ಕನ್ನಡಿಗರಿಗೆ ಉದ್ಯೋಗ ಮೀಸಲು ನಾಸ್ಕಾಂ ವಿರೋಧ : ಕಾಂಗ್ರೆಸ್‌ ಸರ್ಕಾರದ ನಿರ್ಧಾರ ನಿರಾಶಾದಾಯಕ

Published : Jul 18, 2024, 09:49 AM IST
jobs

ಸಾರಾಂಶ

ಖಾಸಗಿ ಕಂಪನಿಗಳಲ್ಲೂ ಕನ್ನಡಿಗರಿಗೆ ಮೀಸಲು ಕಲ್ಪಿಸುವ ಸಂಬಂಧ ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ದೇಶದ ಮಾಹಿತಿ ತಂತ್ರಜ್ಞಾನ ವಲಯದ ಪ್ರತಿನಿಧಿಯಾದ ‘ನಾಸ್ಕಾಂ’ ತೀವ್ರ ವಿರೋಧ ವ್ಯಕ್ತಪಡಿಸಿದೆ.

ನವದೆಹಲಿ: ಖಾಸಗಿ ಕಂಪನಿಗಳಲ್ಲೂ ಕನ್ನಡಿಗರಿಗೆ ಮೀಸಲು ಕಲ್ಪಿಸುವ ಸಂಬಂಧ ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ದೇಶದ ಮಾಹಿತಿ ತಂತ್ರಜ್ಞಾನ ವಲಯದ ಪ್ರತಿನಿಧಿಯಾದ ‘ನಾಸ್ಕಾಂ’ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬುಧವಾರ ಹೇಳಿಕೆ ನೀಡಿರುವ ನಾಸ್ಕಾಂ, ‘ರಾಜ್ಯ ಸರ್ಕಾರವು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ಸಂಬಂಧ ಅಂಗೀಕರಿಸಿರುವ ವಿಧೇಯಕ ನಿರಾಶದಾಯಕ ಮತ್ತು ಕಳವಳಕಾರಿ. ಸ್ಥಳೀಯವಾಗಿ ಕೌಶಲ್ಯಯುತ ಸಿಬ್ಬಂದಿ ಕೊರತೆಯಾದರೆ ಕಂಪನಿಗಳು ರಾಜ್ಯ ತೊರೆಯುವಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಸರ್ಕಾರ ಈ ವಿಧೇಯಕ ಹಿಂಪಡೆಯಬೇಕು’ ಎಂದು ಅದು ಒತ್ತಾಯಿಸಿದೆ.

‘ವಿಧೇಯಕದಲ್ಲಿನ ಅಂಶಗಳು, ಕಂಪನಿಗಳು ಮತ್ತು ಸ್ಟಾರ್ಟಪ್‌ಗಳು ರಾಜ್ಯದಿಂದ ದೂರ ಸರಿಯುವಂತೆ ಮಾಡಬಹುದು, ಅದರಲ್ಲೂ ಜಾಗತಿಕ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿರುವಾಗ ಈ ಕಾಯ್ದೆಯು ಅವನ್ನು ರಾಜ್ಯದಿಂದ ದೂರ ಸಾಗುವಂತೆ ಮಾಡಬಹುದು’ ಎಂದು ಎಚ್ಚರಿಸಿದೆ.

ಜೊತೆಗೆ, ‘ಜಾಗತಿಕವಾಗಿ ಕುಶಲ ಸಿಬ್ಬಂದಿಗಳ ಭಾರೀ ಕೊರತೆ ಇದೆ. ಕರ್ನಾಟಕದಲ್ಲಿ ಕುಶಲ ಸಿಬ್ಬಂದಿಗಳ ದೊಡ್ಡ ಸಂಖ್ಯೆ ಇರುವ ಹೊರತಾಗಿಯೂ ಅದು ಕೊರತೆಯಿಂದ ಹೊರತಾಗಿಲ್ಲ. ಯಾವುದೇ ರಾಜ್ಯವೊಂದು ತಂತ್ರಜ್ಞಾನ ವಲಯದ ಕೇಂದ್ರ ಸ್ಥಾನವಾಗಿ ಹೊರಹೊಮ್ಮಲು 2 ನೀತಿಗಳು ಮುಖ್ಯ. ಒಂದು- ಜಗತ್ತಿನೆಲ್ಲೆಡೆ ಇರುವ ಕೌಶಲ್ಯಯುತ ಸಿಬ್ಬಂದಿಗಳನ್ನು ಸೆಳೆಯುವುದು; 2ನೆಯದು- ಸದೃಢ ಕುಶಲ ಸಿಬ್ಬಂದಿಗಳ ಗುಂಪು ರಚಿಸಲು ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮಾರ್ಗಗಳ ಮೂಲಕ ನಿರ್ದಿಷ್ಟ ವಲಯದಲ್ಲಿ ಹೂಡಿಕೆ ಮಾಡುವುದು’ ಎಂದು ಹೇಳಿದೆ.

ಅಲ್ಲದೆ ತಂತ್ರಜ್ಞಾನ ವಲಯದ ಕಂಪನಿಗಳ ವಲಯದ ಕಳವಳವನ್ನು ನಿವಾರಿಸುವ ಸಲುವಾಗಿ ಸರ್ಕಾರ ಶೀಘ್ರವೇ ಸಭೆಯೊಂದನ್ನು ಕರೆಯಬೇಕು ಎಂದೂ ನಾಸ್ಕಾಂ ಮನವಿ ಮಾಡಿದೆ.

ಖಾಸಗಿ ವಲಯ ಸೇರಿದಂತೆ ಎಲ್ಲಾ ಕೈಗಾರಿಕೆಗಳ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲು ನೀಡುವ ವಿಧೇಯಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪುಟ ಅನುಮತಿ ನೀಡಿತ್ತು.

ಮಾಹಿತಿ ತಂತ್ರಜ್ಞಾನ ವಲಯ, ಕರ್ನಾಟಕದ ಒಟ್ಟು ಆರ್ಥಿಕ ಪ್ರಗತಿಗೆ ಶೇ.25ರಷ್ಟು ಕಾಣಿಕೆ ನೀಡುತ್ತದೆ.

 

PREV

Recommended Stories

ಕಠಿಣ ಅಭ್ಯಾಸ ಮಾಡಿದರೆ ಸಾಧನೆ ಸುಲಭ: ಎಸ್ಪಿ ರೋಹನ್‌ ಜಗದೀಶ್
ಜಾತಿ ಗಣತಿ ಈಗ ಕಗ್ಗಂಟು