ಜಾತಿ ಗಣತಿಗೆ ತಡೆ ಇಲ್ಲ: ಹೈಕೋರ್ಟ್‌

Published : Sep 26, 2025, 07:01 AM IST
Karnataka Caste Census

ಸಾರಾಂಶ

ಬೆಂಗಳೂರು : ರಾಜ್ಯದಲ್ಲಿ ಕಳೆದ ಸೋಮವಾರದಿಂದ ಆರಂಭವಾಗಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮುಂದುವರಿಸಲು ಹೈ ಕೋರ್ಟ್‌  ಗುರುವಾರ  ತಡೆಯಾಜ್ಞೆ ನೀಡಲು ನಿರಾಕರಿಸಿ ಹಸಿರು ನಿಶಾನೆ ತೋರಿದೆ.

  ಬೆಂಗಳೂರು  : ರಾಜ್ಯದಲ್ಲಿ ಕಳೆದ ಸೋಮವಾರದಿಂದ ಆರಂಭವಾಗಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮುಂದುವರಿಸಲು ಹೈಕೋರ್ಟ್‌ ಗುರುವಾರ ಹಸಿರು ನಿಶಾನೆ ತೋರಿದೆ.

ಸಮೀಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಹೈಕೋರ್ಟ್‌, ರಾಜ್ಯದ ಜನ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ. ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶ ಬೇರಾರಿಗೂ ಸೋರಿಕೆಯಾಗದಂತೆ ಗೌಪ್ಯತೆ ಕಾಯ್ದುಕೊಳ್ಳಬೇಕು. ದತ್ತಾಂಶಕ್ಕೆ ರಕ್ಷಣೆ ನೀಡುವುದಾಗಿ ದೃಢೀಕರಿಸಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶಿಸಿದೆ.

ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಸೂಚಿಸಿ ರಾಜ್ಯ ಸರ್ಕಾರ ಆ.12ರಂದು ಹೊರಡಿಸಿದ ಆದೇಶ ರದ್ದು ಕೋರಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್‌.ಸುಬ್ಬಾರೆಡ್ಡಿ ಮತ್ತಿತರರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಸಮೀಕ್ಷೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದರು.

ಮಧ್ಯಂತರ ಮನವಿ ಕುರಿತು ಮಂಗಳವಾರದಿಂದ ವಿಚಾರಣೆ ಆರಂಭಿಸಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ, ಸಮೀಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಹಲವು ಷರತ್ತುಗಳನ್ನು ವಿಧಿಸಿ ಸಮೀಕ್ಷೆ ಮುಂದುವರಿಸಲು ಅನುಮತಿ ನೀಡಿದೆ.

ದತ್ತಾಂತ ಬಹಿರಂಗಪಡಿಸುವಂತಿಲ್ಲ:

ಸಮೀಕ್ಷೆ ಪ್ರಕ್ರಿಯೆ ತಡೆಯುವುದು ಸೂಕ್ತವಲ್ಲ ಎನಿಸುತ್ತಿದೆ. ಆದರೆ, ಆಯೋಗ ಸಂಗ್ರಹಿಸುವ ದತ್ತಾಂಶ ಯಾರಿಗೂ ಬಹಿರಂಗಪಡಿಸುವಂತಿಲ್ಲ. ಅದನ್ನು ಸಂರಕ್ಷಿಸಬೇಕು ಮತ್ತು ಗೌಪ್ಯವಾಗಿಟ್ಟು ಕಾಪಾಡಬೇಕು. ಸಮೀಕ್ಷೆಯಲ್ಲಿ ಜನ ಸ್ವಯಂಪ್ರೇರಿತವಾಗಿ ಭಾಗವಹಿಸಬಹುದು. ಅಲ್ಲಿ ಯಾವುದೇ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂಬುದನ್ನು ಸ್ಪಷ್ಟಪಡಿಸಿ ಆಯೋಗ ಅಧಿಸೂಚನೆ ಪ್ರಕಟಿಸಬೇಕು. ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೋರ್ಟ್‌ ತನ್ನ ಆದೇಶದಲ್ಲಿ ನಿರ್ದೇಶಿಸಿದೆ.

ಡಿಸೆಂಬರ್‌ಗೆ ಮುಂದೂಡಿಕೆ:

ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ ಎಂಬುದನ್ನು ದತ್ತಾಂಶ ಸಂಗ್ರಹಿಸಲು ಮನೆ ಮನೆಗೆ ತೆರಳುವ ಮೇಲ್ವಿಚಾರಕರು ಜನರಿಗೆ ತಿಳಿಸಬೇಕು. ಸಮೀಕ್ಷೆಯಲ್ಲಿ ಜನ ಭಾಗವಹಿಸಲು ನಿರಾಕರಿಸಿದರೆ, ಮೇಲ್ವಿಚಾರಕರು ಒತ್ತಾಯ ಮಾಡುವಂತಿಲ್ಲ. ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶ ಆಯೋಗವಲ್ಲದೆ ಇನ್ಯಾರಿಗೂ ಲಭ್ಯವಾಗಬಾರದು. ದತ್ತಾಂಶ ಸಂಗ್ರಹ ಮತ್ತು ಅದರ ರಕ್ಷಣೆಗೆ ಸಂಬಂಧಿಸಿ ತಾನು ಕೈಗೊಂಡಿರುವ ಕ್ರಮದ ಬಗ್ಗೆ ಆಯೋಗ ಒಂದು ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್‌ಗೆ ಮುಂದೂಡಿದೆ.

ಜತೆಗೆ ಅರ್ಜಿಗೆ ಸಂಬಂಧಿಸಿ ಸರ್ಕಾರ, ಆಯೋಗ ಸೇರಿ ಎಲ್ಲ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಬೇಕು. ಅರ್ಜಿಯಲ್ಲಿನ ಎಲ್ಲ ಪಕ್ಷಗಾರರು ತಮ್ಮ ವಾದಾಂಶ ಸಲ್ಲಿಸಲು ಸ್ವತಂತ್ರರಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.

ಇದಕ್ಕೂ ಮುನ್ನ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌, ಸಮೀಕ್ಷೆಯಲ್ಲಿ ಜನ ಭಾಗವಹಿಸುವುದು ಸ್ವಯಂಪ್ರೇರಿತ. ಈ ವಿಚಾರವನ್ನು ಸಮೀಕ್ಷೆಯಲ್ಲಿ ಭಾಗವಹಿಸುವ ಮೇಲ್ವಿಚಾರಕರಿಗೆ ಎಲ್ಲ ರೀತಿಯ ಮಾಹಿತಿ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ, ದತ್ತಾಂಶ ರಕ್ಷಣೆ ಜವಾಬ್ದಾರಿಯನ್ನು ಇ-ಆಡಳಿತ ಇಲಾಖೆಗೆ ವಹಿಸಲಾಗಿದೆ. ಇದಕ್ಕೆ ಪೂರಕವಾಗಿ ಪ್ರಮಾಣ ಪತ್ರ ಸಲ್ಲಿಸಲಾಗುವುದು. ಆಧಾರ್‌ನಲ್ಲಿನ ದತ್ತಾಂಶ ಪಡೆಯುತ್ತಿಲ್ಲ. ಸಮೀಕ್ಷೆಯಲ್ಲಿ ಭಾಗವಹಿಸಿದ ಜನರನ್ನು ಗುರುತಿಸಲು ಮಾತ್ರ ಆಧಾರ್‌ ಸಂಖ್ಯೆ ಪಡೆಯಲಾಗುತ್ತದೆ ಎಂದು ಹೇಳಿದರು.

ಈ ವಾದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ದತ್ತಾಂಶ ರಕ್ಷಣೆ ಅತ್ಯಂತ ದೊಡ್ಡ ಸವಾಲು. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ರಕ್ಷಣೆ ಕಡ್ಡಾಯ. ಸೂಕ್ಷ್ಮ ವೈಯಕ್ತಿಕ ದತ್ತಾಂಶ ರಕ್ಷಣೆಗೆ ನೀತಿ ರೂಪಿಸಬೇಕು. ಆದರೆ, ಇದನ್ನು ನಿರ್ವಹಿಸಲು ಸರ್ಕಾರದ ಬಳಿ ಯಾವುದೇ ವ್ಯವಸ್ಥೆ ಇಲ್ಲ. ಸಂಗ್ರಹಿಸಿದ ದತ್ತಾಂಶ ಎಲ್ಲಿ ಸಂಗ್ರಹಿಸಲಾಗುತ್ತದೆ? ಅದಕ್ಕೆ ಹ್ಯಾಕಿಂಗ್‌ನಿಂದ ರಕ್ಷಣೆ ಒದಗಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಸರ್ಕಾರ ನೀಡಿಲ್ಲ ಎಂದು ಆಕ್ಷೇಪಿಸಿದರು.

ಷರತ್ತುಗಳು

1. ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಭಾಗವಹಿಸಬಹುದು

2. ಪಾಲ್ಗೊಳ್ಳಲು ನಿರಾಕರಿಸಿದರೆ ಗಣತಿದಾರರು ಅಂತಹ ಜನರಿಗೆ ಒತ್ತಾಯ ಮಾಡುವಂತಿಲ್ಲ

3. ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ ಎಂದು ಮೇಲ್ವಿಚಾರಕರು ಜನಕ್ಕೆ ಹೇಳಬೇಕು

4. ಈ ಕುರಿತು ಹಿಂದುಳಿದ ವರ್ಗಗಳ ಆಯೋಗ ಅಧಿಸೂಚನೆ ಹೊರಡಿಸಿ, ಕೋರ್ಟಿಗೆ ಸಲ್ಲಿಸಬೇಕು

5. ಜನರಿಂದ ಸಮೀಕ್ಷೆ ಮೂಲಕ ಸಂಗ್ರಹಿಸಿದ ಮಾಹಿತಿ ಆಯೋಗವಲ್ಲದೆ ಮತ್ಯಾರಿಗೂ ಸಿಗಕೂಡದು

6. ದತ್ತಾಂಶ ಸಂಗ್ರಹ, ಅದರ ರಕ್ಷಣೆಗೆ ಕೈಗೊಂಡಿರುವ ಕ್ರಮದ ಬಗ್ಗೆ ಆಯೋಗದ ಕೋರ್ಟಿಗೆ ತಿಳಿಸಬೇಕು

ಗಣತಿ ವೇಗ ಹೆಚ್ಚಿಸಲು

ಇಂದು ಸಿಎಂ ಸಿದ್ದು ಸಭೆ

ಬೆಂಗಳೂರು: ಸರ್ವರ್‌ ಸಮಸ್ಯೆ, ಆ್ಯಪ್‌ನಲ್ಲಿನ ಲೋಪದೋಷ, ಗಣತಿದಾರರ ನಿರ್ಲಕ್ಷ್ಯದಿಂದ ಜಾತಿ ಗಣತಿಗೆ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಭೆ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಿದ್ದಾರೆ. 4 ದಿನ ಕಳೆದರೂ ಸಮೀಕ್ಷೆ ಟೇಕಾಫ್‌ ಆಗಿಲ್ಲ. ಹೀಗಾದರೆ ಗಡುವಿನೊಳಗೆ ಗಣತಿ ಮುಗಿಸುವುದು ಕಷ್ಟ ಎಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ ನಡೆಸಲಿದ್ದಾರೆ.

ಗಣತಿಗೆ ಚಕ್ಕರ್‌ ಹಾಕುವ

ಅಧಿಕಾರಿಗಳಿಗೆ ತಕ್ಕಶಾಸ್ತಿ

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಹ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಮತ್ತು ದಂಡ ವಿಧಿಸುವ ಅಧಿಕಾರ ಹೊಂದಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಸಂಪುಟ ಸಭೆಯ ಬಳಿಕ ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಾಸರಗೋಡು ಕನ್ನಡಿಗರ ಮೇಲೆ ನಾವು ಮಲಯಾಳಂ ಹೇರುತ್ತಿಲ್ಲ : ಕೇರಳ ಸಿಎಂ
2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ