;Resize=(412,232))
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರಮುಖ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸೋಮವಾರವೂ ವಿಧಾನಮಂಡಲದ ಉಭಯ ಸದನಗಳಲ್ಲಿ ಹೋರಾಟ ಮುಂದುವರೆಸಲಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಚರ್ಚೆ ನಡೆಸಿದ್ದೇನೆ. ಈ ಹೋರಾಟವನ್ನು ಕೈಬಿಡಬೇಡಿ ಎಂದಿದ್ದಾರೆ. ಹೀಗಾಗಿ, ಸೋಮವಾರ ಕೂಡ ಉಭಯ ಸದನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕಳೆದ 1 ವಾರದಿಂದ ವಾಲ್ಮೀಕಿ ನಿಗಮದ ಹಣ ಲೂಟಿ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಈ ಹಣವನ್ನು ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಗೆ ಬಳಸಿದ ದಾಖಲೆ ಇದೆ. ಕಾಂಗ್ರೆಸ್ ನಮ್ಮ ವಿರುದ್ಧವೇ ಪ್ರತಿಭಟನೆ ಮಾಡುತ್ತಿದೆ. ಆಡಳಿತ ಪಕ್ಷವೇ ಭಯಗೊಂಡು ಹೋರಾಟ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
ಎಸ್‌ಐಟಿಗೆ ಸರ್ಕಾರದ ಒತ್ತಡ ಇತ್ತು. ಸಿಬಿಐ ಮತ್ತು ಲೋಕಾಯುಕ್ತದವರು 3 ರಾಜಕೀಯ ನಾಯಕರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಾರೆ. ನಾಗೇಂದ್ರ, ಎಂ.ಪಿ.ರೇಣುಕಾಚಾರ್ಯ ಹಾಗೂ ಗಾಲಿ ಜನಾರ್ದನ ರೆಡ್ಡಿ ಮೂವರ ವಿರುದ್ಧ ತನಿಖೆಗೆ ಲೋಕಾಯುಕ್ತ ಸಂಪುಟದ ಅನುಮತಿ ಕೇಳಿದೆ. ರೆಡ್ಡಿ ಮತ್ತು ರೇಣುಕಾಚಾರ್ಯ ಅವರ ವಿರುದ್ಧದ ತನಿಖೆಗೆ ಅನುಮತಿ ಕೊಡುತ್ತಾರೆ. ಕಾರಣ ಅವರು ಬಿಜೆಪಿಯವರು. ನಾಗೇಂದ್ರ ವಿರುದ್ಧ ತನಿಖೆಗೆ ಅನುಮತಿ ಕೊಡಲ್ಲ. ನಾನು ಮುಂಚಿತವಾಗಿ ಹೇಳುತ್ತಿದ್ದೇನೆ ಎಂದರು.
ನಮ್ಮ ಹೋರಾಟ ನಿರಂತರವಾಗಿ ಸದನದ ಒಳಗೆ ಮತ್ತು ಹೊರಗೆ ನಡೆಯಲಿದೆ. ಅಂತಿಮವಾಗಿ ರಾಜ್ಯಪಾಲರವರೆಗೂ ಹೋಗುತ್ತೇವೆ. ಕೊನೆ ಅಸ್ತ್ರವಾಗಿ ರಾಜಭವನದ ಬಾಗಿಲು ತಟ್ಟುತ್ತೇವೆ. ಅಲ್ಲದೆ ಇನ್ನೂ ಬೇರೆ ಬೇರೆ ರೀತಿಯ ಪ್ರತಿಭಟನೆ ಬಗ್ಗೆಯೂ ತೀರ್ಮಾನ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದರು.
ಬೆಂಕಿ ಜ್ವಾಲೆ ಇದೆ. ಸಚಿವ ನಾಗೇಂದ್ರ ಪರ ಯಾರೂ ಮಾತನಾಡುತ್ತಿಲ್ಲ. ನಾಗೇಂದ್ರ ರಾಜೀನಾಮೆ ಪಡೆದು ನೈಸ್, ಬಿಡದಿ ವಿಷಯ ಚರ್ಚೆಗೆ ಅವಕಾಶ ನೀಡಲು ಕಾಂಗ್ರೆಸ್‌ಗೆ ಒಳ್ಳೆಯ ಬುದ್ಧಿಯನ್ನು ದೇವರು ನೀಡುತ್ತಾನೆ ಎಂಬ ಆಶಾಭಾವನೆ ಇದೆ. ನಮಗೂ ಅಧಿವೇಶನ ಚೆನ್ನಾಗಿ ನಡೆಯಬೇಕು ಎಂಬ ಜವಾಬ್ದಾರಿ ಇದೆ ಎಂದು ಹೇಳಿದರು.