;Resize=(412,232))
ಬೆಂಗಳೂರು : ಇ-ಸ್ಟ್ಯಾಂಪ್ ನಕಲು ತಡೆ, ಜನರಿಗೆ ಸುಲಭವಾಗಿ ಛಾಪಾ ಕಾಗದ ಸಿಗುವಂತೆ ಮಾಡಲು ಕ್ಯೂಆರ್ ಕೋಡ್ ಅಳವಡಿಸಿರುವ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇ-ಸ್ಟ್ಯಾಂಪ್‌ನಲ್ಲೂ ಸಾಕಷ್ಟು ದುರುಯೋಗ ನಡೆಯುತ್ತಿದೆ. ಎರಡು ವರ್ಷಗಳಿಂದ ಇ-ಸ್ಟ್ಯಾಂಪ್ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗಿದ್ದು, ಅದರಲ್ಲಿ ಕಲರ್ ಪ್ರಿಂಟ್ ತೆಗೆದುಕೊಂಡು, ನಕಲಿ ಇ-ಸ್ಟ್ಯಾಂಪ್ ರೂಪಿಸಿ ಅಕ್ರಮ ಮಾಡಲಾಗುತ್ತಿದೆ. ಅದಕ್ಕಾಗಿ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದರ ಮೂಲಕ ಜನ ಇ-ಸ್ಟ್ಯಾಂಪ್ ವೆಂಡರ್ಸ್ ಬದಲು ತಾವಿರುವಲ್ಲೇ ಕಾವೇರಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿ ಮಾಡಬಹುದು ಎಂದರು.
ಕಡ್ಡಾಯ ನೋಂದಣಿ ಮತ್ತು ನೋಂದಣಿಯೇತರ ಪ್ರಕ್ರಿಯೆಗಳಿಗೆ ಡಿಜಿಟಲ್ ಇ-ಸ್ಟ್ಯಾಂಪ್ ಬಳಕೆ ಮಾಡಬಹುದು. ಕೇಂದ್ರ ಸರ್ಕಾರ ಛಾಪಾ ಕಾಗದ ವ್ಯವಸ್ಥೆಯನ್ನು ಡಿಜಿಟಲ್ ಮಾಧ್ಯಮಕ್ಕೆ ತರುವಂತೆ ಸೂಚಿಸಿದೆ. ಅದಕ್ಕಾಗಿ ಡಿಜಿಟಲ್ ಇ-ಸ್ಟ್ಯಾಂಪ್ ಪರಿಚಯಿಸಲಾಗುತ್ತಿದೆ. ರಾಜ್ಯದ ಸ್ಥಿತಿಗತಿಯನ್ನಾಧರಿಸಿ ಇದನ್ನು ಜಾರಿಗೆ ಸೂಚಿಸಿತ್ತು. ಅದರಂತೆ ಇದೀಗ ಎಲ್ಲ ರೀತಿಯ ಪ್ರಕ್ರಿಯೆಗೂ ಅನ್ವಯವಾಗುವಂತೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡಿ, ನಿಯಮ ರೂಪಿಸಲಾಗಿದೆ. ನೋಂದಣಿ ಮತ್ತು ನೋಂದಣಿಯೇತರ (ಬಾಡಿಗೆ ಮನೆ ಕರಾರು) ಸೇವೆಗಳಿಗೂ ಡಿಜಿಟಲ್ ಇ-ಸ್ಟ್ಯಾಂಪ್ ಅನ್ವಯವಾಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಡಿಜಿಟಲ್ ಇ-ಸ್ಟ್ಯಾಂಪ್‌ಗಳ ನಕಲಿ ತಡೆಗೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದೆ. ಅಲ್ಲದೆ, ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿ ನಂತರ ಯಾವ ಪ್ರಕ್ರಿಯೆಗೆ ಅದನ್ನು ಖರೀದಿಸಲಾಗಿದೆ ಎಂಬುದರ ಬಗ್ಗೆ ದಾಖಲೆ ನೀಡಬೇಕಿದೆ. ಆ ದಾಖಲೆ ಸರ್ಕಾರದಿಂದಲೇ ನಿರ್ವಹಣೆ ಮಾಡಬಹುದು. ಅಲ್ಲದೆ, ಡಿಜಿಟಲ್ ಇ-ಸ್ಟ್ಯಾಂಪ್‌ನಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮೂಲ ದಾಖಲೆಯ ಮಾಹಿತಿ ದೊರೆಯಲಿದೆ. ಅಲ್ಲದೆ, ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿಗೂ ಮುನ್ನ ಆಧಾರ್ ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಕ್ರಮಗಳಿಂದ ಡಿಜಿಟಲ್ ಇ-ಸ್ಟ್ಯಾಂಪ್ ನಕಲಿಯೋ ಅಥವಾ ಅಸಲಿಯೋ ಎಂಬುದು ತಿಳಿಯಲಿದೆ. ಇದರಿಂದ ನಕಲು ಮಾಡುವುದು ಅಸಾಧ್ಯವಿಲ್ಲ ಎಂದು ಕೃಷ್ಣ ವಿವರಿಸಿದರು.
15,000 ಡಿಜಿಟಲ್ ಸೇವಾ ಕೇಂದ್ರಗಳಲ್ಲಿ ಶೀಘ್ರ ಲಭ್ಯ:
ಡಿಜಿಟಲ್ ಇ-ಸ್ಟ್ಯಾಂಪ್‌ಗಳನ್ನು ಕಾವೇರಿ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆಯಬಹುದು. ಇಲ್ಲದಿದ್ದರೆ ಇ-ಸ್ಟ್ಯಾಂಪ್ ವೆಂಡರ್‌ಗಳಲ್ಲೂ ಖರೀದಿಸಬಹುದು. ಉಳಿದಂತೆ ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರ, ನಾಡ ಕಚೇರಿ ಸೇರಿ ರಾಜ್ಯದಲ್ಲಿನ 15 ಸಾವಿರ ಡಿಜಿಟಲ್ ಸೇವಾ ಕೇಂದ್ರಗಳಲ್ಲಿ ದೊರೆಯುವಂತೆ ಮಾಡಲಾಗುವುದು. ಈ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದ್ದು, ಶೀಘ್ರ ಅದಕ್ಕೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು.
ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೊಳಿಸಿದರೂ ಇ-ಸ್ಟ್ಯಾಂಪ್ ರದ್ದು ಮಾಡುವುದಿಲ್ಲ. ಒಮ್ಮೆಲೆ ಹೊಸ ವ್ಯವಸ್ಥೆಗೆ ಜನ ಹೊಂದಿಕೊಳ್ಳಲು ಕಷ್ಟವಾಗುವ ಕಾರಣ ಇ-ಸ್ಟ್ಯಾಂಪ್ ವ್ಯವಸ್ಥೆಯೂ ಇರಲಿದೆ. ಆದರೆ, ಒಂದೇ ಉದ್ದೇಶಕ್ಕೆ ಎರಡು ವ್ಯವಸ್ಥೆ ಇದ್ದರೆ ಗೊಂದಲ ಸೃಷ್ಟಿಯಾಗುವ ಕಾರಣ ಕ್ರಮೇಣವಾಗಿ ಇ-ಸ್ಟ್ಯಾಂಪ್ ರದ್ದು ಮಾಡಿ ಡಿಜಿಟಲ್ ಇ-ಸ್ಟ್ಯಾಂಪ್ ಕಡ್ಡಾಯ ಮಾಡುತ್ತೇವೆ ಎಂದರು. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 14.28 ಕೋಟಿ ಇ-ಸ್ಟ್ಯಾಂಪ್ ಖರೀದಿಸಲಾಗಿದೆ. ಅದರಿಂದ ಸರ್ಕಾರಕ್ಕೆ 6,222 ಕೋಟಿ ರು.ಗೂ ಹೆಚ್ಚಿನ ಆದಾಯ ಬಂದಿದೆ ಎಂದು ತಿಳಿಸಿದರು.
ಡಿಜಿಟಲ್ ಇ-ಸ್ಟ್ಯಾಂಪ್ ಹೀಗೆ ಖರೀದಿ ಮಾಡಿ
-www.kaveri.karnataka.gov.inನಲ್ಲಿ ಖರೀದಿ
- ಕಾವೇರಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಖಾತೆ ಸೃಷ್ಟಿಸಬೇಕು
-ಲಾಗಿನ್ ಆದ ನಂತರ ಯಾವ ಉದ್ದೇಶಕ್ಕೆ ಎಂದು ಖರೀದಿ ವಿವರ ನಮೂದಿಸಬೇಕು (ಬಾಡಿಗೆ ಒಪ್ಪಂದ, ಅಫಿಡವಿಟ್, ಮಾರಾಟ ಒಪ್ಪಂದ)
-ಅರ್ಜಿದಾರರು ಆಧಾರ್ ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸಬೇಕು
- ಆಸ್ತಿ ಸಂಬಂಧಿತ ದಸ್ತಾವೇಜುಗಳಿದ್ದರೆ ಸರ್ಕಾರಿ ಡೇಟಾಬೇಸ್‌ಗಳಿಂದ ಆಸ್ತಿ ಮಾಹಿತಿ ಸ್ವಯಂ ಚಾಲಿತವಾಗಿ ಪರಿಶೀಲನೆಯಾಗುತ್ತದೆ
-ಡಿಜಿಟಲ್ ರೂಪದಲ್ಲಿ ದಸ್ತಾವೇಜು ರಚಿಸಬೇಕು
- ಆನ್‌ಲೈನ್ ಮೂಲಕ ಸ್ಟ್ಯಾಂಪ್ ಶುಲ್ಕ ಪಾವತಿಸಬೇಕು
- ನಂತರ ಯುನಿಕ್ ಸೀರಿಯಲ್ ನಂಬರ್, ಕ್ಯೂಆರ್ ಕೋಡ್ ಮತ್ತು ಡಿಜಿಟಲ್ ವಾಟರ್‌ಮಾರ್ಕ್ ಇರುವ ಡಿಜಿಟಲ್ ಇ-ಸ್ಟ್ಯಾಂಪ್ ರಚನೆ ಆಗಲಿದೆ.
- ಮೊಬೈಲ್‌ಗೆ ಲಿಂಕ್ ಬರಲಿದ್ದು, ಅದರ ಮೂಲಕ ಆಧಾರ್ ಇ-ಸಹಿ ಮಾಡಬೇಕು
-ತರುವಾಯ ಡಿಜಿಟಲ್ ಇ-ಸ್ಟ್ಯಾಂಪ್ ಡೌನ್‌ಲೋಡ್ ಮಾಡಿ ನೋಂದಣಿಗೆ ಬಳಸಬಹುದು
ಡಿಜಿಟಲ್ ಇ-ಸ್ಟಾಂಪ್ ಜಾರಿಗೆ ಕಾರಣಗಳೇನು?
- ಹೆಚ್ಚುತ್ತಿರುವ ನಕಲಿ ಇ-ಸ್ಟಾಂಪ್‌ಗಳ ಹಾವಳಿ ತಡೆಗೆ- ಖರೀದಿ ಉದ್ದೇಶ ಹೊರತು ಬೇರೆ ಉದ್ದೇಶಕ್ಕೆ ಬಳಕೆ ತಡೆಗೆ
- ಸ್ಟ್ಯಾಂಪ್ ಶುಲ್ಕ ವಂಚನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾರಿ
ಡಿಜಿಟಲ್ ಇ-ಸ್ಟ್ಯಾಂಪ್‌ನಿಂದಾಗುವ ಲಾಭ
- ಮಧ್ಯವರ್ತಿಗಳ ನೆರವಿಲ್ಲದೆ ಜನರೇ ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿಸಬಹುದು
- ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರಲಿದ್ದು, ಆನ್‌ಲೈನ್ ಮೂಲಕವೇ ಹಣ ಪಾವತಿ. ಅದು ನೇರವಾಗಿ ಸರ್ಕಾರದ ಖಜಾನೆಗೆ ಪಾವತಿ
- ಯಾವ ಉದ್ದೇಶಕ್ಕೆ ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿಸುತ್ತಾರೋ ಅದೇ ಉದ್ದೇಶಕ್ಕೆ ಬಳಕೆ
- ಆಧಾರ್ ಆಧಾರಿತ ಇ-ಸೈನ್ ಬಳಕೆಯಿಂದ ನಕಲಿ ಸಹಿ, ಗುರುತು ವಂಚನೆ ತಡೆ