ಬೆಂಗಳೂರು : ಕಾಯಕಯೋಗಿ ಬಸವಣ್ಣರ ಕುರಿತು ಅವಹೇಳನಕಾರಿ ಬರಹ, ಸಂದರ್ಶನ ಪ್ರಕಟಿಸಿ ಅಪಮಾನ ಮಾಡಿರುವುದನ್ನು ಗುರುವಾರ ಖಂಡಿಸಿ ಸಚಿವರಾದ ಎಂ.ಬಿ. ಪಾಟೀಲ್, ಶರಣಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ಬಸವ ಸಮಿತಿ ಸದಸ್ಯರು ನಗರದಲ್ಲಿ ಬಸವಮಂಟಪ ಎಂಬ ಪುಸ್ತಕ ಸುಟ್ಟು ಲೇಖಕರು, ಪ್ರಕಾಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಪುಸ್ತಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು, ಲೇಖಕರು ಹಾಗೂ ಪ್ರಕಾಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ನಗರದ ಬಸವೇಶ್ವರ ವೃತ್ತದ ಬಸವ ಸಮಿತಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಸವಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಚಿವರಾದ ಎಂ.ಬಿ.ಪಾಟೀಲ್, ಶರಣಪ್ರಕಾಶ ಪಾಟೀಲ್, ಲಂಡನ್ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ನೀರಜ್ ಪಾಟೀಲ್, ಶಾಸಕ ಬಿ.ಆರ್.ಪಾಟೀಲ್ ಹಾಗೂ ಇತರರು ಲೇಖಕ ರವಿ ಹಂಜ್ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.
ಬಸವಣ್ಣರ ವಿರುದ್ದ 12ನೇ ಶತಮಾನದಲ್ಲಿ ಕೊಂಡಿ ಮಂಚಣ್ಣ ಷಡ್ಯಂತ್ರ ರೂಪಿಸಿದ. ಬಸವತತ್ವಗಳ ವಿರುದ್ಧ ಈಗಲೂ ಷಡ್ಯಂತ್ರ ರೂಪಿಸುವ ಹಲವು ಕೊಂಡಿ ಮಂಚಣ್ಣರು ಈಗಲೂ ಇದ್ದಾರೆ, ಇದೊಂದು ಷಡ್ಯಂತ್ರ ಎಂದು ಸಚಿವ ಎಂ.ಬಿ.ಪಾಟೀಲ್ ಖಂಡಿಸಿದರು.
ರವಿ ಹಂಜ್ ಕೃತಿಯಲ್ಲಿ ಕಲ್ಯಾಣ ಕರ್ನಾಟಕದ ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನವನ್ನು ತಿರುಚಿ ಅವರನ್ನೇ ಕೊಲೆಗಡುಕ ಎಂದಿರುವ ರವಿಹಂಜ್ ಹಾಗೂ ಅದನ್ನು ಸರಣಿಯಾಗಿ ಪ್ರಕಟಿಸಿ ಪುಸ್ತಕ ರೂಪದಲ್ಲಿ ಹೊರತಂದಿರುವವರದ್ದು ಷಡ್ಯಂತ್ರ. ಜಗತ್ತಿನ ಸಾಂಸ್ಕೃತಿಕ ನಾಯಕ, ಬಸವ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ನಾಯಕ ಬಸವಣ್ಣ ಅವರನ್ನು ಹೀಗೆ ಅಪಮಾನ ಮಾಡುವುದು ಖಂಡನೀಯ ಎಂದರು.
ಸಮಾಜದಲ್ಲಿ ಸೂಳೆ ಸಂಕವ್ವನಿಗೂ ಸ್ಥಾನ ನೀಡಿ ಸಮಾಜದ ಎಲ್ಲಾ ವರ್ಗದ ಜನರಿಗೆ ಸಮಾನ ಹಕ್ಕು ನೀಡಿ ಸಮಾಜದ ಮುಖ್ಯವಾಹಿನಿಗೆ ತಂದಂತಹ ವ್ಯಕ್ತಿಯ ವಿರುದ್ಧ ಈ ರೀತಿಯ ಅಪಮಾನ ಮಾಡಿದರೆ ಸಲ್ಲದು, 770 ಕೋಟಿ ಶರಣರಿಗೂ ಅವಕಾಶ ನೀಡಿದರು ಎಂದರು.
ಕಲ್ಯಾಣ ಬಸವಣ್ಣರ ವಚನಗಳ ಜೊತೆ ಖೊಟ್ಟಿ ವಚನಗಳನ್ನು ಸೇರಿಸಿ ಅದನ್ನು ಪ್ರಕಟಿಸಿ ಅದನ್ನೇ ನಿಜವೆಂದು ತಿಳಿಸಿದರು. ಅದನ್ನು ಬಸವ ಸಮಿತಿ ಶುದ್ಧೀಕರಿಸಲಾಗಿದೆ ಎಂದರು. ಜಗತ್ತಿಗೆ ಅನುಭವ ಮಂಟಪವನ್ನು ಪರಿಚಯಿಸಿದ ಬಸವಣ್ಣ ಅವರನ್ನು ಅಪಮಾನಿಸಿ, ಹೀನಾಯವಾಗಿ ಕಂಡು, ಸಂಶೋಧನೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾನೆ ಎಂದು ಆರೋಪಿಸಿದರು.
ರವಿಹಂಜ್ ಕೇವಲ ಮೌತ್ ಪೀಸ್. ಇದರ ಹಿಂದೆ ಇರುವವರ ವಿರುದ್ಧ ಕ್ರಮವಾಗಬೇಕಿದೆ. ನಿಮ್ಮ ಧರ್ಮ ಸನಾತನ ಧರ್ಮ, ಜೈನ ಧರ್ಮ ನಿಮ್ಮ ನಿಮ್ಮ ಧರ್ಮ ಪ್ರಚಾರ ಮಾಡಿ, ನಾವು ನಮ್ಮ ಬಸವ ಧರ್ಮ ಪ್ರಚಾರ ಮಾಡುತ್ತೇವೆ. ನಾವೇನಾದರೂ ನಿಮ್ಮ ಧರ್ಮವನ್ನು ಅಪಪ್ರಚಾರ ಮಾಡ್ತೇವಾ, ಬೇರೆ ಧರ್ಮವನ್ನು ಪ್ರೀತಿಸಿ, ಗೌರವ ನೀಡಿ, ಇದು ನಮ್ಮ ಸಂಸ್ಕೃತಿ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ನಾನು, ಶರಣಪ್ರಕಾಶ್ ಪಾಟೀಲರು ಎಲ್ಲರೂ ಸೇರಿ ಮುಖ್ಯಮಂತ್ರಿ ಅವರ ಜೊತೆ ಮಾತನಾಡಿ ಮುಂದೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದರು.
ರವಿಹಂಜ್ನಂತಹ ವ್ಯಕ್ತಿ ವಿಡಿಯೋ ಮಾಡಿ ಸಂದರ್ಶನ ಮಾಡಿದ ನಂತರವೂ ನಮ್ಮಲ್ಲೂ ಕೊಂಡಿ ಮಂಚಣ್ಣರಂತಹವರು ಇದ್ದಾರೆ. ನಿವೃತ್ತ ಡಿಜಿಪಿ ಶಂಕರ ಬಿದರಿ, ಕನ್ನಡ ಸಾಹಿತ್ಯ ಪರಿಷತ್ತಿನ ಮನು ಬಳಿಗಾರ ಹೋಗಿ ಈ ಪುಸ್ತಕ ಬಿಡುಗಡೆ ಮಾಡಿ ಚಪ್ಪಾಳೆ ತಟ್ಟಿ ಬರುತ್ತಾರೆ. ಇದು ದುರಂತ. ನಮ್ಮಲ್ಲೂ ಭಿನ್ನಾಭಿಪ್ರಾಯಗಳಿದ್ದಾವೆ. ಆದರೆ, ಬಸವಣ್ಣರ ವಿಚಾರ ಬಂದಾಗ ಎಲ್ಲರೂ ಒಂದೆ. ಇನ್ನು ಮುಂದೆ ಬಸವಣ್ಣರು, ವಚನಗಳು, ಸಂಸ್ಕೃತಿ ಮೇಲೆ ದಾಳಿ ಮಾಡಿದರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಬಸವಣ್ಣ 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಅಕ್ಕಮಹಾದೇವಿ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಮುಂತಾದವರಿಗೆ ಅವಕಾಶ ನೀಡಿದ್ದಲ್ಲದೆ, ಮಹಿಳೆಯರು, ಹಿಂದುಳಿದವರು, ದಲಿತರು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಮೀಸಲಾತಿ ನೀಡಿ ಅವರಿಗೆ ಎಲ್ಲಾ ರೀತಿಯ ಅವಕಾಶ ನೀಡಿದ್ದಾರೆ. ಅಂತಹ ವ್ಯಕ್ತಿಯ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಒಂದು ಗುಂಪು ಮಾಡುತ್ತಿದೆ, ಮತ್ತೊಂದು ಗುಂಪು ಇದಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಕಲ್ಯಾಣ ಕ್ರಾಂತಿಯ ಐತಿಹಾಸಿಕ ಸಂಘರ್ಷಗಳನ್ನು ತಿರುಚಿ ಬಸವಣ್ಣನವರ ತಲೆಗೆ ಕಟ್ಟುವುದು ಇತಿಹಾಸಕ್ಕೆ ಬಗೆಯುವ ಅಪಚಾರ. ಇಂತಹ ಪೂರ್ವಾಗ್ರಹಪೀಡಿತ ಬರಹಗಳಿಗೆ ಸಂಶೋಧನೆಯ ಮುಖವಾಡ ತೊಡಿಸಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ರವಿಹಂಜ್ ಎಂಬ ವ್ಯಕ್ತಿ ಮಾಡುತ್ತಿದ್ದಾರೆ. ಅದಕ್ಕೆ ಹೆಬ್ಬಾಗಿಲು ಕೊಟ್ಟು ಪುಷ್ಟಿ ಕೊಡುತ್ತಿರುವ ಪತ್ರಕರ್ತರೊಬ್ಬರು ಇದ್ದಾರೆ. ಅವರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮುಂದುವರಿಯಲಿದೆ ಎಂದು ಜತ್ತಿ ತಿಳಿಸಿದರು.
ನನ್ನನ್ನು ಇಲ್ಲಿಗೆ ಯಾರೂ ಕರೆದಿಲ್ಲ. ನಾನೇ ಸ್ವಯಂ ನಿರ್ಧಾರದಿಂದ ಇಲ್ಲಿಗೆ ಬಂದು ರವಿಹಂಜ್ ಕೃತ್ಯವನ್ನು ಖಂಡಿಸುತ್ತಿದ್ದೇನೆ. ಇನ್ನು ಮುಂದೆಯೂ ರಾಜ್ಯದ ವೀರಶೈವ ಲಿಂಗಾಯತರು ಹಮ್ಮಿಕೊಳ್ಳುವ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ಬಸವೇಶ್ವರ ವೃತ್ತದ ಬಸವ ಸಮಿತಿ ಕಚೇರಿಯ ಆವರಣದಲ್ಲಿ ಬಸವಮಂಟಪ ಪುಸ್ತಕವನ್ನು ರಾಜ್ಯ ಬಸವ ಯುವ ಬಳಗದ ಕಾರ್ಯಕರ್ತರು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಲೇಖಕರ ವಿರುದ್ಧ ಘೋಷಣೆ ಕೂಗಿದರು.
ಈಗಾಗಲೇ ರಾಜ್ಯಾದ್ಯಂತ ಪಕ್ಷಾತೀತವಾಗಿ ಬಸವಣ್ಣನವರ ವಿರುದ್ಧ ಬರೆದಿರುವ ಅವಹೇಳನಕಾರಿ ಲೇಖನ ಹಾಗೂ ಸಂದರ್ಶನದ ವಿರುದ್ಧ ದೂರು ದಾಖಲಿಸಲಾಗುವುದು. ಇನ್ನು ಮುಂದೆಯೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯ ಬಳಿಕ ಶಾಸಕ ಬಿ.ಆರ್.ಪಾಟೀಲ್, ಅರವಿಂದ ಜತ್ತಿ, ಗಂಗಾಂಬಿಕೆ ಹಾಗೂ ಬಸವ ಸಮಿತಿಯ ಸದಸ್ಯರು ಲೇಖಕರ ವಿರುದ್ಧ ಹಾಗೂ ಪ್ರಕಟಿಸಿದ ಪ್ರಕಾಶಕರ ವಿರುದ್ಧ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸುಮಂಗಲಿ ಸೇವಾಶ್ರಮದ ಸುಶೀಲಮ್ಮ, ಬಸವ ಸಮಿತಿಯ ಸದಸ್ಯೆ ಮಾಜಿ ಮೇಯರ್ ಗಂಗಾಬಿಕೆ ಹಾಗೂ ಇತರರು ಪಾಲ್ಗೊಂಡಿದ್ದರು.
ಜತ್ತಿ ಮಾತನಾಡಿ, ಕಾಯಕ ಯೋಗಿ ಬಸವಣ್ಣ ವಿಶ್ವ ನಾಯಕ, ವಿಶ್ವ ಗುರು ಎಂದು ಈಗಾಗಲೇ ಸಾಬೀತಾಗಿದೆ, 43 ಸಾವಿರ ಪುಸ್ತಕಗಳಲ್ಲಿ ಬಸವಣ್ಣ ಅವರ ಕಾಯಕದ ಕುರಿತು ಬರೆಯಲಾಗಿದ್ದು, ಇಡೀ ವಿಶ್ವವೇ ಅವರನ್ನು ಹೊಗಳಿದೆ. ಆದರೆ, ಅವನ್ಯಾರೋ ಅವಿದ್ಯಾವಂತ, ತಾನು ಸಂಶೋಧನೆ ಮಾಡಿದ್ದೇನೆ ಎಂದು ಸುಳ್ಳು ಅಂಶಗಳನ್ನು ಸೇರಿಸಿ ಪುಸ್ತಕ ಪ್ರಕಟಿಸಿ ಅದನ್ನೇ ಸತ್ಯವೆಂದು ನಂಬಿಸಲು ಹೊರಟಿದ್ದಾರೆ. ಇದು ಖಂಡನೀಯ, ಅಕ್ಷಮ್ಯ ಅಪರಾಧ ಎಂದರು.
ನೀರಜ್ ಪಾಟೀಲ್ ಮಾತನಾಡಿ, ಲಂಡನ್ನಂತಹ ದೇಶದಲ್ಲಿ ಬಸವಣ್ಣ ಅವರ ಪ್ರತಿಮೆ ನಿರ್ಮಾಣ ಮಾಡಲು ಒಂದು ಮನವಿ ಕೊಟ್ಟೆ, ಅದನ್ನು ಸ್ವೀಕರಿಸಿದ ಲಂಡನ್ ಸರ್ಕಾರ ಬಸವಣ್ಣನವರ ಕುರಿತು ತಕ್ಷಣವೇ ಶೋಧನೆ ನಡೆಸಿ ಅವರು ಮಾಡಿರುವ ಕೆಲಸಗಳನ್ನು ಓದಿ ತಿಳಿದು ಕೂಡಲೇ ಪ್ರತಿಮೆ ಸ್ಥಾಪಿಸಲು ಅನುಮತಿ ನೀಡಿತು. ಇಂತಹ ಮಹಾನ್ ನಾಯಕನ ವಿರುದ್ಧ ಅಪಪ್ರಚಾರ ಮಾಡಿ ಸಮಾಜಕ್ಕೆ ತಪ್ಪು ಸಂದೇಶ ಸಾರುವವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದರು.