ಬೆಂಗಳೂರು : ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವ ವಿವಾದಿತ ‘ಬಸವ ಮಂಟಪ’ ಕೃತಿಯ ಲೇಖಕ ಹಾಗೂ ಪ್ರಕಾಶಕರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿರುವ ಹಲವು ಮಠಾಧೀಶರು, ಚಿಂತಕರು ಮತ್ತು ಸಾಹಿತಿಗಳು, ‘ಬಸವಾದಿ ಶರಣರು ಹಾಗೂ ಬಸವ ಸಂಸ್ಕೃತಿ ಮೇಲೆ ಆಗಾಗ ನಡೆಯುತ್ತಿರುವ ದಾಳಿ ಮುಂದುವರೆದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸೋಣ’ ಎಂದು ಸರ್ವಾನುಮತದಿಂದ ನಿರ್ಣಯಿಸಿದ್ದಾರೆ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ನಗರದ ಬಸವ ಸಮಿತಿಯಲ್ಲಿ ಬುಧವಾರ ಆಯೋಜಿಸಿದ್ದ ‘ಇವ ನಮ್ಮವ: ಚಿಂತನ-ಮಂಥನ’ದಲ್ಲಿ ಒಕ್ಕೂಟದ ಪರ ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ‘ವಿಶ್ವಗುರು ಬಸವಣ್ಣನವರು ಮತ್ತು ಬಸವಾದಿ ಶರಣರು ಹಾಗೂ ಬಸವ ಸಂಸ್ಕೃತಿ ಮೇಲೆ ನಿರಂತರವಾಗಿ ನಡೆಸುತ್ತಿರುವ ದಾಳಿಯನ್ನು ಇಲ್ಲಿಗೇ ನಿಲ್ಲಿಸಬೇಕು. ಇದು ಮುಂದುವರಿದರೆ ನಾವೆಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಏಕೈಕ ನಿರ್ಣಯ ಮಂಡಿಸಿದರು. ಇದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಇದೇ ವೇಳೆ, ವಿವಾದಿತ ಕೃತಿ ಮುಟ್ಟುಗೋಲು ಹಾಕಿಕೊಂಡ ಸರ್ಕಾರದ ತ್ವರಿತ ಕ್ರಮ ಸ್ವಾಗತಿಸಿದ ಮಠಾಧೀಶರು, ಚಿಂತಕರು, ಮುಂದೆಯೂ ಇದು ಎಲ್ಲಿಯೂ ಪ್ರಕಟವಾಗದಂತೆ ಹಾಗೂ ಮಾರಾಟವಾಗದಂತೆ ಸಂಪೂರ್ಣ ನಿಷೇಧ ಹೇರಬೇಕು. ಜತೆಗೆ ವಿವಾದಿತ ಕೃತಿಯ ಕರ್ತೃ ರವಿ ಹಂಜ್ಗೆ ಶಿಕ್ಷೆ ಆಗುವಂತೆ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಮಾತನಾಡಿದ ತುಮಕೂರಿನ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರು, ಇಡೀ ಮನುಕುಲವೇ ಪ್ರೀತಿಸುವ ವ್ಯಕ್ತಿತ್ವ ಅಂದರೆ ಅದು ಬಸವಣ್ಣ. ಅವರ ವಿಚಾರಗಳು ಎಂದೆಂದಿಗೂ ಬೇಕಾಗುವಂಥವು. ಅಂತಹ ವಿಶ್ವುಗುರುವಿಗೆ ಆದ ಅವಮಾನ ಕನ್ನಡ, ಕನ್ನಡ ನಾಡು ಹಾಗೂ ನಮಗೆಲ್ಲರಿಗೂ ಆದ ಅವಮಾನ. ಕೆಲವರಿಗೆ ಅವರಿಗೆ ತಿಳಿದಿದ್ದೇ ಸಂಶೋಧನೆ ಆಗಿಬಿಟ್ಟಿದೆ. ಇದನ್ನು ನಾವು ಖಂಡಿಸುತ್ತೇವೆ. ವಿವಾದಿತ ಕೃತಿಯನ್ನು ನಾವು ಯಾರೂ ಓದಿಲ್ಲ. ಆ ಪುಸ್ತಕ ನಮ್ಮವರೆಗೂ ಬಂದಿಲ್ಲ. ಆದರೆ, ಪುಸ್ತಕದ ಲೇಖಕ ಆಡಿರುವ ಮಾತು ನಮ್ಮ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ನಮ್ಮ ಭಾವನೆಗಳಿಗೆ ಚ್ಯುತಿ ತರುವ ಕೆಲಸ ಆಗುತ್ತಿದ್ದು, ಈ ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು.
ಕೃತಿ ಮುಟ್ಟುಗೋಲಿಗೆ ಸರ್ಕಾರದ ಸಂಪುಟ ನಿರ್ಣಯ ಹಾಗೂ ತ್ವರಿತ ಕ್ರಮ ಸ್ವಾಗತಾರ್ಹ. ಮುಂದೆ ಕೂಡ ಎಲ್ಲೂ ಆ ಪುಸ್ತಕ ಮುದ್ರಣ, ಮಾರಾಟ, ಪ್ರಸಾರ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಭಾಲ್ಕಿಯ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿವಾದಿತ ಕೃತಿಯ ಬಹುತೇಕ ಎಲ್ಲ ಭಾಗಗಳು ಲೇಖನ ರೂಪದಲ್ಲಿ ವರ್ಷದಿಂದ ಪ್ರಕಟವಾಗಿವೆ. ಮೊಳಕೆಯಲ್ಲೇ ಇದನ್ನು ಚಿವುಟಿ ಹಾಕಿದ್ದರೆ, ಇಂದಿನ ಸ್ಥಿತಿ ಉದ್ಭವಿಸುತ್ತಿರಲಿಲ್ಲ. ಬಸವಣ್ಣನ ಮೇಲೆ ಆಗಾಗ್ಗೆ ವ್ಯವಸ್ಥಿತ ದಾಳಿಗಳು ನಡೆಯುತ್ತಲೇ ಇವೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡುವ ಜತೆಗೆ ಸ್ಪಷ್ಟನೆ ನೀಡಲು ವ್ಯವಸ್ಥಿತವಾದ 11 ಅಥವಾ 21 ಜನ ವಿದ್ವಾಂಸರು ಮತ್ತು ಚಿಂತಕರ ಸಮಿತಿ ರಚನೆ ಅವಶ್ಯವಿದೆ ಎಂದು ಪ್ರತಿಪಾದಿಸಿದರು.
ನಮ್ಮ ಅತಿಯಾದ ವಿನಯವಂತಿಕೆ ಹೇಡಿತನ ಆಗುತ್ತದೆ. ಹಾಗಾಗದಿರಲು, ಗಣಾಚಾರ ಪಡೆ ನಿರ್ಮಾಣ ಆಗಬೇಕು. ಅದು ಸತ್ಯಕ್ಕಾಗಿ ಹೋರಾಡಬೇಕು. ಈಗ ಮುಟ್ಟುಗೋಲು ಹಾಕಿಕೊಂಡಿರುವ ಕೃತಿ ಹಾಗೇ ದಾಖಲೆಯಾಗಿ ಉಳಿಯಲೇಬಾರದು. ಸರ್ಕಾರ ಆ ರೀತಿ ಕ್ರಮ ವಹಿಸಬೇಕು ಎಂದರು.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅನುಭವ ಮಂಟಪ ಅಭಿಯಾನ ಮತ್ತೆ ಆರಂಭಿಸುವ ಅವಶ್ಯಕತೆ ಇದೆ. ಇದರ ಜತೆಗೆ ಸಂಶೋಧನಾ ಕೆಲಸಗಳೂ ಆಗಬೇಕು. ಮಠಾಧಿಪತಿಗಳೆಲ್ಲರೂ ಸೇರಿ ಒಂದು ಗ್ರಂಥ ಹೊರತರಬೇಕು ಎಂದು ಪ್ರತಿಪಾದಿಸಿದರು.
ಇದು ಸಾಂಸ್ಕೃತಿಕ ಭಯೋತ್ಪಾದಕರ ವಿಕೃತಿ:
ಸಾಹಿತಿ ಡಾ.ಎಲ್.ಹನುಮಂತಯ್ಯ ಮಾತನಾಡಿ, ಸರ್ಕಾರ ಅತ್ಯಂತ ವಿವೇಚನೆಯಿಂದ ಘೋಷಿಸಿದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿರುದ್ಧ ವಿಕೃತಿ ಮೆರೆಯುವ ಕೆಲಸ ಸಾಂಸ್ಕೃತಿಕ ಭಯೋತ್ಪಾದಕರಿಂದ ಆಗಿದೆ. ಅವರಿಗೆ ಶಿಕ್ಷೆ ಆಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು, ಇಲ್ಲಿ ಬರೀ ಹುತ್ತ ಬಗೆಯುವ ಕೆಲಸ ಆಗುತ್ತಿದೆ. ಹಾವನ್ನೇ ಹೊಡೆಯುವ ಕೆಲಸ ಆಗಬೇಕು. ದೇಶವನ್ನು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರತರಲು ಹೋರಾಡಿದ ಮಹಾನ್ ಚೇತನ ಬಸವಣ್ಣ. ಅವರು ಚಾತುರ್ವರ್ಣ ವ್ಯವಸ್ಥೆ ವಿರುದ್ಧ ಹೋರಾಡಿದರು. ಅಂತಹವರ ಬಗ್ಗೆ ಅವಹೇಳನಕಾರಿಯಾಗಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ವಚನಗಳ ರೂಪದಲ್ಲಿ ನೀಡಿದ ಉಪ ಉತ್ಪನ್ನಗಳನ್ನು ತಿರುಚುವ ಕೆಲಸವೂ ನಡೆಯುತ್ತಲೇ ಇದೆ. ಅಂತಹವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಲಿಂಗಾಯತ ಧರ್ಮ ಕಟ್ಟಿಕೊಡುವ ಗ್ರಂಥ ರಚನೆಯಾಗಲಿ:
ಕುಂದೂರು ಮಠದ ಡಾ.ಶರತ್ಚಂದ್ರ ಸ್ವಾಮೀಜಿ, ಸಂಶೋಧನೆ ಎಂದರೆ ಕಾಲವನ್ನು ಕಟ್ಟುವುದಾಗಿದೆ. ಅದೊಂದು ಜವಾಬ್ದಾರಿ ಕ್ರಿಯೆ ಆಗಿದೆ. ಆದರೆ, ಇಲ್ಲಿ ಒಡೆಯುವ ಕೆಲಸ ನಡೆದಿದೆ. ವರ್ತಮಾನದ ಸಮಸ್ಯೆಗಳನ್ನು ಹೆಚ್ಚಿಸುವ ಕೆಲಸ ಆಗಿದೆ. ಈ ರೀತಿಯ ಸಮಸ್ಯೆಗಳು ಮುಂದೆಯೂ ಪುನರಾವರ್ತನೆ ಆಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಅನುಭವ ಮಂಟಪ ಲೋಕಾರ್ಪಣೆ ವೇಳೆ ಲಿಂಗಾಯತ ಧರ್ಮದ ಪರಂಪರೆ ಮತ್ತು ಇತಿಹಾಸ ಕಟ್ಟಿಕೊಡುವ ಗ್ರಂಥಗಳ ರಚನೆ ಆಗಬೇಕು. ಅದು ಒಂದೊಂದು ಶತಮಾನಕ್ಕೆ ಒಂದೊಂದು ಗ್ರಂಥ ರೂಪಿಸಬೇಕು’ ಎಂದು ತಿಳಿಸಿದರು.
ಬೇಲಿಮಠದ ಶಿವರುದ್ರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಗದಗಿನ ತೋಂಟದಾರ್ಯ ಸಂಸ್ಥಾನದ ಸಿದ್ಧರಾಮ ಸ್ವಾಮೀಜಿ, ಬಸವ ಧರ್ಮಪೀಠದ ಮಾತಾ ಗಂಗಾದೇವಿ, ಚಿತ್ರದುರ್ಗದ ಮುರುಘರಾಜೇಂದ್ರ ವಿದ್ಯಾಪೀಠದ ಬಸವಕುಮಾರ ಸ್ವಾಮೀಜಿ, ಪವಾಡ ಬಸವಣ್ಣ ದೇವರಮಠದ ಸಿದ್ಧಲಿಂಗ ಸ್ವಾಮೀಜಿ, ಕುಣಿಗಲ್ನ ಬೆಟ್ಟದಹಳ್ಳಿಯ ಗವಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಚಿಂತಕರಾದ ಡಾ.ರಾಜಾಸಾಬ್, ಡಾ.ಜಾಣಗೆರೆ ವೆಂಕಟರಾಮಯ್ಯ, ಡಾ.ಬಸವರಾಜ ಸಾದರ, ರವಿಕೃಷ್ಣಾ ರೆಡ್ಡಿ, ನವೀನ ಬಿಡದಿ ಮತ್ತಿತರರು ಉಪಸ್ಥಿತರಿದ್ದರು.
ಬಸವಣ್ಣಗೆ ಅಲ್ಲ, ಇಡೀ ನಾಡಿಗೇ ಅವಮಾನ
ಇಡೀ ಮನುಕುಲವೇ ಪ್ರೀತಿಸುವ ವ್ಯಕ್ತಿತ್ವ ಅಂದರೆ ಅದು ಬಸವಣ್ಣ. ಅವರ ವಿಚಾರಗಳು ಎಂದೆಂದಿಗೂ ಬೇಕಾಗುವಂಥವು. ಅಂತಹ ವಿಶ್ವುಗುರುವಿಗೆ ಆದ ಅವಮಾನ ಕನ್ನಡ, ಕನ್ನಡ ನಾಡು ಹಾಗೂ ನಮಗೆಲ್ಲರಿಗೂ ಆದ ಅವಮಾನ.
- ಸಿದ್ಧಲಿಂಗ ಶ್ರೀ, ಸಿದ್ಧಗಂಗಾ ಮಠ
ಮಹಾತ್ಮರ ಬಗ್ಗೆ ಲಘು ಅಭಿಪ್ರಾಯ ಸರಿಯಲ್ಲ: ಸುತ್ತೂರು ಶ್ರೀ ಅತೃಪ್ತಿ
ಮೈಸೂರು: ಈ ನಾಡಿನಲ್ಲಿ ಸಾಧು- ಸಂತರು, ಶರಣರು, ದಾಸರು- ಹೀಗೆ ಮಹಾತ್ಮರ ದೊಡ್ಡ ಪರಂಪರೆಯೇ ಇದೆ. ಪ್ರತಿಯೊಬ್ಬರ ಸಾಧನೆ, ಸಿದ್ಧಿ, ಕೊಡುಗೆಗಳು ಅಪಾರವಾದುವು. ಇಂತಹ ಮಹಾತ್ಮರ ಸಾಲಿನಲ್ಲಿ ಜಗಜ್ಯೋತಿ ಬಸವೇಶ್ವರರು ಪ್ರಮುಖರಲ್ಲಿ ಒಬ್ಬರು. ಮಹಾತ್ಮರ ಕುರಿತು ಲಘುವಾದ ಅಭಿಪ್ರಾಯ ಸೂಕ್ತವಲ್ಲ ಎಂದು ಸುತ್ತೂರು ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಲೇಖಕ ರವಿ ಹಂಜ್ಗೆ ನಿರೀಕ್ಷಣಾ ಜಾಮೀನು
ಬೆಂಗಳೂರು: ವಿವಾದಿತ ‘ಬಸವ ಮಂಟಪ’ ಪುಸ್ತಕದ ಲೇಖಕ ರವಿ ಹಂಜಗಿಮಠ (ರವಿ ಹಂಜ್) ಹಾಗೂ ಪುಸ್ತಕದ ಪ್ರಕಾಶಕರಾದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಗೆ ನಗರದ ಸೆಷನ್ಸ್ ನ್ಯಾಯಾಲಯ ಬುಧವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.