ಬೆಂಗಳೂರು : ಮಗು ಆಟವಾಡುವಾಗ ಎದುರು ಮನೆಯ ಬಕೆಟ್ ನೀರು ಮುಟ್ಟಿದ ವಿಚಾರಕ್ಕೆ ಮಗುವಿನ ಪೋಷಕರೊಂದಿಗೆ ಜಗಳ ತೆಗೆದು ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪದಡಿ ಎದುರು ಮನೆಯ ಮಹಿಳೆ, ಆಕೆಯ ಪುತ್ರ ಹಾಗೂ ಸಹಚರರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಹಳ್ಳಿ ವಿದ್ಯಮಾನ್ಯ ನಗರ 3ನೇ ಕ್ರಾಸ್‌ನಲ್ಲಿ ಆ.14ರಂದು ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ. ಸೌಮ್ಯ ಮತ್ತು ಆಕೆಯ ಪತಿ ಗಂಗಾಧರ ಹಲ್ಲೆಗೊಳಗಾದವರು. ಹಲ್ಲೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಘಟನೆ ಸಂಬಂಧ ಗಾಯಾಳು ಸೌಮ್ಯ ನೀಡಿದ ದೂರಿನ ಮೇರೆಗೆ ಎದುರು ಮನೆಯ ರಾಜೇಶ್ವರಿ, ಆಕೆಯ ಪುತ್ರ ಹಾಗೂ ಸಹಚರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಘಟನೆ ವಿವರ:
ಸೌಮ್ಯ ಹಾಗೂ ಗಂಗಾಧರ್ ದಂಪತಿಗೆ 8 ಮತ್ತು 6 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಸೌಮ್ಯ ಮನೆಯಲ್ಲೇ ಟೈಲರಿಂಗ್ ಕೆಲಸ ಮಾಡಿದರೆ, ಗಂಗಾಧರ್ ಆಟೋ ಚಾಲನೆ ಮಾಡುತ್ತಾರೆ. ಆ.14ರಂದು ಮಧ್ಯಾಹ್ನ 2 ಗಂಟೆಗೆ ಸೌಮ್ಯ ಅವರ 2ನೇ ಮಗ ಆಟವಾಡುವಾಗ ಎದುರು ಮನೆಯ ರಾಜೇಶ್ವರಿ ಅವರ ಮನೆ ಮುಂದೆ ಇರಿಸಿದ್ದ ಬಕೆಟ್ ನೀರನ್ನು ಮುಟ್ಟಿದ್ದಾನೆ. ಈ ವೇಳೆ ರಾಜೇಶ್ವರಿ ಆ ಮಗುವನ್ನು ಬೈಯ್ದಿದ್ದಾರೆ. ಇದನ್ನು ಕೇಳಿಸಿಕೊಂಡು ಸೌಮ್ಯ ಮತ್ತು ಗಂಗಾಧರ್, ಗೊತ್ತಾಗದೆ ಮಗು ನೀರು ಮುಟ್ಟಿದೆ ಎಂದಿದ್ದಾರೆ. ಬಳಿಕ ರಾತ್ರಿ 9.30ಕ್ಕೆ ರಾಜೇಶ್ವರಿ, ಆಕೆಯ ಪುತ್ರ ಹಾಗೂ ಸಹಚರರು ಬಂದು ಗಂಗಾಧರ್ ಅವರನ್ನು ಆವಾಚ್ಯ ಶಬ್ಧಗಳಿಂದ ನಿಂದಿಸಿ, ಕೊರಳಪಟ್ಟಿ ಹಿಡಿದು ರಸ್ತೆಗೆ ಎಳೆದೊಯ್ದು ತಂದು ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟ್‌ನಿಂದ ಹಲ್ಲೆ ಮಾಡಿದ್ದು, ಜಗಳ ಬಿಡಿಸಲು ಮುಂದಾದ ಸೌಮ್ಯ ಮೇಲೆಯೂ ಸಹಚರರು ಹಲ್ಲೆ ಮಾಡಿದ್ದಾರೆ. ಬಳಿಕ ಸೌಮ್ಯ ಅವರ ಮನೆಯ ಕಿಟಕಿ ಗ್ಲಾಸ್‌ಗಳನ್ನು ಒಡೆದು ಹಾಕಿ ದಾಂಧಲೆ ನಡೆಸಿದ್ದಾರೆ.
ಜೀವ ಬೆದರಿಕೆ:
ಜಗಳದ ವಿಚಾರ ತಿಳಿದು ಸೌಮ್ಯ ಅವರ ಅಕ್ಕ ಸುಮಿತ್ರಾ ಅವರು ಮನೆ ಬಳಿ ಬಂದಾಗ, ಆಕೆಯನ್ನು ರಾಜೇಶ್ವರಿ ಹಾಗೂ ಆಕೆಯ ಪುತ್ರ ನಿಂದಿಸಿದ್ದಾರೆ. ನಮ್ಮ ಸಹವಾಸಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸೌಮ್ಯ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.