ನೆಟ್ಟಾರು ಹತ್ಯೆ ಆರೋಪಿ 4 ವರ್ಷಗಳ ಬಳಿಕ ಬಂಧನ

Published : Aug 07, 2026, 06:50 AM IST
Praveen Nettaru

ಸಾರಾಂಶ

ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸ್ಥಳೀಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.

 ಬೆಂಗಳೂರು :  ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸ್ಥಳೀಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.

ಎಂ.ಆರ್‌. ಉಮರ್‌ ಫಾರೂಕ್‌ ಬಂಧಿತ. ಖಚಿತ ಗುಪ್ತಚರ ಮಾಹಿತಿ ಮೇರೆಗೆ, ಎನ್‌ಐಎ ಅಧಿಕಾರಿಗಳ ತಂಡ ಕೇರಳದ ಕೊಚ್ಚಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತನ ಬಂಧನದೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ.

ಪಿತೂರಿ ಸಭೆಯಲ್ಲಿ ಭಾಗಿ:

ಸುಳ್ಯ ಪಟ್ಟಣದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಯಲ್ಲಿ ನಡೆದ ಪಿತೂರಿ ಸಭೆಯಲ್ಲಿ ಇತರೆ ಆರೋಪಿಗಳೊಂದಿಗೆ ಉಮರ್‌ ಫಾರೂಕ್‌ ಭಾಗವಹಿಸಿದ್ದ. ಪ್ರವೀಣ್‌ ನೆಟ್ಟಾರು ಕೊಲೆಗೂ ಮುನ್ನ ಬೆಳ್ಳಾರೆಯಲ್ಲಿ ಆತನ ಚಲವನಗಳ ಮೇಲೆ ನಿಗಾವಹಿಸಲು ಸಹ ಆರೋಪಿಗೆ ದ್ವಿಚಕ್ರ ವಾಹನ ನೀಡಿದ್ದ. ಈ ಪ್ರಕರಣದಲ್ಲಿ ಸಾಕ್ಷಿಯ ಹತ್ಯೆಗೆ ನಡೆದ ಪ್ರಯತ್ನದಲ್ಲಿಯೂ ಆರೋಪಿಗಳಿಗೆ ಈತ ಬೆಂಬಲಿಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಈತನ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌:

ಪ್ರವೀಣ್‌ ನೆಟ್ಟಾರು ಕೊಲೆ ಹಿಂದಿನ ಪಿತೂರಿಯ ಸಂಬಂಧ ಐಪಿಸಿ ವಿವಿಧ ಸೆಕ್ಷನ್‌ಗಳು ಮತ್ತು ಯುಎಪಿಎ ಕಾಯ್ದೆಯಡಿ ಎನ್‌ಐಎ ತನಿಖೆ ನಡೆಸಿ ಆರೋಪಿ ಉಮರ್‌ ಫಾರೂಕ್‌ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಮತ್ತು ಜಾಮೀನುರಹಿತ ಬಂಧನ ವಾರೆಂಟ್‌ ಹೊರಡಿಸಲಾಗಿತ್ತು. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 4 ಲಕ್ಷ ರು. ಬಹುಮಾನವನ್ನೂ ಸಹ ಎನ್‌ಐಎ ಘೋಷಿಸಿತ್ತು.

ಕಳೆದ ತಿಂಗಳು ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಅಬ್ದುಲ್‌ ನಾಸಿರ್‌ ಮತ್ತು ನೌಶಾದ್‌ ಅವರನ್ನು ಅಕ್ರಮವಾಗಿ ಕೇರಳದ ಕೊಚ್ಚಿ ಮತ್ತು ತಮಿಳುನಾಡಿನ ಹೊಸೂರಿನಲ್ಲಿ ಕಾರ್ಯಾಚರಣೆ ನಡೆಸಿ ಎನ್ಐಎ ಬಂಧಿಸಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೊಬ್ಬ ಆರೋಪಿ ಎನ್‌ಐಎ ಬಲೆಗೆ ಬಿದ್ದಿದ್ದಾನೆ.

ಪ್ರಕರಣದ ಹಿನ್ನೆಲೆ:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಟ್ಟಾರಿನ ಸ್ಥಳೀಯ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರನ್ನು 2022ರ ಜು.26ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಹತ್ಯೆ ಹಿಂದೆ ನಿಷೇಧಿತ ಪಿಎಫ್‌ಐ ಕಾರ್ಯಕರ್ತರ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಬಳಿಕ ಎನ್‌ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ನಿಷೇಧಿತ ಪಿಎಫ್ಐ ಕಾರ್ಯಕರ್ತರ ಆಯೋಜಿಸಿದ್ದ ದೊಡ್ಡ ಕ್ರಿಮಿನಲ್‌ ಪಿತೂರಿಯ ಭಾಗವಾಗಿ ಪ್ರವೀಣ್‌ ನೆಟ್ಟಾರು ಹತ್ಯೆಯಾಗಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿತ್ತು ಎಂದು ಎನ್‌ಐಎ ತಿಳಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಹಳ್ಳಿಗಳಲ್ಲೂ ಪಿಒಪಿ ಗಣೇಶ ಮೂರ್ತಿ ಬಳಸುವಂತಿಲ್ಲ
ಶಾಲೆಗಳು ಡೊನೇಷನ್‌ ಪಡೆದರೆ 10 ಪಟ್ಟು ದಂಡ