ಈರುಳ್ಳಿ ಮತ್ತು ಟೊಮೆಟೋ ಬೆಲೆ ದಿಢೀರ್ ಕುಸಿತ ಕಂಡಿದ್ದು, ಆಕ್ರೋಶಗೊಂಡ ಬೆಳೆಗಾರರು

ಸಾರಾಂಶ

ಈರುಳ್ಳಿ ಮತ್ತು ಟೊಮೆಟೋ ಬೆಲೆ ದಿಢೀರ್ ಕುಸಿತ ಕಂಡಿದ್ದು, ಆಕ್ರೋಶಗೊಂಡ ಬೆಳೆಗಾರರು ಈರುಳ್ಳಿ ಮತ್ತು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ಹೂವಿನಹಡಗಲಿಯಲ್ಲಿ ನಡೆದಿದೆ.

 ಹೂವಿನಹಡಗಲಿ/ಬೆಳಗಾವಿ : ಈರುಳ್ಳಿ ಮತ್ತು ಟೊಮೆಟೋ ಬೆಲೆ ದಿಢೀರ್ ಕುಸಿತ ಕಂಡಿದ್ದು, ಆಕ್ರೋಶಗೊಂಡ ಬೆಳೆಗಾರರು ಈರುಳ್ಳಿ ಮತ್ತು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ಹೂವಿನಹಡಗಲಿಯಲ್ಲಿ ನಡೆದಿದೆ. ಮತ್ತೊಂದೆಡೆ ಎಲೆಕೋಸು (ಕ್ಯಾಬೇಜ್‌) ದರವೂ ಕುಸಿದಿದ್ದು, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ರೆವರೆಂಡ್‌ ಉತ್ತಂಡಿ ಚೆನ್ನಪ್ಪ ವೃತ್ತದಲ್ಲಿ ನೂರಾರು ರೈತರು ತಾವು ಬೆಳೆದ ಈರುಳ್ಳಿ ಮತ್ತು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.

ಮಾರುಕಟ್ಟೆಯಲ್ಲಿ 1 ಕ್ವಿಂಟಲ್ ಈರುಳ್ಳಿಗೆ ₹1000ದಿಂದ ₹1200 ವರೆಗೆ ಬೆಲೆ ಇದೆ. ದರ ಕುಸಿತದಿಂದ ಪ್ರತಿ ವರ್ಷವು ಕೂಡ ನಷ್ಟ ಅನುಭವಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು, ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕ್ವಿಂಟಲ್‌ಗೆ ₹4000 ಬೆಲೆಯಂತೆ ಈರುಳ್ಳಿ ಖರೀದಿಸಬೇಕೆಂದು ಒತ್ತಾಯಿಸಿದರು.

ಟೊಮೆಟೋ ಬೆಳೆದ ರೈತರಿಗೆ ಕೇಜಿಗೆ 1 ರುಪಾಯಿ ಸಹ ಸಿಗುತ್ತಿಲ್ಲ, ಟೊಮೆಟೋ ಕೇಳೋರಿಲ್ಲ, ರೈತರು ಮಾಡಿರುವ ಸಾಲಕ್ಕೆ ದಿಕ್ಕು ಕಾಣದಂತಾಗಿದೆ. ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದರು.

ಕೋಸಿನ ದರ ಕೇಜಿಗೆ ₹80 ಪೈಸೆ:

ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಗೆ ಕೋಸು ಎಸೆದು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು. ಕೋಸಿನ ದರ ಕುಸಿದಿದ್ದು, ಕೆಜಿಗೆ ₹80 ಪೈಸೆ ಸಿಗುತ್ತಿದೆ. ದರ ಕುಸಿತದಿಂದ ಬೆಳೆಗಾರರು ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂರ್ನಾಲ್ಕು ತಿಂಗಳಿಂದ ಕೋಸು, ಮೂಲಂಗಿ ಮತ್ತಿತರ ತರಕಾರಿಗಳ ದರ ಕುಸಿದಿದೆ. ಮಾರಾಟಕ್ಕೆ ಮಾರುಕಟ್ಟೆಗೆ ತಂದರೆ ವಾಹನ ಬಾಡಿಗೆ ಸಿಗುತ್ತಿಲ್ಲ. ಬೆಳೆಗಳು ಹೊಲದಲ್ಲೇ ಕೊಳೆಯುತ್ತಿವೆ. ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗದೆ. ಎಲ್ಲ ತರಕಾರಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಹಾನಿಗೀಡಾದ ಕೋಸು ಬೆಳೆಗಾರರಿಗೆ ಸೂಕ್ತ ಪರಿಹಾರ ಧನ ನೀಡುವಂತೆ ರೈತರು ಆಗ್ರಹಿಸಿದರು.

Share this article