ದಿನೇಶ್‌ ಗುಂಡೂರಾವ್ ಪತ್ನಿಗೆ ಕರೋನಾ ಔಷಧಿ ಕೊಟ್ಟು ಗುಣಪಡಿಸಿದವರು ವಿಶ್ವೇಶ್ವರ ಹೆಗಡೆ ಕಾಗೇರಿ!

Published : Jan 06, 2025, 11:47 AM IST
Kageri

ಸಾರಾಂಶ

ಸಂಸದ ಕಾಗೇರಿ, ಕೂಡಲೇ ಮೈಕ್‌ ಬಳಿ ಬಂದು ‘ನಾಳಿಂದ ಔಷಧಿಗೆ ನನ್ನತ್ರ ಬರಡಿ ಕಜೆ ಹತ್ರ ಹೋಗಿ’ ಎಂದು ಹವ್ಯಕ ಭಾಷೆಯಲ್ಲಿ ಹೇಳಿದಾಗ ಇಡೀ ಸಭೆ ನೆಗಾಡಿತು

ಕಲಾವಿದರಲ್ಲದಿದ್ದರೆ ರಾಜಕಾರಣ ಕಷ್ಟಾ ಕಷ್ಟ! । ನಿಮಗೆ ಗೋಕರ್ಣ ಚೌರದ ಬಗ್ಗೆ ಗೊತ್ತಾ?

ಸಚಿವರ ಪತ್ನಿಗೆ ಕರೋನಾ ಗುಣಪಡಿಸಿದ ಕಾಗೇರಿ!

 ಸಂಸದ ಕಾಗೇರಿ, ಕೂಡಲೇ ಮೈಕ್‌ ಬಳಿ ಬಂದು ‘ನಾಳಿಂದ ಔಷಧಿಗೆ ನನ್ನತ್ರ ಬರಡಿ ಕಜೆ ಹತ್ರ ಹೋಗಿ’ ಎಂದು ಹವ್ಯಕ ಭಾಷೆಯಲ್ಲಿ ಹೇಳಿದಾಗ ಇಡೀ ಸಭೆ ನೆಗಾಡಿತು.

-- ದಿನೇಶ್‌ ಗುಂಡೂರಾವ್ ಅವರ ಪತ್ನಿಗೆ ಕರೋನಾ ಔಷಧಿ ಕೊಟ್ಟು ಗುಣಪಡಿಸಿದವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ!

ಹೀಗಂತ ಖುದ್ದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ವೇದಿಕೆ ಮೇಲೆ ನಿಂತು ಹೇಳುತ್ತಿದ್ದರೆ ಅದೇ ವೇದಿಕೆಯಲ್ಲಿದ್ದ ಸ್ವತಃ ಕಾಗೇರಿ ಅವರೇ ಹೌಹಾರಿಬಿಟ್ಟರು. ಇದಾಗಿದ್ದು ಇತ್ತೀಚೆಗೆ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ. ಈ ಸಮ್ಮೇಳನದಲ್ಲಿ ಭಾಷಣದ ಉಮೇದಿಯಲ್ಲಿದ್ದ ದಿನೇಶ್‌ ಗುಂಡೂರಾವ್ ಅವರು ‘ನನ್ನ ಪತ್ನಿಗೆ ಕೊರೋನಾ ವಾಸಿಯಾಗಲು ಕಾಗೇರಿಯವರು ಕೊಟ್ಟ ಔಷಧಿಯೇ ಕಾರಣ’ ಎಂದರು.

ಹೀಗೇ ಹೇಳುತ್ತಿದ್ದಂತೆಯೇ ವೇದಿಕೆಯಲ್ಲಿ ಇದ್ದ ಕಾಗೇರಿ ಅಚ್ಚರಿ ಚಕಿತರಾದರು. ಇದ ಕಂಡು ತಪ್ಪಿನ ಅರಿವಾಯ್ದು ಅಂತ ಕಾಣುತ್ತದೆ ಗುಂಡೂರಾವ್‌ ಅವರು ಕ್ಷಮಿಸಿ, ಔಷಧಿ ಕೊಟ್ಟಿದ್ದು ಕಾಗೇರಿಯಲ್ಲ ಕಜೆ ಎಂದು ಸ್ಪಷ್ಟೀಕರಿಸಿದರು. ಈ ವೇಳೆ ಹಿಂದೆಯೇ ಕುಳಿತಿದ್ದ ಸಂಸದ ಕಾಗೇರಿ, ಕೂಡಲೇ ಮೈಕ್‌ ಬಳಿ ಬಂದು ‘ನಾಳಿಂದ ಔಷಧಿಗೆ ನನ್ನತ್ರ ಬರಡಿ ಕಜೆ ಹತ್ರ ಹೋಗಿ’ ಎಂದು ಹವ್ಯಕ ಭಾಷೆಯಲ್ಲಿ ಹೇಳಿದಾಗ ಇಡೀ ಸಭೆ ನೆಗಾಡಿತು.

 ರಾಜಕಾರಣಿಗಳೂ ಕಲಾವಿದರೇ ಕಣ್ರೀ.

ಪಾಲಿಟಿಕ್ಸ್‌ ಇಸ್ ದ ಆರ್ಟ್‌ ಆಫ್‌ ಪಾಸಿಬಲ್‌! ಹೀಗೆ ಜರ್ಮನಿಯ ನಾಯಕ ಒಟ್ಟೋವನ್‌ ಬಿಸ್ಮಾರ್ಕ್‌ ಹೇಳಿಕೆಯನ್ನು ಪುನರುಚ್ಚರಿಸಿ ರಾಜಕಾರಣವೂ ಕಲೆಯೇ ಎಂದು ಸಭಿಕರ ಮೊಗದಲ್ಲಿ ನಗೆ ಚಿಮ್ಮಿಸಿದ್ದು ಮಾಜಿ ಸಭಾಪತಿ, ಕಾಂಗ್ರೆಸ್‌ ಧುರೀಣ ಡಾ। ಬಿ.ಎಲ್‌.ಶಂಕರ್‌.

ಚಿತ್ರಕಲಾ ಸಮ್ಮಾನ್‌ ಪ್ರಶಸ್ತಿ ಸ್ವೀಕರಿಸಿದ ಕಲಾವಿದ ಡಾ। ಎಂ.ಎಸ್‌.ಮೂರ್ತಿ ಮಾತನಾಡುತ್ತ, ರಾಜಕಾರಣಿಗಳಲ್ಲಿ ಕಲೆ ಇರಬೇಕು. ಕಲೆಯನ್ನು, ಕಲಾವಿದರನ್ನು ದೂರ ತಳ್ಳಬಾರದು. ಕಲೆಯನ್ನು ಆಸ್ವಾದಿಸಬೇಕು ಎಂದು ಹೇಳಿದರು. ನಂತರ ಮಾನತಾಡಲು ಮೈಕ್ ಹಿಡಿದ ಶಂಕರ್‌ ಅವರು, ರಾಜಕಾರಣಿಗಳಲ್ಲಿ ಕಲೆ ಇಲ್ಲವೆಂದು ಜನ ತಿಳಿದುಕೊಳ್ಳಬಾರದು. ಏಕೆಂದರೆ, ರಾಜಕಾರಣಿಗಳು ಮಹಾನ್‌ ಕಲಾಕಾರರು. ಕಲೆ ಇಲ್ಲದಿದ್ದರೆ ರಾಜಕಾರಣದಲ್ಲಿ ಇರುವುದು ಕಷ್ಟ. ಕಲೆ ಚೆನ್ನಾಗಿ ಗೊತ್ತಿದ್ದವರು ಮುಂದೆ ಹೋಗುತ್ತಾರೆ. ಗೊತ್ತಿಲ್ಲದ ನನ್ನಂತವರು ಹಿಂದೆ ಬೀಳ್ತೇವೆ ಎಂದು ಅವರು ಹೇಳಿದ್ದು ವ್ಯಂಗ್ಯವೋ ಸ್ವಗತವೋ ಗೊತ್ತಾಗಲಿಲ್ಲ.

ಸರ್ಕಾರಿ ಕಾಮಗಾರಿ ಅರ್ಥಾತ್‌ ಗೋಕರ್ಣ ಚೌರ!

ಸರ್ಕಾರದ ಯೋಜನೆಗಳು ಒಂದು ರೀತಿ ಗೋಕರ್ಣದ ಕ್ಷೌರದ ತರ ಅಂತೆ. ಕ್ಷೌರಕ್ಕೂ ಯೋಜನೆಗಳಿಗೂ ಏನಪ್ಪ ಸಂಬಂಧ ಅಂದರೆ. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ ಬಾಯಲ್ಲಿ ಕೇಳಬೇಕು.

ಇತ್ತೀಚೆಗೆ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಿತಲ್ಲ. ಅಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಯ ವೇಳೆ 60ರ ದಶಕದಲ್ಲಿ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಇನ್ನೂ ಅನೇಕ ಯೋಜನೆಗಳು ಇಂದಿಗೂ ಪೂರ್ಣಗೊಳ್ಳದೆ ಕುಂಟುತ್ತಾ ಸಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಮ್ಮಲ್ಲಿ ‘ಗೋಕರ್ಣದ ಕ್ಷೌರ’ ಅಂತ ಹೇಳ್ತಾರೆ. ಎಷ್ಟೇ ಜನ ಬರಲಿ ತಮ್ಮ ಬಳಿ ಬಂದ ಒಬ್ಬರನ್ನೂ ಬೇರೆ ಕಡೆ ಹೋಗದಂತೆ ತಡೆಯಲು ಅರ್ಧಕ್ಷೌರ ಮಾಡಿ ಕೂರಿಸೋದು. ಈ ಸರ್ಕಾರಿ ಯೋಜನೆಗಳೂ ಹಾಗೇ, ಪೂರ್ಣಗೊಳ್ಳದ ಕಾಮಗಾರಿಗಳನ್ನು ಹಾಗೇ ನಿಲ್ಲಿಸೋದು ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲಾ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯಾದೇಶ, ಅಡಿಗಲ್ಲು ಅಥವಾ ಗುದ್ದಲಿ ಪೂಜೆ ಮಾಡಿಕೊಂಡು ಹೋಗುತ್ತಾರೆ. ಆದರೆ, ಯಾರೂ ಕಾಮಗಾರಿ ಸಂಪೂರ್ಣ ಮಾಡುತ್ತಿಲ್ಲ. ಇದರಿಂದ ತೆರಿಗೆ ಕಟ್ಟುವ ಜನರ ತಲೆ ಪೂರ್ಣ ಬೋಳಾಗುತ್ತಿದೆ ಎಂದರು.

ಸಂಪತ್‌ ತರೀಕೆರೆ

-ಮಯೂರ್‌ ಹೆಗಡೆ -ಲಿಂಗರಾಜು ಕೋರಾ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ