ಬೆಂಗಳೂರು : ಲಷ್ಕರ್-ಎ-ತೊಯ್ಬಾ ಸಂಘಟನೆ ಉಗ್ರ ಟಿ.ನಾಸೀರ್‌ಗೆ ಮೊಬೈಲ್ ಪೂರೈಕೆ ಪ್ರಕರಣ ಸಂಬಂಧ ಬಂಧಿತ ಮೂವರು ಶಂಕಿತ ಉಗ್ರರ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮುಂದುವರೆಸಿದೆ. ಉಗ್ರ ನಾಸೀರ್ ಜೈಲಲ್ಲಿದ್ದುಕೊಂಡೇ ಯಾರ ಜತೆಗೆ ಮೊಬೈಲ್‌ನಲ್ಲಿ ಮೂಲಕ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಕಲೆಹಾಕಲು ಯತ್ನಿಸುತ್ನಿದೆ.
ಪರಪ್ಪನ ಅಗ್ರಹಾರ ಜೈಲಲ್ಲಿ ಕೇರಳ ಮೂಲದ ನಾಸೀರ್‌ಗೆ ಔಷಧಿ ಬಾಕ್ಸ್‌ಗಳಲ್ಲಿ ಮೊಬೈಲ್ ಅಡಗಿಸಿಟ್ಟಿದ್ದು ಮನೋವೈದ್ಯ ಡಾ.ನಾಗರಾಜ್ ಪೂರೈಸುತ್ತಿದ್ದ ಸಂಗತಿ ವಿಚಾರಣೆ ವೇಳೆ ಗೊತ್ತಾಗಿದೆ. ಈ ಮೊಬೈಲ್‌ಗಳ ಮೂಲಕ ಯಾರ್‍ಯಾರನ್ನು ಸಂಪರ್ಕಿಸಲಾಗಿದೆ, ಸಂದೇಶ ಕಳುಹಿಸಲಾಗಿದೆ ಎನ್ನುವ ಮಾಹಿತಿಯನ್ನು ಎನ್‌ಐಎ ಮಾಹಿತಿ ಜಾಲಾಡುತ್ತಿದೆ ಎಂದು ತಿಳಿದು ಬಂದಿದೆ.
ಹಣಕ್ಕಾಗಿ ನಾಸೀರ್ ಸೂಚನೆಯಂತೆ ನಾಗರಾಜ್, ನಗರ ಸಶಸ್ತ್ರ ಮೀಸಲು ಪಡೆಯ ಎಎಸ್ಐ ಚಾಂದ್ ಪಾಷ ಕೆಲಸ ಮಾಡುತ್ತಿದ್ದರು. ಇನ್ನು ವಿದೇಶದಲ್ಲಿ ತಲೆಮರೆಸಿಕೊಂಡಿರುವ ತನ್ನ ಪುತ್ರ ಹಾಗೂ ಶಂಕಿತ ಉಗ್ರ ಜುನೈದ್‌ಗೆ ಸಂದೇಶ ವಾಹಕಳಾಗಿದ್ದ ಆತನ ತಾಯಿ ಉನ್ನಿಸಾ ಫಾತಿಮಾಳನ್ನೂ ಎನ್‌ಐಎ ತೀವ್ರ ವಿಚಾರಣೆಗೊಳಪಡಿಸಿದೆ ಎನ್ನಲಾಗಿದೆ.
ವಿದೇಶದಲ್ಲಿ ಜುನೈದ್ ಕಾರ್ಯಚಟುವಟಿಕೆ ಹಾಗೂ ಆತನ ಸಂಪರ್ಕ ಜಾಲದ ಕುರಿತು ಆತನ ತಾಯಿಯಿಂದ ಎನ್‌ಐಎ ಮಾಹಿತಿ ಕಲೆ ಹಾಕಲು ಪ್ರಯತ್ನಿಸುತ್ತಿದೆ. ಅಲ್ಲದೆ, ಆತ ಕಳುಹಿಸಿದ್ದ ಹಣ ಯಾವ ಬ್ಯಾಂಕ್ ಖಾತೆಗಳಿಂದ ವರ್ಗಾವಣೆಯಾಗುತ್ತಿತ್ತು. ಯಾರೆಲ್ಲ ಜುನೈದ್‌ಗೆ ಬೆಂಬಲ ಕೊಟ್ಟಿದ್ದಾರೆ ಎಂಬ ವಿಷಯವನ್ನು ಉನ್ನಿಸಾಳಿಂದ ಬಾಯಿಬಿಡಿಸಲು ತನಿಖಾಧಿಕಾರಿಗಳು ಹರಸಾಹಸಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.