ಕಳೆದ 25ವರ್ಷದಿಂದ ಮುಚ್ಚಿದ್ದ ಚಿಕ್ಕಬಾಣಾವರದಲ್ಲಿರುವ ರೈಲ್ವೆ ಬ್ರಿಡ್ಜ್ ಸುರಂಗ ಮಾರ್ಗವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಸಹಕಾರದೊಂದಿಗೆ ಶಾಸಕ ಎಸ್.ಮುನಿರಾಜು ಅವರು ತೆರವುಗೊಳಿಸಿದ್ದು, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಿದೆ.
ಪೀಣ್ಯ ದಾಸರಹಳ್ಳಿ : ಕಳೆದ 25ವರ್ಷದಿಂದ ಮುಚ್ಚಿದ್ದ ಚಿಕ್ಕಬಾಣಾವರದಲ್ಲಿರುವ ರೈಲ್ವೆ ಬ್ರಿಡ್ಜ್ ಸುರಂಗ ಮಾರ್ಗವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಸಹಕಾರದೊಂದಿಗೆ ಶಾಸಕ ಎಸ್.ಮುನಿರಾಜು ಅವರು ತೆರವುಗೊಳಿಸಿದ್ದು, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಿದೆ.
ತೆರವುಗೊಳಿಸಲಾದ ಮಾರ್ಗವನ್ನು ಸೋಮವಾರ ಪರಿಶೀಲಿಸಿದ ಮುನಿರಾಜು ಅವರು ಮಾತನಾಡಿ, ರೈಲ್ವೆ ಇಲಾಖೆಯು 2005ರಲ್ಲಿ ಕಾಮಗಾರಿ ಸಂಬಂಧ ಈ ಸೇತುವೆಯ ಸುರಂಗ ಮಾರ್ಗವನ್ನು ಬಂದ್ ಮಾಡಿತ್ತು. ಇದರಿಂದ ಸಾರ್ವಜನಿಕರಿಗೆ ಅದರಲ್ಲೂ ಚಿಕ್ಕಬಾಣಾವರದ ಕೋಟೆ ಮಾರಮ್ಮ ಜಾತ್ರೆಯ ಸಮಯದಲ್ಲಿ ಭಾರೀ ತೊಂದರೆಯಾಗುತ್ತಿತ್ತು. ಈ ವಿಷಯವನ್ನು ರೈಲ್ವೆ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತಂದಿದ್ದೆ. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು ಸೇತುವೆ ಮಾರ್ಗ ತೆರವು ಮಾಡಲು ಸಹಕರಿಸಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಭಾರೀ ಅನುಕೂಲವಾಗಿದ್ದು, ಹಬ್ಬಕ್ಕೆ ಇನ್ನಷ್ಟು ಕಳೆ ಬಂದಂತಾಗಿದೆ ಎಂದು ಹೇಳಿದರು.
ಸಂಘದ ಯುವಕರಿಂದ ಸ್ವಚ್ಛತೆ:
ಹೆಸರಘಟ್ಟ ಮುಖ್ಯರಸ್ತೆಯ ಚಿಕ್ಕಬಾಣಾವರದಲ್ಲಿರುವ ರೈಲ್ವೆ ಬ್ರಿಡ್ಜ್ ಸುರಂಗ ಮಾರ್ಗ ತೆರವಿನಿಂದ ಗಣಪತಿನಗರ, ವೀರಶೆಟ್ಟಹಳ್ಳಿ ಶಾಂತಿನಗರ ಸೇರಿ ಸುತ್ತಮುತ್ತಲಿನ ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ಚಿಕ್ಕಬಾಣಾವರ ಯುವಕರ ಸಂಘದ ಪದಾಧಿಕಾರಿಗಳು ತೆರವು ಕಾರ್ಯಕ್ಕೆ ಸಹಕರಿಸಿದ್ದು, ಕೋಟೆ ಮಾರಮ್ಮ ಯುವಕರ ಸಂಘ, ಸರ್ಕಲ್ ಗಂಗಮ್ಮ ಜಾತ್ರಾ ಮಹೋತ್ಸವ ಯುವಕರ ಸಂಘದ ಸದಸ್ಯರು ಸ್ವಚ್ಛತೆ ಮಾಡಿದ್ದಾರೆ.
ಶಾಸಕ ಮುನಿರಾಜು ಅವರ ಈ ಕಾರ್ಯಕ್ಕೆ ಕ್ಷೇತ್ರದ ಜನರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಸಂದೀಪ್, ಎಂಜಿನಿಯರ್ ಸುಮತಿ, ಪುರಸಭೆ ಬಿಜೆಪಿ ಅಧ್ಯಕ್ಷ ಗೀರಿಶ್ ಕುಮಾರ್, ಸ್ಥಳೀಯ ಮುಖಂಡರಾದ ವೆಂಕಟೇಶ್, ಪ್ರಕಾಶ್, ನವೀನ್ ಕುಮಾರ್ ಇದ್ದರು.