- ಒಳ್ಳೆ ಮೈಕ್ ಹಾಕಿದ್ದಕ್ಕೆ ಸಭೆಯಲ್ಲಿ ನಡೆದ ಸೌಹಾರ್ದ ಚರ್ಚೆಯೂ ಗಲಾಟೆಯಂತೆ ಕೇಳಿಸಿತು । ಛಲವಾದಿ ಹೋಗ್ಬೇಡಿ ಅಂದ್ರೂ ಜನ ಎದ್ದೋಗಿದ್ದೇಕೆ?
- ಒಳ್ಳೆ ಮೈಕ್ ಹಾಕಿದ್ದಕ್ಕೆ ಸಭೆಯಲ್ಲಿ ನಡೆದ ಸೌಹಾರ್ದ ಚರ್ಚೆಯೂ ಗಲಾಟೆಯಂತೆ ಕೇಳಿಸಿತು । ಛಲವಾದಿ ಹೋಗ್ಬೇಡಿ ಅಂದ್ರೂ ಜನ ಎದ್ದೋಗಿದ್ದೇಕೆ?
ವರದಿಗಾರರು ಸಚಿವ ಎಚ್.ಕೆ. ಪಾಟೀಲ್ ಅವರ ಬಳಿ, ಏನ್ ಸಾರ್ ಅಷ್ಟು ಶಾಂತಿಯುತವಾಗಿ ಸಭೆ ನಡೆದಿದೆ ಅಂತೀದ್ದೀರಿ. ಆದರೆ ಸಚಿವರು ಜೋರಾಗಿ ಕಿರುಚಾಡಿದ ಶಬ್ದ ಬಂದಂತೆ ಇತ್ತಲ್ಲ ಎಂದರೆ..., ‘ಹೌದಾ..? ಸಚಿವರು ಮಾಮೂಲಾಗಿಯೇ ಮಾತಾಡ್ತಿದ್ದರು. ಮೈಕ್‌ಗಳು ಒಳ್ಳೆಯವಿದ್ದವು. ಹೀಗಾಗಿ ಸೌಂಡ್ ಜಾಸ್ತಿ ಬಂದಿದೆಯಷ್ಟೇ’ ಎಂದು ಬಿಡುವುದೇ!!!
ಜಾತಿ ಗಣತಿ ಕುರಿತ ವಿಶೇಷ ಸಂಪುಟ ಸಭೆಯಲ್ಲಿ ಸಚಿವರ ನಡುವೆ ಬಾಣ-ಬಿರುಸು ಭರ್ಜರಿಯಾಗೇ ಇತ್ತು. ಹಾಗಂತ ಎಲ್ಲಾ ಮಾಧ್ಯಮಗಳು ಶಕ್ತಿ ಮೀರಿ ಪ್ರಚಾರ ನೀಡಿದವು.
ಆದರೆ, ಸಭೆಯಲ್ಲಿ ಪಾಲ್ಗೊಂಡಿದ್ದ ಅಷ್ಟು ಸಚಿವರ ಅಧಿಕೃತ ಹೇಳಿಕೆ ಮಾತ್ರ ಒಂದೇ- ‘ಶಾಂತಿ, ಸೌಹಾರ್ದಯುತವಾಗಿ ಚರ್ಚೆ ನಡೆಯಿತು.
ಸಭೆಯಲ್ಲಿ ಸಚಿವರು ಏರು ಧ್ವನಿಯಲ್ಲಿ ಮಾತನಾಡಿದ್ದು, ಅಪಸ್ವರಗಳು ಕೇಳಿ ಬಂದಿದ್ದು, ಜಾತಿ ಗಣತಿ ಬಗೆಗಿನ ಚರ್ಚೆ ವೇಳೆ ಪ್ರತ್ಯೇಕ ಧರ್ಮದ ವಿಚಾರ ಎಳೆದು ತಂದಿದ್ದು ಎಲ್ಲಾ ನಡೆದಿತ್ತು. ಅದು ಮಾಧ್ಯಮಗಳ ಮೂಲಕ ಮನೆ ಮನೆಯೂ ತಲುಪಿ ಆಗಿತ್ತು. ಹೀಗಿರುವಾಗ ವರ್ಸೈಲ್ ಶಾಂತಿ ಒಪ್ಪಂದದ ಸಭೆಗೋ ಅಥವಾ ಅಮೆರಿಕ- ಉಕ್ರೇನ್ ಸೌಹಾರ್ದ ಒಪ್ಪಂದ ಸಭೆಗೋ ಹೋಗಿ ಬಂದವರಂತೆ ಪ್ರತಿಯೊಬ್ಬರು ಶಾಂತಿ-ಸೌಹಾರ್ದತೆ ಎಂದೇ ವಾದಿಸುತ್ತಿದ್ದರು.
ಹಾಗಾದರೆ, ಅಸಲಿಗೆ ನಡೆದಿದ್ದು ಏನು ಎಂಬ ಕುತೂಹಲದಿಂದ ವರದಿಗಾರರು ಸಚಿವ ಎಚ್.ಕೆ. ಪಾಟೀಲ್ ಅವರ ಬಳಿ, ಏನ್ ಸಾರ್ ಅಷ್ಟು ಶಾಂತಿಯುತವಾಗಿ ಸಭೆ ನಡೆದಿದೆ ಅಂತೀದ್ದೀರಿ. ಆದರೆ ಸಚಿವರು ಜೋರಾಗಿ ಕಿರುಚಾಡಿದ ಶಬ್ದ ಬಂದಂತೆ ಇತ್ತಲ್ಲ ಎಂದರೆ...
‘ಹೌದಾ..? ಸಚಿವರು ಮಾಮೂಲಾಗಿಯೇ ಮಾತಾಡ್ತಿದ್ದರು. ಮೈಕ್‌ಗಳು ಒಳ್ಳೆಯವಿದ್ದವು. ಹೀಗಾಗಿ ಸೌಂಡ್ ಜಾಸ್ತಿ ಬಂದಿದೆಯಷ್ಟೇ’ ಎಂದು ಬಿಡುವುದೇ!!!
ನಿಜ ಬಿಡಿ, ಸಚಿವರದ್ದೇನೂ ಗದ್ದಲ ಇಲ್ಲ. ಎಲ್ಲ ಮೈಕ್ ಸೆಟ್‌ನದ್ದೇ ತಪ್ಪು!
ಕುದುರೆಯೇರಿ ಬರೋ ಡೈರೆಕ್ಟರ್!
‘ರೇಷ್ಮೆ ಇಲಾಖೆ ಜಾಯಿಂಟ್ ಡೈರೆಕ್ಟರ್ರು ಬೆಳಗ್ಗೆ 10 ಗಂಟೆಗೆ ಕುದುರೆ ಮೇಲೆ ಆಫೀಸಿಗೆ ಬರ್ತಾರ್ರಿ. ಅಲ್ಲಿ ಸ್ವಲ್ಪ ಶಿಸ್ತು ತನ್ನಿ’!
ಈ ಮಾತು ದೇವರಾಜ ಅರಸು ಅವರದ್ದು. ಆ ಕಾಲದಲ್ಲಿ ನಾಡಿನಲ್ಲಿ ಸೆರಿಕಲ್ಚರ್ ಬೆಳೆಸಬೇಕು ಎಂಬ ಬಯಕೆ ಹೊಂದಿದ್ದ ಅರಸು ಅವರು ರೇಷ್ಮೆ ಇಲಾಖೆ ನಿರ್ದೇಶಕ ಸ್ಥಾನಕ್ಕೆ ಐಎಎಸ್ ಅಧಿಕಾರಿ ಅವರನ್ನು ತಾವೇ ಆಯ್ಕೆ ಮಾಡಿ ನೇಮಿಸಿದ್ದರು.
ಆದರೆ, ಅಧಿಕಾರ ವಹಿಸಿಕೊಳ್ಳುವ ದಿನ ಆ ಅಧಿಕಾರಿ ‘ಸರ್.. ನಾನು ಓದಿದ್ದು ಎಕನಾಮಿಕ್ಸ್, ಸೆರಿಕಲ್ಚರ್ ಡಿಪಾರ್ಟ್‌ಮೆಂಟಿಗೆ ಬಾಟ್ನಿ, ಜಿಯಾಲಜಿಯ ಟೆಕ್ನಿಕಲ್ ಜ್ಞಾನ ಬೇಕಾಗತ್ತೆ’ ಎಂದಾಗ ಅರಸರು, ಆ ಮಣ್ಣು, ಮಸಿ ಏನೂ ಬೇಕಾಗಿಲ್ರಿ. ಡಿಪಾರ್ಟ್‌ಮೆಂಟ್‌ನಲ್ಲಿ ಶಿಸ್ತು ತರಬೇಕು. ಅದಕ್ಕೆ ನಿಮ್ಮನ್ನು ನೇಮಿಸ್ತಿರೋದು ಎಂದಿದ್ದರಂತೆ.
ಜತೆಗೆ, ಅದೇ ಇಲಾಖೆಯ ಜಂಟಿ ನಿರ್ದೇಶಕರು ಕುದುರೆ ಮೇಲೆ ಬರ್ತಾರೆ ಎಂಬ ಡೈಲಾಗು ಹೊಡೆದಿದ್ದರಂತೆ. ಅರಸು ಅವರ ಈ ಮಾತು ಹೊಸ ಡೈರೆಕ್ಟರ್ ಸಾಹೇಬರಿಗೆ ಗೊತ್ತಾಗಿರಲಿಲ್ಲ.
ಜಂಟಿ ನಿರ್ದೇಶಕರು ಕುದುರೆ ಮೇಲೆ ಏಕೆ ಬರುತ್ತಾರೆ. ಇಲಾಖೆ ಅವರಿಗೆ ಕಾರು ಕೊಟ್ಟಿಲ್ಲವೇ ಎಂದು ಅಚ್ಚರಿ ಪಟ್ಟಿದ್ದರಂತೆ. ಆಮೇಲೆ ಅವರಿಗೆ ಗೊತ್ತಾಗಿದ್ದು ಸದರಿ ಜಂಟಿ ನಿರ್ದೇಶಕರು ‘ಬ್ಲಾಕ್ ನೈಟ್’ ಎಂಬ ಆ ಕಾಲದ ಫೇಮಸ್ ವಿಸ್ಕಿ ಪ್ರಿಯ!
ಆ ವಿಸ್ಕಿಯ ಬಾಟಲಿ ಮೇಲೆ ಕಪ್ಪು ಕುದುರೆಯೇರಿ ಕುಳಿತ ಸೈನಿಕನ ಚಿತ್ರ ಇರುತ್ತಿದ್ದಂತೆ. ಸದರಿ ಅಧಿಕಾರಿ ರಾತ್ರಿ ಆ ವಿಸ್ಕಿಯೇರಿಸಿಕೊಂಡು ಬೆಳಗ್ಗೆ ಆಫೀಸಿಗೆ ಬರುತ್ತಾರೆ ಅಂತ ಅರಸು ಸಾಹೇಬರ ಮಾತಿನ ಅರ್ಥ.
ಅಂದ ಹಾಗೆ ಅವತ್ತು ರೇಷ್ಮೆ ಇಲಾಖೆಗೆ ಹೊಸ ಡೈರೆಕ್ಟರ್ ಆಗಿ ಬಂದಿದ್ದವರು ವಿ.ಬಾಲಸುಬ್ರಮಣಿಯನ್ (ವಿ.ಬಾಲು). ರಾಜ್ಯದ ಸೆರಿಕಲ್ಚರ್ ಡಿಪಾರ್ಟ್‌ಮೆಂಟ್‌ಗೆ ಆಧುನಿಕ ಸ್ಪರ್ಶ ಕೊಟ್ಟ ಬಾಲು ಅವರಿಗೆ ಈಚೆಗೆ ಎಸ್‌ಎಐ ‘ರೇಷ್ಮೆ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ಆ ಕಾರ್ಯಕ್ರಮದಲ್ಲಿ ಬಾಲು ಅವರು ತಾವು ಇಲಾಖೆಗೆ ಬಂದ ದಿನಗಳನ್ನು ಹೀಗೆ ಸ್ಮರಿಸಿದರು.
ಯಾತ್ರೆಗೆ ಬಂದ ಜನರ ಅಸಲಿ ಉದ್ದೇಶ!
ಭ್ರಷ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿಯಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ನಡೆಯುತ್ತಿತ್ತು. ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ ವಿರುದ್ಧ ಜನಾಕ್ರೋಶದ ಯಾತ್ರೆ ಗುರುವಾರ ವಿಜಯಪುರಕ್ಕೂ ಆಗಮಿಸಿತ್ತು.
ಅಂದು ಸಂಜೆ ನಗರದ ದರಬಾರ ಗ್ರೌಂಡ್‌ನಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ನೆರೆದಿದ್ದರು. ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿಯವರು ಆಕ್ರೋಶ ಭರಿತವಾಗಿ ಮಾತನಾಡುತ್ತಾ, ರಾಜ್ಯದಲ್ಲಿ ಜನಾಕ್ರೋಶ ಎಷ್ಟರ ಮಟ್ಟಿಗಿದೆ ಎಂದರೆ ನಿಮ್ಮನ್ನ ನೋಡಿದರೆ ಗೊತ್ತಾಗುತ್ತದೆ. ಈ ಆಕ್ರೋಶ ಬೆಳಗಿನ ಜಾವ ಹಾಲು ಕುಡಿಯೋದ್ರಿಂದ ಹಿಡಿದು ಶುರುವಾಗಿ ರಾತ್ರಿ ಆಲ್ಕೋಹಾಲ್ ಕುಡಿಯುವವರೆಗೂ ಇರುತ್ತದೆ ಎಂದುಬಿಟ್ಟರು!
ಅಷ್ಟಕ್ಕೆ ಸುಮ್ಮನಾಗದ ಅವರು, ನೋಡಿ ಕೆಲವರಿಗೆ ಬಹಳ ಆಕ್ರೋಶವಿದೆ. ಅವರು ಈಗಾಗಲೇ ಆಲ್ಕೋಹಾಲಿಗೆಂದು ಹೊರಟು ಬಿಟ್ಟಿದ್ದಾರೆ. ಅವರಂತೆ ನೀವ್ಯಾರಾದರೂ ಇಲ್ಲಿಂದ ಕದಲಿದರೆ.. ನೀವು ಆಲ್ಕೋಹಾಲಿಗೆ ಹೊರಟಿದ್ದೀರಿ ಎಂದು ತಪ್ಪು ತಿಳಿದುಕೊಳ್ತಾರೆ. ಯಾರೂ ಎದ್ದೇಳಬೇಡಿ ಎಂದು ಪುಕ್ಕಟ್ಟೆ ಸಂದೇಶ ಕೂಡ ಕೊಟ್ರು!
ಈ ಸಂದೇಶ ಕೇಳಿಸಿಕೊಂಡ ಕೂಡಲೇ ಅಲ್ಲಿದ್ದ ಬಹುತೇಕ ಮಂದಿಗೆ ತಾವು ಯಾತ್ರೆಗೆ ಬಂದ ಅಸಲಿ ಉದ್ದೇಶ ಅರಿವಾಗಿ ಜಾಗ ಖಾಲಿ ಮಾಡಿದ್ರಂತೆ!
-ಶ್ರೀಕಾಂತ್ ಎನ್. ಗೌಡಸಂದ್ರ
-ಮಯೂರ್ ಹೆಗಡೆ
-ಶಶಿಕಾಂತ ಮೆಂಡೆಗಾರ,