3 ವರ್ಷದ ಡಿಗ್ರಿ ಪಠ್ಯಕ್ಕೆ ಕಸರತ್ತು - ಇಂದಿನಿಂದ ವಿವಿಗಳಿಗೆ ವಿಭಾಗವಾರು ಕಾರ್ಯಾಗಾರ

Published : May 28, 2024, 09:10 AM IST
college students

ಸಾರಾಂಶ

ರಾಜ್ಯ ಸರ್ಕಾರ 2024-25ನೇ ಸಾಲಿನಿಂದ ಪದವಿ ವ್ಯಾಸಂಗವನ್ನು ಮೂರು ವರ್ಷಕ್ಕೆ ನಿಗದಿಪಡಿಸುವ ಜೊತೆಗೆ ಆಯಾ ವಿಶ್ವವಿದ್ಯಾಲಯಗಳ ಮಟ್ಟದಲ್ಲೇ ಪಠ್ಯಕ್ರಮ ಪರಿಷ್ಕರಣೆಗೆ ಆದೇಶ

ಬೆಂಗಳೂರು :  ರಾಜ್ಯ ಸರ್ಕಾರ 2024-25ನೇ ಸಾಲಿನಿಂದ ಪದವಿ ವ್ಯಾಸಂಗವನ್ನು ಮೂರು ವರ್ಷಕ್ಕೆ ನಿಗದಿಪಡಿಸುವ ಜೊತೆಗೆ ಆಯಾ ವಿಶ್ವವಿದ್ಯಾಲಯಗಳ ಮಟ್ಟದಲ್ಲೇ ಪಠ್ಯಕ್ರಮ ಪರಿಷ್ಕರಣೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಅತ್ಯಂತ ಗುಣಮಟ್ಟದ ಪಠ್ಯಕ್ರಮ ರಚನೆ ಬಗ್ಗೆ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವ್ಯಾಪ್ತಿಯಲ್ಲಿ ಮೇ 28ರಿಂದ ಜೂ.7 ರವರೆಗೆ ಪ್ರಾದೇಶಿಕವಾರು ಕಾರ್ಯಾಗಾರ ನಡೆಸುವುದಾಗಿ ತಿಳಿಸಿದೆ.

ಎನ್‌ಇಪಿ ಅಡಿ ಜಾರಿಯಲ್ಲಿದ್ದ ನಾಲ್ಕು ವರ್ಷದ ಪದವಿ ವ್ಯಾಸಂಗ ಕೈಬಿಟ್ಟ ಹಿನ್ನೆಲೆಯಲ್ಲಿ ಮೂರು ವರ್ಷದ ಪದವಿ ವ್ಯಾಸಂಗಕ್ಕೆ ಅತ್ಯಂತ ಗುಣಮಟ್ಟದ ಪಠ್ಯಕ್ರಮ ರಚನೆ ಮಾಡಬೇಕಿದೆ. ಪಠ್ಯಕ್ರಮವು ಪ್ರಸ್ತುತತೆ, ಔದ್ಯೋಗಿಕ, ಕೌಶಲ್ಯ, ಬಹು ಶಿಸ್ತೀಯ, ಜ್ಞಾನಾಧಾರಿತವಾಗಿರಬೇಕು. ಜೊತೆಗೆ ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಚನೆಯಾಗಬೇಕು. ಈ ಹಿನ್ನೆಲೆಯಲ್ಲಿ ಪಠ್ಯಕ್ರಮ ರಚನೆಗೂ ಮುನ್ನ ವಿವಿಗಳು ತಮ್ಮ ಅಧ್ಯಯನ ಮಂಡಳಿಗಳು, ಸ್ವಾಯತ್ತ ಕಾಲೇಜುಗಳು, ಇತರೆ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಪರಿಣಾಮಕಾರಿಯಾಗಿ ಪಠ್ಯಕ್ರಮ ಅನುಷ್ಠಾನಕ್ಕೆ ಸೂಚನೆ ನೀಡಬೇಕಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಕಾರ್ಯಾಗಾರದಲ್ಲಿ ಅಗತ್ಯ ಸಲಹೆ, ಸೂಚನೆ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಪ್ರತಿ ಕಾರ್ಯಾಗಾರದಲ್ಲೂ ಆಯಾ ಪ್ರಾದೇಶಿಕ ವ್ಯಾಪ್ತಿಯ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು ಸೇರಿದಂತೆ ಹಾಲಿ ಅಧಿಕಾರಿಗಳಷ್ಟೇ ಅಲ್ಲದೆ ವಿವಿಯ ಕನಿಷ್ಠ ಮೂವರು ನಿವೃತ್ತ ಕುಲಪತಿಗಳು, ತಮ್ಮ ವ್ಯಾಪ್ತಿಯ ಬೋಧಕ ಸಂಘಟನೆಗಳ ಪ್ರತಿನಿಧಿಗಳು, ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಭಾಗವಹಿಸುವಂತೆ ಕ್ರಮ ವಹಿಸಬೇಕು ಎಂದು ಆಯೋಗ ಸೂಚಿಸಿದೆ.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಧಾರ್ಮಿಕ ಕಾರ್ಯಗಳಿಗೂ ಉತ್ತೇಜನ: ವಿಮಲಾ