ಮನೆ ಹೊರಗಿನ ರಸ್ತೇಲಿ ಕಾರು ನಿಲ್ಲಿಸಿದರೆ ಇನ್ನು ವರ್ಷಕ್ಕೆ ₹25000 ಶುಲ್ಕ!

Published : Aug 14, 2026, 04:44 AM IST
Car parking mistakes

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಮನೆ ಹೊರಗಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ಮಾಲೀಕರಿಗೆ ಶಾಕ್‌ ನೀಡಲು ಜಿಬಿಎ ಸಜ್ಜಾಗಿದೆ. ಮನೆಯಿಂದ ಹೊರಗೆ ರಸ್ತೆಗಳಲ್ಲಿ ಕಾರು ನಿಲುಗಡೆ ಮಾಡುವ ನಿವಾಸಿಗಳ ಮೇಲೆ ವಾರ್ಷಿಕ ಕನಿಷ್ಠ 15 ಸಾವಿರದಿಂದ 25 ಸಾವಿರ ರು. ವರೆಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಹೊರಟಿದೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮನೆ ಹೊರಗಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ಮಾಲೀಕರಿಗೆ ಶಾಕ್‌ ನೀಡಲು ಜಿಬಿಎ ಸಜ್ಜಾಗಿದೆ. ಮನೆಯಿಂದ ಹೊರಗೆ ರಸ್ತೆಗಳಲ್ಲಿ ಕಾರು ನಿಲುಗಡೆ ಮಾಡುವ ನಿವಾಸಿಗಳ ಮೇಲೆ ವಾರ್ಷಿಕ ಕನಿಷ್ಠ 15 ಸಾವಿರದಿಂದ 25 ಸಾವಿರ ರು. ವರೆಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಹೊರಟಿದೆ. ಇದಕ್ಕಾಗಿ ವಾಹನ ಮಾಲೀಕರಿಗೆ ಒಂದು ವರ್ಷ ಕಾಲಾವಧಿಯ ಮಾಸಿಕ ಪಾಸ್‌ಗಳನ್ನೂ ವಿತರಿಸಲು ಚಿಂತನೆ ನಡೆಸಿದೆ.

ನಗರದ ಪಾರ್ಕಿಂಗ್‌ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿಗೆ ತರಲುದ್ದೇಶಿಸಿರುವ ಹೊಸ ಪಾರ್ಕಿಂಗ್‌ ನೀತಿಯ ಕರಡು ಪ್ರಸ್ತಾವನೆಯನ್ನು ಜಿಬಿಎ ಪ್ರಕಟಿಸಿದ್ದು, ಒಂದು ತಿಂಗಳಲ್ಲಿ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹೇಗೆ ನಿಗದಿ?:

ನಗರದ ರಸ್ತೆಗಳನ್ನು ಎ, ಬಿ ಮತ್ತು ಸಿ ವರ್ಗಗಳಾಗಿ ವಿಂಗಡಿಸಿ, ಆನ್‌ಸ್ಟ್ರೀಟ್ (ರಸ್ತೆ ಮೇಲೆ) ಹಾಗೂ ಆಫ್‌ಸ್ಟ್ರೀಟ್ ಪಾರ್ಕಿಂಗ್‌ಗೆ (ರಸ್ತೆ ಅಲ್ಲದ ಸ್ಥಳ) ಪ್ರತ್ಯೇಕ ಶುಲ್ಕ ನಿಗದಿಪಡಿಸಲು ಉದ್ದೇಶಿಸಲಾಗಿದೆ.

ಹೊಸ ನೀತಿ ಪ್ರಕಾರ, ಆನ್‌ಸ್ಟ್ರೀಟ್ ಪಾರ್ಕಿಂಗ್‌ಗೆ ಸಿ ವರ್ಗದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ 20 ರು. ಹಾಗೂ ಕಾರಿನಂತಹ ಲಘು ವಾಹನಗಳಿಗೆ 40 ರು., ಬಿ ವರ್ಗದ ರಸ್ತೆಯಲ್ಲಿ ಕ್ರಮವಾಗಿ 30 ರು. ಮತ್ತು 60 ರು., ಎ ವರ್ಗದ ರಸ್ತೆಯಲ್ಲಿ 40 ರು. ಮತ್ತು 80 ರು. ಶುಲ್ಕ ವಿಧಿಸುವ ಪ್ರಸ್ತಾವನೆ ಇದೆ.

ಆಫ್‌ಸ್ಟ್ರೀಟ್ ಪಾರ್ಕಿಂಗ್‌ಗೆ ಸಿ ವರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ 10 ರು. ಹಾಗೂ ಲಘು ವಾಹನಗಳಿಗೆ 20 ರು., ಬಿ ವರ್ಗದಲ್ಲಿ 15 ರು. ಮತ್ತು 30 ರು., ಎ ವರ್ಗದಲ್ಲಿ 20 ರು. ಮತ್ತು 40 ರು. ಶುಲ್ಕ ನಿಗದಿಪಡಿಸಲು ಉದ್ದೇಶಿಸಲಾಗಿದೆ.

ಮಾಸಿಕ 2-3 ಸಾವಿರ ಶುಲ್ಕ:

ಆಫ್‌ಸ್ಟ್ರೀಟ್ ಪಾರ್ಕಿಂಗ್ ಬಳಸುವವರಿಗೆ ಮಾಸಿಕ ಪಾಸ್ ವ್ಯವಸ್ಥೆ ಪರಿಚಯಿಸಲು ಉದ್ದೇಶಿಸಲಾಗಿದೆ. ಸಿ ವರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ 1,000 ರು. ಹಾಗೂ ಲಘು ವಾಹನಗಳಿಗೆ 2,000 ರು., ಬಿ ವರ್ಗದಲ್ಲಿ 1,500ರು. ಹಾಗೂ 3,000 ರು., ಎ ವರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ 2,000 ರು. ಮಾಸಿಕ ಪಾಸ್ ದರ ನಿಗದಿಪಡಿಸುವ ಪ್ರಸ್ತಾವನೆ ಇದೆ.

ಪಾರ್ಕಿಂಗ್‌ಗೆ ಸಂಪೂರ್ಣ ನಿಷೇಧ:

ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಸುತ್ತಮುತ್ತ, ಆರ್ಟಿರಿಯಲ್ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ. ಸಿಗ್ನಲ್‌ನಿಂದ 50 ಮೀಟರ್ ವ್ಯಾಪ್ತಿಯಲ್ಲಿ ಹಾಗೂ ಉಪಮುಖ್ಯ ರಸ್ತೆಗಳಲ್ಲಿ 25 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.

ಮನೆ ಮುಂದೆ ವಾಹನ ನಿಲ್ಲಿಸುವುದು ಹಕ್ಕಲ್ಲ

ಮನೆಗಳ ಮುಂದೆ ವಾಹನ ನಿಲುಗಡೆ ಮಾಡುವ ವಿಚಾರದಲ್ಲೂ ಜಿಬಿಎ ಹೊಸ ನಿಯಮ ತರಲು ಉದ್ದೇಶಿಸಿದೆ. ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ ವಾಹನ ನಿಲ್ಲಿಸಲು ಸೂಕ್ತ ಸ್ಥಳ ಒದಗಿಸಬೇಕು. ಜಾಗ ಕಲ್ಪಿಸದೆ ರಸ್ತೆಯಲ್ಲಿ ವಾಹನ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾದರೆ ದಂಡ ವಿಧಿಸುವ ಪ್ರಸ್ತಾವನೆ ಇದೆ. ಅಂದರೆ ಮನೆಯ ಮುಂದೆ ನಮ್ಮ ಕಾರು ನಿಲ್ಲಿಸಬಹುದು ಎಂದು ಈವರೆಗೆ ಮನೆಮಾಲೀಕರು ಸಾಧಿಸಿಕೊಂಡು ಬಂದಿದ್ದ ಹಕ್ಕು ಇನ್ನು ಇಲ್ಲವಾಗುತ್ತದೆ. ಒಂದು ವೇಳೆ ಮನೆಯ ಕಾಂಪೌಂಡ್‌ನ ಒಳಗೆ ಕಾರು ನಿಲ್ಲಿಸಲು ಅವಕಾಶ ಇಲ್ಲದಿದ್ದರೆ ಕಾರು ಮಾಲೀಕರು ಅವರಿಗೆ ಅನುಮತಿಸಿದ ಜಾಗದಲ್ಲಷ್ಟೇ ಕಾರು ನಿಲ್ಲಿಸಬೇಕು. ಒಂದು ಮನೆ ಮುಂದೆ ಕಾರು ನಿಲ್ಲಿಸಿದರೆ ದಂಡ ವಿಧಿಸಲಾಗುತ್ತದೆ.

ಖಾಲಿ ನಿವೇಶನದಲ್ಲಿ ಪಾರ್ಕಿಂಗ್‌ಗೆ ತೆರಿಗೆ ವಿನಾಯ್ತಿ:

ನಗರದ ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ಅಭಿವೃದ್ಧಿಪಡಿಸಲು ಜಿಬಿಎ ಪ್ರೋತ್ಸಾಹ ನೀಡಲಿದೆ. ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಪ್ರಸ್ತಾವನೆಯೂ ಇದೆ. ಸರ್ಕಾರಿ ನಿಗಮಗಳ ವ್ಯಾಪ್ತಿಯ ಖಾಲಿ ಜಾಗಗಳನ್ನೂ ಪಾರ್ಕಿಂಗ್‌ಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಸಂಬಂಧಪಟ್ಟ ನಿಗಮಗಳಿಂದ ಅನುಮತಿ ಪಡೆದು ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಉದ್ದೇಶಿಸಲಾಗಿದೆ.

ರಾತ್ರಿ ಪಾರ್ಕಿಂಗ್‌ಗೆ ಅವಕಾಶ:

ಆಫ್‌ಸ್ಟ್ರೀಟ್ ಪಾರ್ಕಿಂಗ್ ಸ್ಥಳಗಳಲ್ಲಿ ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ನಿಯಮಿತವಾಗಿ ವಾಹನ ನಿಲ್ಲಿಸುವವರಿಗೆ ಮಾಸಿಕ ಪಾಸ್ ಪಡೆಯುವ ಅವಕಾಶವೂ ಇರಲಿದೆ. ಬೈಸಿಕಲ್‌ಗಳ ನಿಲುಗಡೆಗೆ ಶುಲ್ಕ ವಿಧಿಸದಿರಲು ಹಾಗೂ ಆಟೋ ನಿಲ್ದಾಣಗಳಿಗೆ ಪಾರ್ಕಿಂಗ್ ಶುಲ್ಕ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.

ಒಟ್ಟಾರೆ ಅಕ್ರಮ ಪಾರ್ಕಿಂಗ್‌ಗೆ ಕಡಿವಾಣ ಹಾಕುವುದು ಹಾಗೂ ಪಾರ್ಕಿಂಗ್ ವ್ಯವಸ್ಥೆ ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಜಿಬಿಎ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಮುಂದಾಗಿದೆ. ನೀತಿ ಜಾರಿಯಾದ ಬಳಿಕ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವ ವಾಹನ ಸವಾರರ ಜೇಬಿಗೆ ಪಾರ್ಕಿಂಗ್ ಶುಲ್ಕದ ಹೊರೆ ಬೀಳಲಿದೆ.

ಸಣ್ಣ ಕಾರುಗಳಿಗೆ 15 ಸಾವಿರ ರು.

ಕರಡು ನೀತಿ ಪ್ರಕಾರ ವಸತಿ ರಸ್ತೆಗಳಲ್ಲಿ ಸಣ್ಣ ಕಾರುಗಳಿಗೆ 15 ಸಾವಿರ ರು. ಮತ್ತು ಮಧ್ಯಮಗಾತ್ರದ ಕಾರುಗಳಿಗೆ 20 ಸಾವಿರ ಹಾಗೂ ಎಸ್‌ಯುವಿಗಳಿಗೆ ವಾರ್ಷಿಕ 25 ಸಾವಿರ ರು. ವರೆಗಿನ ಶುಲ್ಕದ ಪಾಸ್‌ ವಿತರಿಸಲು ಉದ್ದೇಶಿಸಲಾಗಿದೆ.

ಈ ಪಾರ್ಕಿಂಗ್‌ ಸೌಲಭ್ಯ ಮನೆಯಿಂದ ನಡೆದುಕೊಂಡೇ ಹೋಗುವಷ್ಟು ದೂರದ ವಸತಿ ಪಾರ್ಕಿಂಗ್‌ಗೆ ನಿಗದಿಪಡಿಸಿದ ರಸ್ತೆಗಳಿಗೆ ಮಾತ್ರ ಅನ್ವಯ. ಅನುಮತಿ ನೀಡಲಾದ ಪ್ರದೇಶಕ್ಕಿಂತ ಹೊರಗೆ ಪಾರ್ಕಿಂಗ್‌ ಮಾಡಿದರೆ ಅದನ್ನು ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ.

ಯಾವ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಅ‍ವಕಾಶ?

ವಸತಿ ಪಾರ್ಕಿಂಗ್‌ಗೆ ಯಾವ ರಸ್ತೆಗಳಲ್ಲಿ ಅವಕಾಶ ನೀಡಬಹುದು ಎಂಬ ಕುರಿತೂ ನಿಯಮದಲ್ಲಿ ವಿವರಣೆ ನೀಡಲಾಗಿದೆ. ಕನಿಷ್ಠ ಆರು ಮೀಟರ್‌ನಷ್ಟು ಜಾಗವು ವಾಹನಗಳ ಓಡಾಟಕ್ಕೆ ಅ‍ವಕಾಶ ಇರುವ ರಸ್ತೆಗಳು ಮತ್ತು ನಡೆದಾಡಲು ಎರಡೂ ಕಡೆ 1.8 ಮೀಟರ್‌ನಷ್ಟು ಜಾಗ ಇರುವ ರಸ್ತೆಗಳಲ್ಲಿ ಮಾತ್ರ ಅವಕಾಶ ನೀಡಲಾಗುತ್ತದೆ.

ಇನ್ನು ಲೋಕಲ್‌ ರಸ್ತೆಗಳಲ್ಲಿ ಕನಿಷ್ಠ 4 ಮೀಟರ್‌ನಷ್ಟು ಜಾಗ ವಾಹನಗಳ ಓಡಾಟಕ್ಕೆ ಮೀಸಲಿರಬೇಕು, ಜನ ಓಡಾಡಲು ಕನಿಷ್ಠ ಒಂದು ಕಡೆಯಾದರೂ 1.8 ಮೀಟರ್‌ನಷ್ಟು ಜಾಗ ಇರುವುದು ಕಡ್ಡಾಯ.

ಮಾರ್ಷಲ್‌ಗಳಿಂದ ಅನುಮತಿ ಬಗ್ಗೆ ನಿರ್ಧಾರ

ಪಾಲಿಕೆಯಿಂದ ನಿಯೋಜಿತ ಮಾರ್ಷಲ್‌ಗಳು ಅಥವಾ ಇದಕ್ಕೆಂದೇ ನೇಮಿಸಲ್ಪಟ್ಟ ಅಧಿಕಾರಿಗಳು ವಸತಿ ಪ್ರದೇಶದ ರಸ್ತೆಗಳ ಪಾರ್ಕಿಂಗ್‌ ಪರ್ಮಿಟ್‌ ಅನ್ನು ಗುರುತಿಸುತ್ತಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.

ವರ್ಗೀಕರಣ ಆನ್‌ಸ್ಟ್ರೀಟ್‌ ಪಾರ್ಕಿಂಗ್ ಕನಿಷ್ಠಶುಲ್ಕ (ಗಂಟೆಗೆ) ಆಫ್‌ಸ್ಟ್ರೀಟ್‌ ಪಾರ್ಕಿಂಗ್‌ ಕನಿಷ್ಠ ಶುಲ್ಕ (ಗಂಟೆಗೆ) ಕನಿಷ್ಠ ಆಫ್‌ಸ್ಟ್ರೀಟ್‌ ಪಾಕಿಂಗ್‌ ಫೀ (ತಿಂಗಳಿಗೆ)

ಸಿ 20 40 10 20 1000 2000

ಬಿ 30 60 15 30 1500 3000

ಎ 40 80 20 40 2000 4000

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರೇಣುಕಾಸ್ವಾಮಿ ತಾಯಿಯ ಪಾಟಿ ಸವಾಲಿಗೆ ಪ್ರಾಸಿಕ್ಯೂಷನ್‌ ಮನವಿ
ಹೆಬ್ಬಾಳ ಫ್ಲೈಓವರ್ ನಿಂದ ಸಿಬಿಐ ಜಂಕ್ಷನ್‌ಗಳಲ್ಲಿದ್ದ ಅಂಗಡಿ ಎತ್ತಂಗಡಿ