ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ

Published : Jul 16, 2025, 06:38 AM IST
court

ಸಾರಾಂಶ

ರಾಜ್ಯಾದ್ಯಂತ ಕಳೆದ ಶನಿವಾರ (ಜು.12)ರಂದು ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ನ್ಯಾಯಾಲಯಗಳಲ್ಲಿ ಒಟ್ಟು 58.67 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹2,878 ಕೋಟಿ ಪರಿಹಾರ ಕಲ್ಪಿಸಲಾಗಿದೆ

ಬೆಂಗಳೂರು : ರಾಜ್ಯಾದ್ಯಂತ ಕಳೆದ ಶನಿವಾರ (ಜು.12)ರಂದು ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ನ್ಯಾಯಾಲಯಗಳಲ್ಲಿ ಒಟ್ಟು 58.67 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹2,878 ಕೋಟಿ ಪರಿಹಾರ ಕಲ್ಪಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ವಿ.ಕಾಮೇಶ್ವರರಾವ್‌ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅದಾಲತ್‌ನಲ್ಲಿ ಒಟ್ಟು 1,022 ಪೀಠಗಳನ್ನು ಸ್ಥಾಪಿಸಲಾಗಿತ್ತು. ಅದರಲ್ಲಿ ಹೈಕೋರ್ಟ್‌ಗಳಲ್ಲಿದ್ದ 1182, ಹಾಗೂ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿದ್ದ 3,09,995 ಪ್ರಕರಣ ಸೇರಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಒಟ್ಟು 3,11,177 ಮತ್ತು 55,56,255 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯಗಳಲ್ಲಿ ಬಾಕಿಯಿದ್ದ 3.11 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾದರೆ 1,152 ನ್ಯಾಯಾಧೀಶರು 68 ದಿನ ಕಾರ್ಯನಿರ್ವಹಿಸಬೇಕಾಗುತ್ತಿತ್ತು ಎಂದು ಮಾಹಿತಿ ನೀಡಿದರು.

ಅದಾಲತ್‌ನಲ್ಲಿ 1,756 ವೈವಾಹಿಕ ಪ್ರಕರಣಗಳನ್ನು ಪರಿಹರಿಸಿ, ಒಟ್ಟು 331 ದಂಪತಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಈ ಬಾರಿಯ ಅದಾಲತ್‌ನಲ್ಲಿ 4015 ವಿಭಾಗ ದಾವೆ (ಪಾರ್ಟಿಷನ್‌ ಸೂಟ್‌) ವಿಲೇವಾರಿ ಮಾಡಲಾಗಿದೆ. 4,961 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು ಇತ್ಯರ್ಥಪಡಿಸಿ, ಸಂತ್ರಸ್ತರಿಗೆ ₹290 ಕೋಟಿ ಪರಿಹಾರ ಕಲ್ಪಿಸಲಾಗಿದೆ. ಒಟ್ಟು 13,542 ಚೆಕ್‌ ಬೌನ್ಸ್‌ ಪ್ರಕರಣಗಳು ವಿಲೇವಾರಿ, ₹572 ಕೋಟಿ ಪರಿಹಾರ ನೀಡಲಾಗಿದೆ. 456 ಎಲ್‌ಎಸಿ ಅಮಲ್ದಾರಿ ಪ್ರಕರಣಗಳ ಇತ್ಯರ್ಥಪಡಿಸಿ, ₹64 ಕೋಟಿ ಪರಿಹಾರ, 375 ಗ್ರಾಹಕ ವ್ಯಾಜ್ಯಗಳ ವಿಲೇವಾರಿ ಮಾಡಿ ₹406 ಕೋಟಿ ಪರಿಹಾರ ಒದಗಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

5 ವರ್ಷಕ್ಕೂ ಹಳೆಯ 2377, 10 ವರ್ಷಕ್ಕೂ ಹಳೆಯ 275 ಹಾಗೂ 15 ವರ್ಷಕ್ಕೂ ಹಳೆಯ 38 ಪ್ರಕರಣ ಸೇರಿ ಒಟ್ಟು 2689 ಹಳೆಯ ಪ್ರಕರಣ ಇತ್ಯರ್ಥ. ರಾಜಿ ಸಂಧಾನದ ಮೂಲಕ ಬೆಂಗಳೂರಿನ 8ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಕೋರ್ಟ್‌ನಲ್ಲಿದ್ದ 28 ವರ್ಷ ಹಾಗೂ 27 ವರ್ಷಗಳಷ್ಟು ಹಳೆಯದಾದ ಕ್ರಿಮಿನಲ್‌ ಪ್ರಕರಣ ವಿಲೇವಾರಿ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ₹1.75 ಕೋಟಿ ಮೊತ್ತದ ಒಂದು ಮೋಟಾರು ವಾಹನ ಅಪಘಾತ ಪ್ರಕರಣ, ₹6.56 ಕೋಟಿ ಮೊತ್ತದ ಒಂದು ಹಾಗೂ ₹5.15 ಕೋಟಿ ಮೊತ್ತದ ಮತ್ತೊಂದು ಚೆಕ್‌ ಬೌನ್ಸ್‌ ಪ್ರಕರಣಗಳ ಇತ್ಯರ್ಥಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಅಸಲು ದಾವೆ ಇತ್ಯರ್ಥ ಮಾಡಿ, ₹40.66 ಕೋಟಿ ಪರಿಹಾರದ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಮುಂದಿನ ರಾಷ್ಟ್ರೀಯ ಲೋಕ್‌ ಅದಾಲತ್‌ ಸೆ.13ರಂದು ರಾಜ್ಯಾದ್ಯಂತ ನಡೆಯಲಿದೆ ಎಂದು ನ್ಯಾ.ವಿ.ಕಾಮೇಶ್ವರ್‌ ರಾವ್‌ ಅವರು ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ