;Resize=(412,232))
ಬೆಂಗಳೂರು : ‘ಪಂಚ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮುಂದಿನ ಎರಡು ವರ್ಷ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಮತ್ತೆ ನಾವೇ ಅಧಿಕಾರಕ್ಕೆ ಬಂದು ಗ್ಯಾರಂಟಿ ಮುಂದುವರೆಸುತ್ತೇವೆ. ವಿರೋಧಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಟ್ಟು ಆತಂಕಪಡಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ನೀಡಿರುವ ಅವರು, ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸುವ ಕೆಲಸ ಪ್ರಾರಂಭದಿಂದಲೂ ನಡೆಯುತ್ತಿದ್ದು, ಈಗಲೂ ಮುಂದುವರೆದಿದೆ. ಬಿಜೆಪಿ ಮೂಲತಃ ಬಡವರ ವಿರೋಧಿ ಪಕ್ಷ. ಹೀಗಾಗಿ ಯೋಜನೆಗಳ ಬಗ್ಗೆ ಮೊದಲಿನಿಂದಲೂ ವಿರೋಧ, ಅಪಪ್ರಚಾರ ಮಾಡುತ್ತಾ ಬಂದಿದೆ. ಫಲಾನುಭವಿಗಳು ಅವರ ಮಾತಿಗೆ ಕಿವಿಗೊಡುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯವರು ಮೊದಲು ಗ್ಯಾರಂಟಿ ಯೋಜನೆಗಳ ಜಾರಿ ಅಸಾಧ್ಯ ಎಂದಿದ್ದರು. ಬಳಿಕ ಹಣಕಾಸಿನ ಕೊರತೆಯಿಂದ ಸರ್ಕಾರ ದಿವಾಳಿಯಾಗಲಿದೆ ಎಂದರು. ಈಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ. ಇದು ಅವರ ರಾಜಕೀಯ ಹತಾಶೆಯ ಪ್ರತೀಕ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಯೋಜನೆಗಳು ಅರ್ಹರಿಗೆ ಮಾತ್ರ ಸಿಗಬೇಕು. ಜನರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ದುರಾಸೆಗೆ ಬಲಿ ಬಿದ್ದು ಸರ್ಕಾರಕ್ಕೆ ಮೋಸ ಮಾಡಿ ಗ್ಯಾರಂಟಿ ಯೋಜನೆಗಳ ಲಾಭ ತೆಗೆದುಕೊಳ್ಳುವುದು ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ರಾಜ್ಯದ ಜನತೆಗೆ ಬಗೆವ ದ್ರೋಹ. ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡದೆ, ಅರ್ಹರಿಗೆ ಯೋಜನೆಗಳನ್ನು ತಲುಪಿಸಲು ಸರ್ಕಾರಕ್ಕೆ ನೆರವಾಗಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಐದು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಲ್ಲದೆ, ಇದರಿಂದಾಗಿ ರಾಜ್ಯದ ಆರ್ಥಿಕತೆ ಮೇಲೆ ಏನೂ ದುಷ್ಪರಿಣಾಮ ಬೀರದಂತೆ ನೋಡಿಕೊಂಡಿದ್ದೇನೆ. ಇಂದು ಕರ್ನಾಟಕ ರಾಜ್ಯವು ತಲಾವಾರು ಆದಾಯದಲ್ಲಿ ದೇಶಕ್ಕೇ ಮೊದಲನೇ ಸ್ಥಾನದಲ್ಲಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರದ ಎರಡನೇ ರಾಜ್ಯ ಕರ್ನಾಟಕ. ಖಜಾನೆ ಖಾಲಿಯಾಗಿದ್ದರೆ, ಸರ್ಕಾರ ದಿವಾಳಿ ಸ್ಥಿತಿಯಲ್ಲಿದ್ದರೆ ಈ ಸಾಧನೆ ಸಾಧ‍್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮ್ಮ ಗ್ಯಾರಂಟಿ ವಿರೋಧಿಸಿದ ಬಿಜೆಪಿಯವರೇ ಮಧ್ಯಪ್ರದೇಶ, ಬಿಹಾರ, ಪಶ್ಚಿಮಬಂಗಾಳದಲ್ಲಿ ನಕಲು ಹೊಡೆದು ಅಧಿಕಾರಕ್ಕೆ ಬಂದಿದ್ದಾರೆ. ಕೆಲವು ರಾಜ್ಯಗಳಲ್ಲಿ ಆಶ್ವಾಸನೆ ನೀಡಿಯೂ ಜಾರಿಗೆ ತಂದಿಲ್ಲ. ಇವರಿಗೆ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಯಾವ ನೈತಿಕತೆ ಇದೆ? ಎಂದು ಕಿಡಿಕಾರಿದ್ದಾರೆ.