2ನೇ ದಿನ ನಗರದಲ್ಲಿ 1,857 ಹಿರಿಯ ನಾಗರಿಕರಿಂದ ಮತ

Published : Apr 15, 2024, 08:27 AM IST
Voting

ಸಾರಾಂಶ

ನಗರದಲ್ಲಿ ಎರಡನೇ ದಿನ ಮನೆಯಿಂದ ಅಂಚೆ ಮತದಾನದ ವೇಳೆ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ 1,857 ಮಂದಿ ಹಿರಿಯ ನಾಗರಿಕರು ಹಾಗೂ ಅಂಗವಿಕರು ಹಕ್ಕು ಚಲಾಯಿಸಿದ್ದಾರೆ

ಬೆಂಗಳೂರು : ನಗರದಲ್ಲಿ ಎರಡನೇ ದಿನ ಮನೆಯಿಂದ ಅಂಚೆ ಮತದಾನದ ವೇಳೆ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ 1,857 ಮಂದಿ ಹಿರಿಯ ನಾಗರಿಕರು ಹಾಗೂ ಅಂಗವಿಕರು ಹಕ್ಕು ಚಲಾಯಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಏ.13 ರಿಂದ ಮನೆಯಿಂದ ಅಂಚೆ ಮತದಾನ ನಡೆಯುತ್ತಿದೆ.

ಅಂಚೆ ಮತದಾನದ ಮೊದಲ ದಿನವಾದ ಶನಿವಾರ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡ ಮನೆ ಮನೆ ಭೇಟಿ ನೀಡಿ ನೋಂದಣಿ ಮಾಡಿಕೊಂಡ 6407 ಮಂದಿ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಪೈಕಿ 3,710 ಮಂದಿಯಿಂದ ಅಂಚೆ ಮತದಾನ ಮಾಡಿಸಿದ್ದರು. ಎರಡನೇ ದಿನವಾದ ಭಾನುವಾರ 1,857 ಮಂದಿ ಮತದಾನ ಮಾಡಿದ್ದಾರೆ. ಈ ಮೂಲಕ ನೋಂದಣಿ ಮಾಡಿಕೊಂಡವರ ಪೈಕಿ ಶೇ.86.89 ರಷ್ಟು ಮತದಾನ ಪೂರ್ಣಗೊಂಡಿದೆ.

ನೋಂದಣಿ ಮಾಡಿಕೊಂಡವರ ಪೈಕಿ ಶನಿವಾರ 18 ಮಂದಿ ಮತದಾನ ಮಾಡುವ ಮೊದಲೇ ಮೃತಪಟ್ಟಿರುವಾಗಿ ತಿಳಿದು ಬಂದಿತ್ತು. ಭಾನುವಾರ 12 ಮಂದಿ ಮೃತಪಟ್ಟಿದ್ದರು. 21 ಮಂದಿ ಗೈರು ಹಾಜರಾಗಿದ್ದಾರೆ. ಒಬ್ಬರು ಮತದಾನಕ್ಕೆ ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವಿಎಂ, ವಿವಿಪ್ಯಾಟ್‌ಗಳ ರ‍್ಯಾಂಡಮೈಸೇಷನ್ ಪೂರ್ಣ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇವಿಎಂ, ವಿವಿ ಪ್ಯಾಟ್‌ಗಳ 2ನೇ ಹಂತದ ರ‍್ಯಾಂಡಮೈಸೇಷನ್ ಅನ್ನು ರಾಜಕೀಯ ಪ್ರತಿನಿಧಿಗಳ ಸಕ್ಷಮದಲ್ಲಿ ಭಾನುವಾರ ಪೂರ್ಣಗೊಳಿಸಲಾಗಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಾದ ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿ.ಟಿ.ಎಂ.ಲೇಔಟ್, ಜಯನಗರ ಹಾಗೂ ಬೊಮ್ಮನಹಳ್ಳಿ ಬರಲಿದ್ದು, ಒಟ್ಟಾರೆ 2120 ಮತಗಟ್ಟೆ ಇವೆ.

ಚುನಾವಣಾ ಆಯೋಗವು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಇವಿಎಂ, ವಿವಿಪ್ಯಾಟ್ ಮೊದಲನೇ ರ‍್ಯಾಂಡಮೈಸೇಷನ್ ಅನ್ನು ಈಗಾಗಲೇ ನಡೆಸಲಾಗಿದ್ದು, 2ನೇ ಹಂತದ ರ‍್ಯಾಂಡಮೈಸೇಷನ್ ಅನ್ನು ಭಾನುವಾರ ಮಾಡಲಾಗಿದೆ ಎಂದು ಸಾಮಾನ್ಯ ವೀಕ್ಷಕ ಮಕರಂದ್ ಪಾಂಡುರಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ