ಕೆಂಪೇಗೌಡ ಬಡಾವಣೆಯಲ್ಲಿ ಸೈಟ್ ಪಡೆಯಲು ಪುಣ್ಯ ಬೇಕು : ಪೊಲೀಸಪ್ಪನಿಗೆ ಹೈ ಕೋರ್ಟ್

Published : Jan 23, 2025, 07:38 AM IST
Highcourt

ಸಾರಾಂಶ

ಮೈಸೂರಿನ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ವೈ.ವೈ. ಬಗಲಿ ಅವರು ಕಾಡುಗಳ್ಳ ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರೇ ಎಂಬ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬುಧವಾರ ಸೂಚಿಸಿದೆ.

 ಬೆಂಗಳೂರು : ಮೈಸೂರಿನ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ವೈ.ವೈ. ಬಗಲಿ ಅವರು ಕಾಡುಗಳ್ಳ ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರೇ ಎಂಬ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬುಧವಾರ ಸೂಚಿಸಿದೆ.

ಹೈಕೋರ್ಟ್‌ ಆದೇಶದ ಹೊರತಾಗಿಯೂ ತಮಗೆ ಪ್ರತಿ ಚದರ ಅಡಿಗೆ 2,100 ರು. ದರದಲ್ಲಿ ನಿವೇಶನ ಮಂಜೂರು ಮಾಡಲು ಬಿಡಿಎ ಹಾಗೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನಿವೃತ್ತ ಕಮಾಂಡಂಟ್‌ ರಾಮದಾಸ್‌ ಗೌಡ ಮತ್ತು ನಿವೃತ್ತ ಸಹಾಯಕ ಆಡಳಿತಾಧಿಕಾರಿ ವೈ.ವೈ. ಬಗಲಿ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಬಗಲಿ ಅವರು ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗಿಯಾಗಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದನ್ನು ಆಕ್ಷೇಪಿಸಿದ ಬಗಲಿ ಪರ ವಕೀಲರು, ತಮ್ಮ ಕಕ್ಷಿದಾರರು ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಗಲಿ ಅವರು ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಅಲ್ಲದೆ, ಒಂದೊಮ್ಮೆ ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿಲ್ಲ ಎಂಬುದು ದೃಢಪಟ್ಟರೆ, ಬಗಲಿ ಅವರು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಅವರಿಗೆ ಮಂಜೂರು ಮಾಡಿರುವ ನಿವೇಶನ ಹಿಂಪಡೆಯುವಂತೆ ಸರ್ಕಾರಕ್ಕೆ ಸೂಚಿಸಬೇಕಾಗುತ್ತದೆ ಎಂದು ನ್ಯಾಯಪೀಠ ಇದೇ ವೇಳೆ ಎಚ್ಚರಿಕೆ ನೀಡಿದೆ.

ವೀರಪ್ಪನ್‌ ಹುಟ್ಟೂರಲ್ಲಿ ನಿವೇಶನ ನೀಡಬೇಕಿತ್ತು:

ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಪಡೆಯಬೇಕಾದರೆ ಯಾವುದೋ ಜನ್ಮದಲ್ಲಿ ಪುಣ್ಯ ಮಾಡಿರಬೇಕಾಗುತ್ತದೆ. ವೀರಪ್ಪನ್‌ ಅನ್ನು ಜೀವಂತವಾಗಿ ಸೆರೆಹಿಡಿಯಲಿಲ್ಲ. ಆದರೆ, ಕೆಂಪೇಗೌಡ ಬಡಾವಣೆಯಲ್ಲಿ ಮಂಜೂರು ಮಾಡಿರುವ ನಿವೇಶನವನ್ನು ಪಡೆದು ಸುಮ್ಮನಿರುವ ಬದಲು ಹೆಚ್ಚಿನ ದರದಲ್ಲಿ ನಿವೇಶನ ಮಂಜೂರು ಮಾಡಲಾಗಿದೆ ಎಂದು ಆಕ್ಷೇಪಿಸಿ ಅರ್ಜಿದಾರರು ಕೋರ್ಟ್‌ಗೆ ಬಂದಿರುವುದು ವಿಪರ್ಯಾಸ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ಹಾಗೆಯೇ, ಸರ್ಕಾರ ಸಿಕ್ಕಸಿಕ್ಕ ಕಡೆಯೆಲ್ಲೆಲ್ಲಾ ನಿವೇಶನ ನೀಡಿದರೆ ಇಂತಹ ಬೆಳವಣಿಗೆಗಳೇ ನಡೆಯುತ್ತವೆ. ವೀರಪ್ಪನ್‌ ಹುಟ್ಟೂರು ಗೋಪಿನಾಥಂನಲ್ಲಿ ನಿವೇಶನ ಮಂಜೂರು ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಆಗ ಮಂಜೂರುದಾರರು ಗೋಪಿನಾಥಂನಲ್ಲೇ ನೆಲೆಸುತ್ತಿದ್ದರೇ ಎಂಬುದನ್ನು ನೋಡಬಹುದಿತ್ತು ಎಂದು ಪೀಠ ಹೇಳಿದೆ.

ಪ್ರಕರಣದ ವಿವರ

ಕೆಂಪೇಗೌಡ ಬಡಾವಣೆಯಲ್ಲಿ ರಾಮದಾಸ್‌ ಗೌಡ ಅವರಿಗೆ 60*40 ಮತ್ತು ವೈ.ವೈ.ಬಗಲಿ ಅವರಿಗೆ 30*40 ಚದರ ಅಡಿ ವಿಸ್ತೀರ್ಣದ ನಿವೇಶನ ಮಂಜೂರು ಮಾಡಿ 2017ರಲ್ಲಿ ಬಿಡಿಎ ಪತ್ರ ನೀಡಿತ್ತು. ಆದರೆ, 2018ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅವರು, ಸರ್ಕಾರದ 2010ರ ಡಿ.18ರಂದು ಹೊರಡಿಸಿದ ಆದೇಶದಂತೆ ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್‌ ಅಧಿಕಾರಿಗಳು ಪ್ರತಿ ಚದರ ಮೀಟರ್‌ಗೆ 2,100 ರು. ದರಲ್ಲಿ ನಿವೇಶನ ಪಡೆಯಲು ಅರ್ಹರಾಗಿದ್ದಾರೆ. ಆದರೆ, ತಮಗೆ ಮಂಜೂರು ಮಾಡಲಾದ ನಿವೇಶನದ ಪ್ರತಿ ಚದರ ಮೀಟರ್‌ಗೆ ಕ್ರಮವಾಗಿ 24,219 ರು. ಮತ್ತು 21,258 ರು. ದರ ನಿಗದಿಪಡಿಸಲಾಗಿದೆ ಎಂದು ಆಕ್ಷೇಪಿಸಿದ್ದರು.

ಅರ್ಜಿಯನ್ನು 2021ರ ನ.17ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠ, 2010ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಂತೆ ಅದರಂತೆ ಪ್ರತಿ ಚದರ ಮೀಟರ್‌ಗೆ 2,100 ರು. ದರದಲ್ಲಿ ನಿವೇಶನ ಮಂಜೂರು ಮಾಡಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸರ್ಕಾರ ಹಾಗೂ ಬಿಡಿಎಗೆ ನಿರ್ದೇಶಿಸಿತ್ತು.

ಇದೀಗ ನ್ಯಾಯಾಂಗ ನಿಂದನೆ ಸಲ್ಲಿಸಿರುವ ಅರ್ಜಿದಾರರು, ಹೈಕೋರ್ಟ್‌ ಆದೇಶವನ್ನು ಉದ್ದೇಶಪೂರ್ವಕವಾಗಿ ಬಿಡಿಎ ಹಾಗೂ ಸರ್ಕಾರ ಪಾಲಿಸಿಲ್ಲ. ಹಾಗಾಗಿ, ಬಿಡಿಎ ಆಯುಕ್ತರು ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸುವಂತೆ ಕೋರಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕೃತಕ ಬುದ್ದಿಮತ್ತೆ ಯುಗದಲ್ಲಿ ಕೌಶಲ್ಯಕ್ಕೆ ಮನ್ನಣೆ
ಟೌನ್ ಬ್ಯಾಂಕ್ ನೂತನ ಸದಸ್ಯರಿಗೆ ಶಾಸಕ ಶರತ್‌ ಅಭಿನಂದನೆ