;Resize=(412,232))
ಬೆಂಗಳೂರು : ರಾಜ್ಯದಲ್ಲಿ ಹೊಸವರ್ಷಕ್ಕೆ ಮದ್ಯಪಾನ ಪ್ರಿಯರು ಸಕತ್ ಕಿಕ್ಕೇರಿಸಿದ್ದರಿಂದ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಬಂದಿದೆ. 2025ರ ಡಿಸೆಂಬರ್ ತಿಂಗಳ ಕೊನೆಯ 3 ದಿನಗಳಲ್ಲಿ ₹745.84 ಕೋಟಿ ಮೌಲ್ಯದ ಭಾರತೀಯ ಮದ್ಯ ಮತ್ತು ಬಿಯರ್ ಮಾರಾಟವಾಗಿದೆ. ಇದರಿಂದ ಅಬಕಾರಿ ಇಲಾಖೆಗೆ ₹587.51 ಕೋಟಿ ಆದಾಯ ಸಂಗ್ರಹವಾಗಿದೆ. 2024ಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇಕಡ 39.63ರಷ್ಟು ಹೆಚ್ಚಳವಾಗಿದೆ ಎಂದು ಅಬಕಾರಿ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
2025ರ ಡಿಸೆಂಬರ್ 29, 30 ಮತ್ತು 31ರ ನಡುವೆ 3 ದಿನಗಳ ಅವಧಿಯಲ್ಲಿ 9.84 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. 2024ರಲ್ಲಿ ಕ್ರಮವಾಗಿ 8.25 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 5.03 ಲಕ್ಷ ಬಾಕ್ಸ್ ಮತ್ತು ಬಿಯರ್ ಮಾರಾಟವಾಗಿತ್ತು.
ಇನ್ನು ಹೊಸ ವರ್ಷಾಚರಣೆ ದಿನ ಅಂದರೆ ಡಿ.31ರಂದು 3.53 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 2.25 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. 2024ರಲ್ಲಿ ಒಂದೇ ದಿನದಲ್ಲಿ ಅಬಕಾರಿ ಇಲಾಖೆಗೆ ₹266.73 ಕೋಟಿ ಆದಾಯ ಸಂಗ್ರಹವಾಗಿದ್ದರೆ, 2025ರಲ್ಲಿ ₹204 ಕೋಟಿ ಆದಾಯ ಬಂದಿದೆ.
ರಾಜ್ಯದಲ್ಲಿ 2025ರ ಡಿಸೆಂಬರ್ ತಿಂಗಳಲ್ಲಿ ಅಬಕಾರಿ ಆದಾಯ ₹3,559.08 ಕೋಟಿಗೆ ಏರಿಕೆಯಾಗಿದೆ. 2024ರ ಡಿಸೆಂಬರ್‌ನಲ್ಲಿ ₹3,104.50 ಕೋಟಿ ಆದಾಯ ಸಂಗ್ರಹವಾಗಿತ್ತು. 2024ರ ಡಿಸೆಂಬರ್ ತಿಂಗಳಲ್ಲಿ 61.82 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 37.62 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. 2025ರಲ್ಲಿ ಕ್ರಮವಾಗಿ 63.71 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 36.14 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. 2024ರ ಡಿಸೆಂಬರ್‌ಗೆ ಹೋಲಿಸಿದರೆ 2025ರಲ್ಲಿ ಬಿಯರ್ ಮಾರಾಟದಲ್ಲಿ ಶೇ.1.48ರಷ್ಟು ಇಳಿಕೆ ಕಂಡು ಬಂದಿರುವುದು ಅಬಕಾರಿ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.