ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಗುತ್ತಿಗೆ ಆಧಾರದಲ್ಲಿ ಅನ್ಯಭಾಷಿಕರನ್ನು ನೇಮಕ ಮಾಡುತ್ತಿರುವುದನ್ನು ವಿರೋಧಿಸಿ ಕನ್ನಡಪರ ಹೋರಾಟಗಾರರು ಗುರುವಾರ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಂಗಳೂರು : ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಗುತ್ತಿಗೆ ಆಧಾರದಲ್ಲಿ ಅನ್ಯಭಾಷಿಕರನ್ನು ನೇಮಕ ಮಾಡುತ್ತಿರುವುದನ್ನು ವಿರೋಧಿಸಿ ಕನ್ನಡಪರ ಹೋರಾಟಗಾರರು ಗುರುವಾರ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಪ್ರತಿಭಟಿಸಿದ ಹೋರಾಟಗಾರರು, ಎಲೆಕ್ಟ್ರಿಕ್ ಬಸ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತಿರುವ ಚಾಲಕರು ಕನ್ನಡೇತರಾಗಿದ್ದಾರೆ. ಕೇರಳ, ಮಹಾರಾಷ್ಟ್ರ ಮೂಲದ ಕನ್ನಡ ಮಾತನಾಡಲು ಬಾರದವರನ್ನು ಚಾಲಕರನ್ನಾಗಿ ನಿಯೋಜಿಸಲಾಗುತ್ತಿದೆ. ಕನ್ನಡಿಗರು ಅವಕಾಶ ವಂಚಿತರಾಗುವಂತಾಗುತ್ತಿದ್ದಾರೆ. ಬೆಂಗಳೂರಿನ ಮಾರ್ಗ ತಿಳಿಯದ, ಭಾಷೆ ತಿಳಿಯವರನ್ನು ಬಸ್ ಚಾಲನೆಗೆ ನೇಮಿಸಿದರೆ ಬಿಎಂಟಿಸಿ ಸೇವೆ ಗುಣಮಟ್ಟದ್ದಾಗಿರುವುದಿಲ್ಲ. ಹೀಗಾಗಿ ಹೊರರಾಜ್ಯ ಮತ್ತು ಕನ್ನಡ ಗೊತ್ತಿಲ್ಲದ ಚಾಲಕರನ್ನು ಕೂಡಲೇ ವಜಾ ಮಾಡಿ, ಕನ್ನಡಿಗರನ್ನು ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಾಲಕರಿಗೂ ಬಿಎಂಟಿಸಿಗೂ ಸಂಬಂಧವಿಲ್ಲ: ಅಧಿಕಾರಿ
ಪ್ರತಿಭಟನಾಕಾರರನ್ನು ಭೇಟಿಯಾಗಿ ಮಾತನಾಡಿದ ಬಿಎಂಟಿಸಿ ಅಧಿಕಾರಿ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಎಲೆಕ್ಟ್ರಿಕ್ ಬಸ್‌ಗಳನ್ನು ಖಾಸಗಿ ಸಂಸ್ಥೆಗಳಿಂದ ಪಡೆಯಲಾಗಿದೆ. ಅದಕ್ಕೆ ಚಾಲಕರನ್ನೂ ಖಾಸಗಿ ಸಂಸ್ಥೆಯವರೇ ನೇಮಿಸುತ್ತಾರೆ. ಬಸ್‌ಗೆ ನಿರ್ವಾಹಕರನ್ನು ನೇಮಿಸಿ ನಿರ್ವಹಣೆ ಮಾಡುವುದಷ್ಟೇ ಬಿಎಂಟಿಸಿಯ ಕೆಲಸ. ಹೀಗಾಗಿ ಚಾಲಕರ ನೇಮಕಕ್ಕೂ ಬಿಎಂಟಿಸಿಗೂ ಸಂಬಂಧವಿಲ್ಲ. ಆದರೂ, ಕನ್ನಡಿಗ ಚಾಲಕರನ್ನು ನೇಮಿಸುವ ಕುರಿತು ಖಾಸಗಿ ಸಂಸ್ಥೆಯೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಅಶೋಕ್‌ಗೆ ಸಿಎಂ ತಿರುಗೇಟು
ಬೆಂಗಳೂರು
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸುಗಳಿಗೆ ಮಲೆಯಾಳಿ ಯುವಕರನ್ನು ಚಾಲಕರನ್ನಾಗಿ ನೇಮಿಸಲಾಗಿದೆ ಎಂದು ಆರೋಪಿಸಿದ್ದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು, ‘ನಿಮ್ಮ ಅಜ್ಞಾನ ಪ್ರದರ್ಶನ ಬಿಟ್ಟು, ಇದು ಕೇಂದ್ರ ಸರ್ಕಾರದ ಯೋಜನೆ ಎಂಬುದು ಅರಿಯಿರಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆರ್.ಅಶೋಕ್ ಅವರು ‘ಕರ್ನಾಟಕ ಯುವಕರಿಗೆ ಯುವ ನಿಧಿ ಮೋಸ, ಮಲೆಯಾಳಿ ಯುವಕರಿಗೆ ಸರ್ಕಾರಿ ಕೆಲಸ’ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಇದಕ್ಕೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ, ‘ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿರೋಧ ಪಕ್ಷದ ನಾಯಕ ಅಸ್ವಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತಿರೋ? ನೀವು ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ನಮ್ಮ ಸತ್ಯದ ಒಂದು ಏಟಿಗೆ ಅದು ಕುಸಿದುಬೀಳುತ್ತಲೇ ಇದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೆ, ನೀವು ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ. ಇದು ಮುಂದುವರಿಯಲಿ ಆಲ್ ದಿ ಬೆಸ್ಟ್ ಎಂದು ವ್ಯಂಗ್ಯವಾಡಿದ್ದಾರೆ.
--