2024-25ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮೇ 29ರ ಬುಧವಾರದಿಂದ ಮತ್ತೆ ಬಾಗಿಲು ತೆರೆಯಲಿವೆ.
ಬೆಂಗಳೂರು : 2024-25ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮೇ 29ರ ಬುಧವಾರದಿಂದ ಮತ್ತೆ ಬಾಗಿಲು ತೆರೆಯಲಿವೆ. ಆದರೆ, ಮಕ್ಕಳನ್ನು ಮಾತ್ರ ಮೇ 31ರಂದು ಶಾಲಾ ಪ್ರಾರಂಭೋತ್ಸವದ ಮೂಲಕ ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಳ್ಳಲಿದ್ದಾರೆ.
ವಿಶೇಷವೆಂದರೆ ಈ ಬಾರಿ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಪ್ರತೀ ಬಾರಿಯಂತೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ತಡಗೊಳಿಸದೆ ಸಮಯಕ್ಕೆ ಸರಿಯಾಗಿ ವಿತರಿಸುವ ಪ್ರಯತ್ನ ನಡೆಸಿದೆ. ಈಗಾಗಲೇ ಸಮವಸ್ತ್ರ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕು ಮಟ್ಟಕ್ಕೆ ರವಾನೆಯಾಗಿದ್ದು, ಪಠ್ಯಪುಸ್ತಕಗಳನ್ನು ಕೂಡ ಶೇ.75ರಿಂದ 80ರಷ್ಟು ಸರಬರಾಜು ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಉಳಿದ ಪಠ್ಯಪುಸ್ತಕಗಳ ಪೂರೈಕೆ ಮಾಡಲಾಗುವುದು. ಬಿಇಒ, ಡಿಡಿಪಿಐಗಳು ಶಾಲೆಗಳಿಗೆ ಅವುಗಳನ್ನು ತಲುಪಿಸಿ ಪ್ರಾರಂಭೋತ್ಸವದ ದಿನವೇ ವಿತರಣೆಗೆ ಕ್ರಮ ವಹಿಸಬೇಕೆಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಪ್ರಾರಂಭೋತ್ಸವದೊಂದಿಗೆ ಮೊದಲ ದಿನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಬುಧವಾರ ಮತ್ತು ಗುರುವಾರ ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಬೇಕು. ತಳಿರು ತೋರಣ, ರಂಗೋಲೆ ಬಿಡಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯಶಿಕ್ಷಕರುಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.
ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಅವರಿಗೆ ಹೂ, ಚಾಕೊಲೇಟ್ ಸೇರಿದಂತೆ ಯಾವುದಾದರೂ ಸಿಹಿ ನೀಡಿ ಸ್ವಾಗತಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಇಲಾಖಾ ಆಯುಕ್ತರು ಸೂಚನೆ ನೀಡಿದ್ದಾರೆ.
ಯಾವುದಾದರೂ ತರಗತಿ ಕೊಠಡಿ, ಕಾಂಪೌಂಡ್ ಇತ್ಯಾದಿ ದುರಸ್ತಿ ಕಾರ್ಯಗಳು ಅಗತ್ಯವಿದ್ದರೆ ಕೂಡಲೇ ಸ್ಥಳೀಯ ಡಿಡಿಪಿಐ, ಬಿಇಒ ಗಮನಕ್ಕೆ ತಂದು ಶಾಲಾಭಿವೃದ್ಧಿ ಅನುದಾನ ಬಳಸಿಕೊಂಡು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.