ಪಹಲ್ಗಾಂ ಘಟನೆಗೆ ಕೇಂದ್ರದ ವೈಫಲ್ಯವೇ ಕಾರಣ : ಲಾಡ್

ಸಾರಾಂಶ

ಪಹಲ್ಗಾಂ ಘಟನೆಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಹಿಂದೂ-ಮುಸ್ಲಿಂ ವಿಷಯ ಚರ್ಚೆಗೆ ತರಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಖಂಡನೀಯ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

ಬೆಂಗಳೂರು : ಪಹಲ್ಗಾಂ ಘಟನೆಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಹಿಂದೂ-ಮುಸ್ಲಿಂ ವಿಷಯ ಚರ್ಚೆಗೆ ತರಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಖಂಡನೀಯ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರು ಘಟನಾ ಸ್ಥಳಕ್ಕೆ ನುಗ್ಗಿದ್ದು ಹೇಗೆ? ಅವರಿಗೆ ಬಂದೂಕು ಹೇಗೆ ಸಿಕ್ಕಿತು. ಭದ್ರತಾ ವೈಫಲ್ಯ ಆಗಿದ್ದು ಹೇಗೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕಾಗಿತ್ತು. ಈ ವಿಚಾರ ಮಾಧ್ಯಮಗಳು ಹಾಗೂ ದೇಶದಲ್ಲಿ ಚರ್ಚೆಯಾಗಬೇಕಾಗಿತ್ತು ಎಂದು ಹೇಳಿದರು.

ಪಹಲ್ಗಾಂನಲ್ಲಿ ಅಲ್ಲಿನ ಮಹಿಳೆಯೊಬ್ಬರು ಕೇಂದ್ರ ಸಚಿವ ಅಮಿತ್‌ ಶಾ ಅವರನ್ನೇ ಪ್ರಶ್ನೆ ಮಾಡುತ್ತಿದ್ದರು. ಇಲ್ಲಿ ನಾವು 2,000 ಮಂದಿ ಇದ್ದೇವೆ. ಆದರೂ ಒಬ್ಬರೂ ಸೈನಿಕರು, ವಾಚ್‌ಮೆನ್‌ ಸಹ ಇಲ್ಲಿ ಇರಲಿಲ್ಲ ಯಾಕೆ ಎಂದು ಕೇಳುತ್ತಿದ್ದರು. ಅದರ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿಲ್ಲ. ಶ್ರೀನಗರದಲ್ಲೇ 7 ಲಕ್ಷಕ್ಕೂ ಹೆಚ್ಚು ಸೈನಿಕ ಸಿಬ್ಬಂದಿ ಇದ್ದರೂ ಪಹಲ್ಗಾಂನಲ್ಲಿ ಒಬ್ಬರೂ ಇರಲಿಲ್ಲ ಯಾಕೆ? ಈ ಬಗ್ಗೆ ಚರ್ಚೆ ಆಗಬಾರದೇ ಎಂದು ಪ್ರಶ್ನಿಸಿದರು.

ನಾನು ರಾಜಕೀಯ ಮಾತನಾಡುತ್ತಿಲ್ಲ. ಆದರೆ ಮಾಧ್ಯಮಗಳಲ್ಲಿ ಭದ್ರತಾ ವೈಫಲ್ಯದ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ಹಿಂದೂಗಳ ಹತ್ಯೆ ಎಂದು ಹೇಳುತ್ತಿದ್ದಾರೆ. ಈ ಹಿಂದೂಗಳ ಹತ್ಯೆ ಆಗಲು ಬಿಟ್ಟವರು ಅದರ ಹೊಣೆ ಹೊರಬೇಕಲ್ಲವೇ? ಸ್ಟುಡಿಯೋ ಮೂಲಕ ದೇಶಾದ್ಯಂತ ದ್ವೇಷದ ವಾತಾವರಣ ನಿರ್ಮಿಸಲು ಹೊರಟಿರುವುದು ಯಾಕೆ ಎಂದು ಪ್ರಶ್ನಿಸಿದರು.

ಘಟನೆ ಬಳಿಕ ಅಲ್ಲಿನವರನ್ನು ರಕ್ಷಿಸಿದ್ದು ಸ್ಥಳೀಯ ಮುಸ್ಲಿಮರಲ್ಲವೇ? ಅಲ್ಲಿನ ಸ್ಥಳೀಯ ಜನರು ನಿಜಕ್ಕೂ ಶ್ಲಾಘನೆಗೆ ಅರ್ಹರು. ಅಲ್ಲಿನ ಜನ ಘಟನೆಯ ಬಳಿಕ ರಕ್ತ ಕಣ್ಣೀರು ಸುರಿಸುತ್ತಿದ್ದಾರೆ. ಘಟನೆ ನಡೆದು ಎರಡು ದಿನಗಳಾಗಿಲ್ಲ. ಆಗಲೇ ಮೋದಿ ಅವರು ಬಿಹಾರದಲ್ಲಿ ಚುನಾವಣಾ ಭಾಷಣ ಮಾಡಲು ಹೊರಟಿದ್ದಾರೆ. ಅವರು ಜಮ್ಮು ಕಾಶ್ಮೀರಕ್ಕೆ ಯಾಕೆ ಹೋಗಲಿಲ್ಲ. ಈ ಬಗ್ಗೆ ಭಾರತೀಯರು ಪ್ರಶ್ನೆ ಮಾಡಬೇಕು. ಅವರ ರಾಜೀನಾಮೆ ಕೇಳಬೇಕು ಎಂದು ಆಗ್ರಹಿಸಿದರು.

Share this article