ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರ ರಸ್ತೆ ಅಥವಾ ನೆಲಮಂಗಲ, ಕುಣಿಗಲ್ ರಸ್ತೆ ಎರಡರಲ್ಲಿ ಒಂದನ್ನು ಅಂತಿಮಗೊಳಿಸಲು ಇಂದಿನಿಂದ (ಏ.7) ಮೂರು ದಿನ ಕೇಂದ್ರದ ತಂಡ ಪರಿಶೀಲನೆ ನಡೆಸಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರು : ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರ ರಸ್ತೆ ಅಥವಾ ನೆಲಮಂಗಲ, ಕುಣಿಗಲ್ ರಸ್ತೆ ಎರಡರಲ್ಲಿ ಒಂದನ್ನು ಅಂತಿಮಗೊಳಿಸಲು ಇಂದಿನಿಂದ (ಏ.7) ಮೂರು ದಿನ ಕೇಂದ್ರದ ತಂಡ ಪರಿಶೀಲನೆ ನಡೆಸಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲಾಗಲ್ಲ ಎಂದು ಸಚಿವ ಡಾ। ಜಿ.ಪರಮೇಶ್ವರ್ ಅವರ ಗಮನಕ್ಕೂ ತಂದಿದ್ದೇವೆ. ಬೆಂಗಳೂರಿನಿಂದ 50 ಕಿ.ಮೀ. ಒಳಗೆ ಮಾಡಬೇಕು. 150 ಕಿ.ಮೀ. ದೂರದಲ್ಲಿ ಮಾಡಿದರೆ ಬೆಂಗಳೂರಿನ ಜನರಿಗೆ ಅನುಕೂಲ ಆಗುವುದಿಲ್ಲ. ಜತೆಗೆ ಯಾವ ಕಂಪನಿಯೂ ಅಲ್ಲಿ ವಿಮಾನ ನಿಲ್ದಾಣ ಮಾಡಲು ಮುಂದೆ ಬರುವುದಿಲ್ಲ ಎಂದು ಹೇಳಿದರು.
ಕೇಂದ್ರ ವಿಮಾನಯಾನ ಸಚಿವರೊಂದಿಗೆ ಚರ್ಚಿಸಿದ್ದು, ನಾವು ಕನಕಪುರ ರಸ್ತೆ ಅಥವಾ ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿ ಎರಡು ಕಡೆ ಜಾಗ ಗುರುತಿಸಿದ್ದೇವೆ. ಈ ಬಗ್ಗೆ ವರದಿಯನ್ನು ಕೇಂದ್ರಕ್ಕೆ ನೀಡಿದ್ದೇವೆ. ಕೇಂದ್ರ ವಿಮಾನಯಾನ ಇಲಾಖೆಯ ತಂಡವು ರಾಜ್ಯಕ್ಕೆ ಬಂದಿದ್ದು ಅವರು ಅಧ್ಯಯನ ನಡೆಸಿ ಎಲ್ಲಿ ಹೇಳುತ್ತಾರೋ ಅದೇ ಜಾಗ ಅಂತಿಮವಾಗಲಿದೆ. ಬಳಿಕ ಪ್ರಮುಖ ಕಂಪನಿಯಿಂದ ಸಾಧ್ಯಾಸಾಧ್ಯತೆ ಕುರಿತು ವರದಿ ಪಡೆಯಲಾಗುವುದು. ಬಳಿಕ ಅಂತಿಮವಾಗಿ ವಿಮಾನ ನಿಲ್ದಾಣ ಸ್ಥಳಕ್ಕೆ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.
ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲೂ ಮಾಡಲು ಚಿಂತನೆ:
ಇನ್ನು ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ಒಂದರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲೂ ಚಿಂತನೆ ನಡೆಸುತ್ತಿದ್ದೇವೆ. ಈ ಬಗ್ಗೆ ಸದ್ಯದಲ್ಲೇ ಚರ್ಚೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.