ಫೋನ್‌ಪೇ, ಗೂಗಲ್‌ ಪೇ ಬಳಸುವ ಇನ್ನಷ್ಟು ವರ್ತಕರಿಗೆ ನೋಟಿಸ್‌?

Published : Jul 22, 2025, 06:48 AM IST
UPI Payment

ಸಾರಾಂಶ

‘ಜಿಎಸ್ಟಿ ಮಿತಿ ಮೀರಿ ವಹಿವಾಟು ನಡೆಸಿರುವ ವ್ಯಾಪಾರಿಗಳಿಗೆ ಹಂತ ಹಂತವಾಗಿ ನೋಟಿಸ್ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಎಚ್ಚರಿಸಿದೆ.

ಬೆಂಗಳೂರು : ‘ಜಿಎಸ್ಟಿ ಮಿತಿ ಮೀರಿ ವಹಿವಾಟು ನಡೆಸಿರುವ ವ್ಯಾಪಾರಿಗಳಿಗೆ ಹಂತ ಹಂತವಾಗಿ ನೋಟಿಸ್ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಎಚ್ಚರಿಸಿದೆ. ಈ ಮೂಲಕ ನೋಟಿಸ್ ವಿರುದ್ಧ ವ್ಯಾಪಾರಿಗಳು ಬೀದಿಗೆ ಇಳಿಯುವ ಎಚ್ಚರಿಕೆ ನೀಡಿದ್ದರೂ ಇಲಾಖೆ ಈ ಹೇಳಿಕೆ ನೀಡಿದೆ.

ಸೋಮವಾರ ನಗರದ ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ‘ಜಿಎಸ್ಟಿ ತಿಳಿಯಿರಿ’ ಸಭೆಯಲ್ಲಿ ವ್ಯಾಪಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಮೀರಾ ಪಂಡಿತ್‌, ಅವರು, ‘ಮೊದಲ ಹಂತದಲ್ಲಿ ಕೋಟ್ಯಂತರ ರು. ಸ್ವೀಕರಿಸಿದ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ನಮ್ಮ ವ್ಯಾಪ್ತಿಯಲ್ಲಿ 850 ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಜಿಎಸ್ಟಿ ವಂಚನೆ ಕುರಿತು ಬೇರೆ ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸಂಸ್ಥೆಗಳ ಮಾಹಿತಿ ರೇರಾದಿಂದ ಪಡೆದುಕೊಂಡು ನೋಟಿಸ್ ನೀಡಲಾಗುವುದು’ ಎಂದರು

ಸಣ್ಣ ವ್ಯಾಪಾರಿಗಳಿಗೆ ಭಯ ಬೇಡ:

ಇದೇ ವೇಳೆ ನೋಟಿಸ್‌ನಲ್ಲಿ ಉಲ್ಲೇಖಿಸಿರುವಷ್ಟು ಸರಕು ಮತ್ತು ಸೇವಾ ತೆರಿಗೆ, (ಜಿಎಸ್ಟಿ) ದಂಡ ಮತ್ತು ಬಡ್ಡಿಯನ್ನು ಸಣ್ಣ ವ್ಯಾಪಾರಿಗಳು ಪಾವತಿಸುವುದು ಕಡ್ಡಾಯವಲ್ಲ. ನೋಟಿಸ್‌ಗೆ ನೀಡುವ ಉತ್ತರದ ಆಧಾರದ ಮೇಲೆ ತೆರಿಗೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬಹುದು ಎಂದು ಮೀರಾ ಸ್ಪಷ್ಟಪಡಿಸಿದ್ದಾರೆ.

ಜಿಎಸ್ಟಿ ಸಂಪೂರ್ಣ ವಿನಾಯಿತಿ ಇರುವ ಹಣ್ಣು, ತರಕಾರಿ, ಹಾಲು ಮುಂತಾದ ಉತ್ಪನ್ನಗಳೂ ಇವೆ. ಮತ್ತೊಂದೆಡೆ ಶೇ.28ರಷ್ಟು ಜಿಎಸ್ಟಿ ಇರುವ ಗುಟ್ಕಾ ಮತ್ತು ಸಿಗರೇಟು ಉತ್ಪನ್ನಗಳೂ ಇವೆ. ಹೀಗಾಗಿ, ವರ್ತಕರು ತಮ್ಮದು ಯಾವ ವ್ಯಾಪಾರ ಎಂದು ತಿಳಿಸಿದರೆ ತೆರಿಗೆ ಕಡಿಮೆಯಾಗುತ್ತದೆ ಎಂದರು.

ಇನ್ನು ಅನೇಕರಿಗೆ ಬರಲಿವೆ ನೋಟಿಸ್:

ಜಿಎಸ್ಟಿ ಮಿತಿ ಮೀರಿ ವಹಿವಾಟು ನಡೆಸಿರುವ ವ್ಯಾಪಾರಿಗಳಿಗೆ ಹಂತ ಹಂತವಾಗಿ ನೋಟಿಸ್ ನೀಡಲಾಗುತ್ತಿದ್ದು, ನಮ್ಮ ವ್ಯಾಪ್ತಿಯಲ್ಲಿ 850 ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಮೀರಾ ಪಂಡಿತ್ ತಿಳಿಸಿದರು.

2025ರ ಜನವರಿ ತಿಂಗಳಲ್ಲಿ ಪೋನ್‌ಪೇ ಹಾಗೂ ಪೇಟಿಎಂನಿಂದ ವರ್ತಕರ ವಹಿವಾಟುಗಳ ಕುರಿತು ಡೇಟಾ ಸಿಕ್ಕಿದೆ. ಇದೇ ಆಧಾರದ ಮೇಲೆ ಜಿಎಸ್ಟಿ ಮಿತಿ ಮೀರಿ ವಹಿವಾಟು ನಡೆಸಿದವರನ್ನು ಗುರುತಿಸುತ್ತಿದ್ದೇವೆ. ಮೊದಲ ಹಂತದಲ್ಲಿ ಕೋಟ್ಯಂತರ ರು. ಹಣ ಸ್ವೀಕರಿಸಿದ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಬೇಕರಿ, ಕಾಂಡಿಮೆಂಟ್, ಹಣ್ಣು-ತರಕಾರಿ, ಹೂವು, ಡೈರಿ, ಮಾಂಸದ ಅಂಗಡಿ, ಸಣ್ಣ ಗಾತ್ರದ ಬಟ್ಟೆ ವ್ಯಾಪಾರಿಗಳು ಇದ್ದಾರೆ. ಜಿಎಸ್ಟಿ ವಂಚನೆ ಕುರಿತು ಬೇರೆ ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸಂಸ್ಥೆಗಳ ಮಾಹಿತಿ ರೇರಾದಿಂದ ಪಡೆದುಕೊಂಡು ನೋಟಿಸ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಿಎಸ್ಟಿ ಮಿತಿ ಹೆಚ್ಚಳಕ್ಕೆ ಮನವಿ:

ಸೇವೆ (ಸರ್ವೀಸ್) ಸಂಬಂಧಿಸಿದ ವ್ಯಾಪಾರಕ್ಕೆ 20 ಲಕ್ಷ ರು. ಹಾಗೂ ಸಗಟು ವ್ಯಾಪಾರಕ್ಕೆ 40 ಲಕ್ಷ ರು. ಜಿಎಸ್ಟಿ ಮಿತಿಯನ್ನು 8 ವರ್ಷಗಳ ಹಿಂದೆ ನಿಗದಿಪಡಿಸಲಾಗಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ವ್ಯಾಪಾರದಲ್ಲಿ ಲಾಭಾಂಶ ಕಡಿಮೆಯಾಗಿದೆ. ಹೀಗಾಗಿ, ಜಿಎಸ್ಟಿ ಮಿತಿಯನ್ನು ಕ್ರಮವಾಗಿ 50 ಲಕ್ಷ ರು. ಮತ್ತು 1 ಕೋಟಿ ರು.ಗೆ ಹೆಚ್ಚಿಸಬೇಕು ಎಂದು ಅನೇಕ ವ್ಯಾಪಾರಿಗಳು ಮನವಿ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದರು.

ದಂಡ ವಿನಾಯ್ತಿ ಕೌನ್ಸಿಲ್ ತೀರ್ಮಾನಿಸಬೇಕು:

ಜಿಎಸ್ಟಿ ನೋಂದಣಿಯಿಲ್ಲದೆ ಮಿತಿ ಮೀರಿ ವ್ಯಾಪಾರ ಮಾಡಿರುವ ವರ್ತಕರಿಗೆ ಸಂಪೂರ್ಣ ವಿನಾಯಿತಿ ಸಿಗಬೇಕು ಎಂದರೆ ಜಿಎಸ್ಟಿ ಕೌನ್ಸಿಲ್‌ನಲ್ಲಿ ತೀರ್ಮಾನವಾಗಬೇಕು. ನಮ್ಮ ರಾಜ್ಯದಿಂದಲೂ ಜಿಎಸ್ಟಿ ಕೌನ್ಸಿಲ್‌ಗೆ ಪ್ರತಿನಿಧಿಗಳು ಇರುತ್ತಾರೆ. ನಿಯಮಿತವಾಗಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಬೇಕು. ಅದಕ್ಕಾಗಿ ವರ್ತಕರು ಸರ್ಕಾರಗಳಿಗೆ ಮನವಿ ಸಲ್ಲಿಸಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ತಿಳಿಸಿದರು.

ಸಮಯವಿದೆ ಆತಂಕ ಬೇಡ:

ನೋಟಿಸ್‌ಗೆ ಉತ್ತರಿಸಲು ಸಾಮಾನ್ಯವಾಗಿ 7 ದಿನ ಕಾಲಾವಕಾಶ ನೀಡಲಾಗುತ್ತದೆ. ಸಮಯ ಬೇಕು ಎನ್ನುವವರು ಇ-ಮೇಲ್ ಮೂಲಕ ಅಥವಾ ನೇರವಾಗಿ ಕಚೇರಿಗೆ ಬಂದು ಮನವಿ ಸಲ್ಲಿಸಿದರೆ ತಿಂಗಳವರೆಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗುತ್ತದೆ. ಕೂಡಲೇ ಉತ್ತರಿಸಬೇಕು ಎನ್ನುವ ಆತಂಕ ಬೇಡ ಎಂದು ಮೀರಾ ಪಂಡಿತ್ ಹೇಳಿದರು.

ವರ್ಷಕ್ಕೆ 6 ಕೋಟಿ ರು. ವಹಿವಾಟು:

ಒಂದು ಹಣಕಾಸು ವರ್ಷದಲ್ಲಿ ವರ್ತಕರೊಬ್ಬರು ಜಿಎಸ್ಟಿ ನೋಂದಣಿ ಇಲ್ಲದೆ 6 ಕೋಟಿ ರು. ವಹಿವಾಟು ನಡೆಸಿದ್ದಾರೆ. ತಿಂಗಳಿಗೆ ಸರಾಸರಿ 50 ಲಕ್ಷ ರು. ವಹಿವಾಟು ನಡೆಸಿರುವ ದಾಖಲೆಯೂ ಲಭ್ಯವಾಗಿದೆ. ಅವರ ವ್ಯಾಪಾರದ ಸ್ವರೂಪ ತಿಳಿದು ಬಂದಿಲ್ಲ. ಅವರಿಗೂ ನೋಟಿಸ್ ನೀಡಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದರು.

ತರಕಾರಿ ವ್ಯಾಪಾರದಲ್ಲಿ 1.25 ಕೋಟಿ ವಹಿವಾಟು:

ಮಾರತ್ತಹಳ್ಳಿಯಲ್ಲಿ ತರಕಾರಿ, ಹಣ್ಣು ವ್ಯಾಪಾರ ಮಾಡುವ ವ್ಯಾಪಾರಿಯೊಬ್ಬರು ಒಂದೇ ಆರ್ಥಿಕ ವರ್ಷದಲ್ಲಿ ಗ್ರಾಹಕರಿಂದ 1.25 ಕೋಟಿ ರು. ಹಣ ಸ್ವೀಕರಿಸಿದ್ದಾರೆ. ಸಭೆಗೆ ಆಗಮಿಸಿದ್ದ ಅವರು, ನೋಟಿಸ್‌ಗೆ ಉತ್ತರಿಸುವ ಕ್ರಮವನ್ನು ಕೇಳಿ ತಿಳಿದುಕೊಂಡರು.

ರಾಜಿ ತೆರಿಗೆ ಪದ್ಧತಿ ಬರುವುದಿಲ್ಲ:

ಜಿಎಸ್ಟಿ ನೋಂದಣಿ ಮಾಡಿಕೊಳ್ಳದೆ ಇರುವ ವ್ಯಾಪಾರಿಗಳಿಗೆ ರಾಜಿ ತೆರಿಗೆ ಪದ್ಧತಿ (ಕಾಂಪೋಸಿಷನ್ ಸ್ಕೀಂ) ಅನ್ವಯಿಸುವುದಿಲ್ಲ. ಹೀಗಾಗಿ, ಈಗ ನೋಟಿಸ್ ಸ್ವೀಕರಿಸಿರುವ ವ್ಯಾಪಾರಿಗಳು ರಾಜಿ ತೆರಿಗೆ ಪದ್ಧತಿಯಡಿ ಬರುವುದಿಲ್ಲ ಎಂದು ಮೀರಾ ಪಂಡಿತ್ ಸ್ಪಷ್ಟಪಡಿಸಿದರು.

ಗಾಬರಿ ಬೇಡ, ದಂಡ ಕಮ್ಮಿ ಆಗಬಹುದು

- ನೋಟಿಸ್‌ನಲ್ಲಿ ಉಲ್ಲೇಖಿಸಿರುವಷ್ಟುಜಿಎಸ್ಟಿ, ದಂಡ ಪಾವತಿ ಕಡ್ಡಾಯವಲ್ಲ

- ನೋಟಿಸ್‌ಗೆ ವ್ಯಾಪಾರಿ ಕೊಡುವ ಉತ್ತರ ಅವಲಂಬಿಸಿ ದಂಡ ನಿಗದಿ

- ಆಗ ತೆರಿಗೆ, ದಂಡ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬಹುದು

- ಜಿಎಸ್ಟಿಯೇ ಇಲ್ಲದ ಹಣ್ಣು, ತರಕಾರಿ, ಹಾಲು ಮುಂತಾದ ಉತ್ಪನ್ನ ಇವೆ

- ವರ್ತಕರು ತಮ್ಮದು ಯಾವ ವ್ಯಾಪಾರ ಎಂದು ತಿಳಿಸಿದರೆ ತೆರಿಗೆ ಕಮ್ಮಿ

- ನೋಟಿಸ್‌ಗೆ ಉತ್ತರಿಸಲು 7 ದಿನ ಅಥವಾ ಇನ್ನೂಹೆಚ್ಚಿನ ಕಾಲಾವಕಾಶ

- ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಮೀರಾ ಪಂಡಿತ್‌ ಮಾಹಿತಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ