ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರೇ ನಂಬರ್‌ 1!

Published : May 28, 2026, 07:36 AM IST
CM Siddaramaiah accept caste census report

ಸಾರಾಂಶ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಬುಧವಾರ ಸಲ್ಲಿಸಿದ ಜಾತಿ ಗಣತಿಯ ಅಂತಿಮ ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32ರಿಂದ 42ಕ್ಕೆ ಹೆಚ್ಚಿಸಿ ಶಿಫಾರಸು ಮಾಡಿದೆ.

 ಬೆಂಗಳೂರು :  ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಬುಧವಾರ ಸಲ್ಲಿಸಿದ ಜಾತಿ ಗಣತಿಯ ಅಂತಿಮ ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32ರಿಂದ 42ಕ್ಕೆ ಹೆಚ್ಚಿಸಿ ಶಿಫಾರಸು ಮಾಡಿದೆ. ಅಲ್ಲದೆ, ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ, 80.14 ಲಕ್ಷ ಜನಸಂಖ್ಯೆ ಹೊಂದಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 14ರಷ್ಟು ಮುಸ್ಲಿಮರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ವರದಿಯು 13 ಅಧ್ಯಾಯ ಒಳಗೊಂಡಿದ್ದು, ರಾಜ್ಯದ ಪ್ರತಿ ಜಾತಿ ಹೊಂದಿರುವ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ, ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ ಶೇ. 14ರಷ್ಟಿದ್ದು, ನಂತರದ ಸ್ಥಾನದಲ್ಲಿ ವೀರಶೈವರು- ಲಿಂಗಾಯತರು ಹಾಗೂ ಕುರುಬ ಸಮುದಾಯ ಇದೆ ಎಂದು ತಿಳಿಸಿದೆ.

ಮುಸ್ಲಿಂ ಸಮುದಾಯದ ನಂತರ ವೀರಶೈವ/ಲಿಂಗಾಯತ ಸಮುದಾಯದ ಜನಸಂಖ್ಯೆ 65 ಲಕ್ಷ ಇದ್ದು, ಜನಸಂಖ್ಯೆಯಲ್ಲಿ ಶೇ.11ರಷ್ಟು ಪಾಲು ಹೊಂದಿದೆ. ಒಕ್ಕಲಿಗರು 60 ಲಕ್ಷ ಇದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ. 10ರಷ್ಟಿದೆ. ಕುರುಬರು 45 ಲಕ್ಷ ಇದ್ದು, ಜನಸಂಖ್ಯೆಯಲ್ಲಿ ಶೇ.8ರಷ್ಟಿದ್ದಾರೆ ಎಂದು ತಿಳಿಸಲಾಗಿದೆ.

ರಾಜ್ಯದ 6.14 ಕೋಟಿ ಜನರ ಪೈಕಿ 5.86 ಕೋಟಿ ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದರು. ಈ ಪೈಕಿ ಮುಸ್ಲಿಂ ಸಮುದಾಯದ ಸಂಖ್ಯೆ ಅತಿ ಹೆಚ್ಚುಇರುವುದು ಗಮನಾರ್ಹವಾಗಿದೆ.

ಕಳೆದ ವರ್ಷ ರಾಜ್ಯಾದ್ಯಂತ ನಡೆಸಿದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು (ಜಾತಿ ಗಣತಿ ವರದಿ) ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ್‌ ಹಾಗೂ ಸದಸ್ಯರು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಈ ವೇಳೆ ಹಲವು ಸಚಿವರು, ಆಯೋಗದ ಸದಸ್ಯರು ಉಪಸ್ಥಿತರಿದ್ದರು.

ಮೀಸಲಾತಿ ಶೇ. 42ಕ್ಕೆ ಹೆಚ್ಚಳ:

ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32ರಿಂದ 42ಕ್ಕೆ ಹೆಚ್ಚಿಸಿ ಶಿಫಾರಸು ಮಾಡಿದೆ. ವರದಿಯು 13 ಅಧ್ಯಾಯ ಒಳಗೊಂಡಿದ್ದು, ರಾಜ್ಯದ ಪ್ರತಿ ಜಾತಿ ಹೊಂದಿರುವ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಸಮಗ್ರ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಹಲವಾರು ಶಿಫಾರಸುಗಳನ್ನು ಮಾಡಲಾಗಿದೆ.

ಪ್ರಮುಖವಾಗಿ ಪ್ರವರ್ಗ-1ರಲ್ಲಿನ ಜಾತಿಗಳನ್ನು ಎರಡು ಭಾಗ, ಪ್ರವರ್ಗ-2 ಹಾಗೂ ಪ್ರವರ್ಗ-3ರಲ್ಲಿನ ಜಾತಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ಮೀಸಲಾತಿ ನಿಗದಿ ಪಡಿಸಿದೆ.

ಎರಡು ಮಾದರಿ ಮೀಸಲಾತಿ:

ಸರ್ಕಾರ ಹಾಲಿ ಇರುವ ಮೀಸಲಾತಿ ಪ್ರಮಾಣವನ್ನು ಶೇ. 32ಕ್ಕೆ ಸೀಮಿತಗೊಳಿಸಲು ಉದ್ದೇಶಿಸಿದರೆ ಪ್ರವರ್ಗ-1ರ ಎರಡು ಭಾಗಗಳಿಗೆ ತಲಾ ಶೇ.3ರಷ್ಟು, ಪ್ರವರ್ಗ-2ಎಗೆ ಶೇ. 8, ಬಿಗೆ ಶೇ.4 ಹಾಗೂ 2ಸಿಗೆ ಶೇ.5 ರಷ್ಟು ಮೀಸಲಾತಿ ನೀಡಬೇಕು. ಪ್ರವರ್ಗ-3ಗೆ ಶೇ. 3ಬಿಗೆ ಶೇ. 4 ಹಾಗೂ 3ಸಿಗೆ ಶೇ. 2ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿದೆ.

ಮೀಸಲಾತಿ ಪ್ರಮಾಣವನ್ನು ಶೇ. 42ಕ್ಕೆ ಹೆಚ್ಚಿಸಲು ನಿರ್ಧರಿಸಿದರೆ ಪ್ರವರ್ಗ 1ಎಗೆ ಶೇ. 4, 1ಬಿಗೆ ಶೇ. 4, 2ಎಗೆ ಶೇ.10, 2ಬಿಗೆ ಶೇ. 6, 2ಸಿಗೆ ಶೇ.6, 3ಎಗೆ ಶೇ.4, 3ಬಿಗೆ ಶೇ.5 ಹಾಗೂ 3ಸಿಗೆ ಶೇ.3ರಷ್ಟು ಮೀಸಲಾತಿ ನೀಡಲು ಆಯೋಗ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.

ಮುಸ್ಲಿಮರು 

80.14 ಲಕ್ಷ - 14%

ವೀರಶೈವ-ಲಿಂಗಾಯತ

65 ಲಕ್ಷ -  11%

ಒಕ್ಕಲಿಗರು

60 ಲಕ್ಷ - 10%

ಕುರುಬರು

45 ಲಕ್ಷ - 8%

ಸಂತೋಷದಿಂದ ವರದಿ ಸ್ವೀಕಾರ

ಇಂದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಈ ವರದಿಯು ಮಾರ್ಗದರ್ಶಿಯಾಗಲಿ ಎಂದು ಆಶಿಸುತ್ತೇನೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಡಗ್ಸ್‌ ಕೇಸಲ್ಲಿ ನೈಜೀರಿಯಾ ಪ್ರಜೆಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌
ಎಪಿಕೆ ಫೈಲ್‌ ಸೃಷ್ಟಿಸಿ ವಂಚನೆ ಕೇಸಲ್ಲಿ ಉದ್ಯೋಗಿ ಬಂಧನ ಬೇಡ : ಹೈಕೋರ್ಟ್