಗಲಿಲ್ಲ. ಒಂದೊಂದೇ ರನ್ ಗಳಿಸಿ ತಂಡವನ್ನು ಮೊತ್ತವನ್ನು ಹೆಚ್ಚಿಸಿತು. ಟೀ ವಿರಾಮದ ವೇಳೆಗೆ ತಂಡ 2 ವಿಕೆಟ್‌ಗೆ 153 ರನ್‌ ಗಳಿಸಿತ್ತು.

ಆದರೆ ವಿರಾಮದ ಬಳಿಕ ಮೊದಲ ಎಸೆತದಲ್ಲೇ ಓಲಿ ಪೋಪ್‌(44)ರನ್ನು ಜಡೇಜಾ ಔಟ್‌ ಮಾಡಿದರು. ವಿಶ್ವ ನಂ.1 ಬ್ಯಾಟರ್‌ ಹ್ಯಾರಿ ಬ್ರೂಕ್‌ ಅವರು ವಿಶ್ವ ನಂ.1 ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಆಕರ್ಷಕ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು.

ಬಳಿಕ ನಾಯಕ ಬೆನ್‌ ಸ್ಟೋಕ್ಸ್ ಹಾಗೂ ರೂಟ್‌ ತಂಡವನ್ನು ಮೇಲೆತ್ತಿದರು. ಈ ಜೋಡಿ ಮುರಿಯದ 5ನೇ ವಿಕೆಟ್‌ಗೆ 00 ರನ್‌ ಜೊತೆಯಾಟವಾಡಿದೆ. ರೂಟ್‌ ಔಟಾಗದೆ 00 ರನ್‌, ಸ್ಟೋಕ್ಸ್ ಔಟಾಗದೆ 00 ರನ್‌ ಗಳಿಸಿ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

PREV
Read more Articles on