ಅನಿರೀಕ್ಷಿತ ಕೆಂಪು ಕೊಳೆ ರೋಗ ಮತ್ತು ಎಲ್ ನಿನೊ ಪ್ರೇರಿತ ಮಳೆ ಕೊರತೆಯಿಂದಾಗಿ ವಿಶ್ವಾದ್ಯಂತ ಒಟ್ಟಾರೆ ಕೃಷಿ ಹಾಗೂ ಸಕ್ಕರೆ ಇಳುವರಿಯಲ್ಲಿ ಕುಂಠಿತವಾಗಿದೆ. ಇದು ಸಕ್ಕರೆ ಬೆಲೆ ಏರಿಕೆಗೆ ಕಾರಣವಾಗಿದೆ
ಹುಬ್ಬಳ್ಳಿ : ಅನಿರೀಕ್ಷಿತ ಕೆಂಪು ಕೊಳೆ ರೋಗ ಮತ್ತು ಎಲ್ ನಿನೊ ಪ್ರೇರಿತ ಮಳೆ ಕೊರತೆಯಿಂದಾಗಿ ವಿಶ್ವಾದ್ಯಂತ ಒಟ್ಟಾರೆ ಕೃಷಿ ಹಾಗೂ ಸಕ್ಕರೆ ಇಳುವರಿಯಲ್ಲಿ ಕುಂಠಿತವಾಗಿದೆ. ಇದು ಸಕ್ಕರೆ ಬೆಲೆ ಏರಿಕೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಲಭ್ಯವಿರುವ ಸಕ್ಕರೆ ದಾಸ್ತಾನನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಜನತಾದರ್ಶನ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ರು
ನಗರದಲ್ಲಿ ಭಾನುವಾರ ಜನತಾದರ್ಶನ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದೇಶದಲ್ಲಿ ಸಕ್ಕರೆಯ ಕೊರತೆಯಿಲ್ಲ. ಸಾರ್ವಜನಿಕರಿಗೆ ಹಳೆಯ ದರದಲ್ಲಿಯೇ ಸಕ್ಕರೆ ದೊರೆಯುವಂತೆ ಕ್ರಮ ಕೈಗೊಳ್ಳಲು ಈಗಾಗಲೇ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದರು.
ದೇಶಕ್ಕೆ ವಾರ್ಷಿಕ ಸುಮಾರು 280 ಲಕ್ಷ ಟನ್ ಸಕ್ಕರೆ ಅಗತ್ಯ
ದೇಶಕ್ಕೆ ವಾರ್ಷಿಕ ಸುಮಾರು 280 ಲಕ್ಷ ಟನ್ ಸಕ್ಕರೆ ಅಗತ್ಯವಿದೆ. ಪ್ರಸ್ತುತ ಸುಮಾರು 306 ಲಕ್ಷ ಟನ್ ಸಕ್ಕರೆ ದಾಸ್ತಾನು ಇದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ದಾಸ್ತಾನು ಇರುವುದರಿಂದ ಅದನ್ನು ಸಮರ್ಪಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

