ಬೆಂಗಳೂರು : ವಿಮಾನ ನಿಲ್ದಾಣ ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿವಾರಣೆಗಾಗಿ ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗಿನ 1.5 ಕಿಮೀ ಉದ್ದದಲ್ಲಿ ನೂತನ ಟನಲ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದರ ಸಾಧಕ-ಬಾಧಕ ಹಾಗೂ ಹಣಕಾಸಿನ ನೆರವಿನ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹೆಬ್ಬಾಳ ಮೇಲ್ಸೇತುವೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಲೂಪ್ ರಸ್ತೆ ಉದ್ಘಾಟನೆ ನಂತರ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಕೆ.ಆರ್. ಪುರದಿಂದ ಮೇಖ್ರಿ ವೃತ್ತ ಕಡೆಗೆ ಸಾಗುವ ಭಾಗದಲ್ಲಿ 80 ಕೋಟಿ ರು. ವೆಚ್ಚದಲ್ಲಿ ಲೂಪ್ ರಸ್ತೆ ನಿರ್ಮಿಸಲಾಗಿದೆ. ಇನ್ನೊಂದು ಭಾಗದ ಲೂಪ್ ಅನ್ನು ನವೆಂಬರ್‌ಗೆ ಪೂರ್ಣಗೊಳಿಸಲಾಗುವುದು. ಒಟ್ಟು 300 ಕೋಟಿ ರು. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ನಗರದ ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸುವ ಸಲುವಾಗಿ 17 ಸಾವಿರ ಕೋಟಿ ರು. ವೆಚ್ಚದಲ್ಲಿ 16.5 ಕಿಮೀ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಅದಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಅದರಲ್ಲಿ ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗಿನ ಮಾರ್ಗವೂ ಸೇರಿದೆ. ವಿಮಾನನಿಲ್ದಾಣದಿಂದ ಬರುವವರಿಗೆ ಸಂಚಾರ ದಟ್ಟಣೆ ಇಲ್ಲದಂತೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಟನಲ್ ರಸ್ತೆ ಸೇರಿದಂತೆ ಮತ್ತಿತರ ಯೋಜನೆಗೆ ಸಂಬಂಧಿಸಿದಂತೆ ನಾನು ತುಂಬಾ ಪಾರದರ್ಶಕವಾಗಿದ್ದೇನೆ. ನನಗೆ ಕೆಲಸ ಮಾಡುವುದು ಮುಖ್ಯವೇ ಹೊರತು ಹಣವಲ್ಲ. ಯುವ ಸಂಸದನೊಬ್ಬ ನಾವು ಹಣಕ್ಕಾಗಿ ಟನಲ್ ರಸ್ತೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಮಗೆ ಹಣದ ಅಗತ್ಯವಿಲ್ಲ. ಬಿಜೆಪಿ ಅಧಿಕಾರಾವಧಿಯಲ್ಲಿ ಒಂದೇ ಒಂದು ಸಣ್ಣ ಕೆಲಸವನ್ನೂ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಒಂದೇ ಒಂದು ರು. ಹಣ ತಂದಿಲ್ಲ. ಅವರಿಗೆ ನಾಚಿಗೆಯಾಗಬೇಕು. ಬೆಂಗಳೂರು ಜಾಗತಿಕ ನಗರವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೂ ಅದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಸಂಚಾರ ದಟ್ಟಣೆ ನಿವಾರಣೆಯಾಗಲಿ:ರಮ್ಯಾ
ಮಾಜಿ ಸಂಸದೆ, ನಟಿ ರಮ್ಯಾ ಮಾತನಾಡಿ, ಕೆಆರ್ ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ವಾಹನಗಳು ಸರಾಗವಾಗಿ ಸಂಚರಿಸಲು ಹೆಬ್ಬಾಳ ಮೇಲ್ಸೇತುವೆಯಲ್ಲಿ ನಿರ್ಮಿಸಲಾಗಿರುವ ಲೂಪ್ ರಸ್ತೆ ಉದ್ಘಾಟನೆಯಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದರು.
ಮಳೆಗಾಲ ಬಂತೆಂದರೆ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ತೀವ್ರ ಸಮಸ್ಯೆಗೊಳಗಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ರಸ್ತೆ ದುರಸ್ತಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.