ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಏರ್ಪಡಿಸಿದ್ದ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರಾಯಚೂರು ಜಿಲ್ಲೆ ಸಿರವಾರ ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್‌ಕುಮಾರ್ ಕೆ.ಪಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಅಮಾನತು ಮಾಡಿದೆ.
ಪ್ರವೀಣ್ ಕುಮಾರ್ ಅವರು ಪ್ರಸ್ತುತ ಲಿಂಗಸುಗೂರು ಕ್ಷೇತ್ರದ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ಆಪ್ತ ಸಹಾಯಕರಾಗಿ ನಿಯೋಜನೆ ಮೇಲೆ ಕರ್ತವ್ಯ ಮಾಡುತ್ತಿದ್ದರು.
ಕರ್ನಾಟಕ ಸಿವಿಲ್ ಸೇವಾ(ನಡತೆ) ನಿಯಮಗಳನ್ನು ಉಲ್ಲಂಘಿಸಿರುವುದು ಹಾಗೂ ಒಬ್ಬ ಸರ್ಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಪ್ರವೀಣ್ ಕುಮಾರ್ ಅವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಮುಂದಿನ ಆದೇಶದವರೆಗೆ ಅಮಾನತುಗೊಳಿಸಿ ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಆದೇಶಿಸಿದ್ದಾರೆ.
ಪ್ರವೀಣ್ ಕುಮಾರ್ ಅ.12ರಂದು ಲಿಂಗಸುಗೂರು ಪಟ್ಟಣದಲ್ಲಿ ಏರ್ಪಡಿಸಿದ್ದ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಂಘದ ಸಮವಸ್ತ್ರ ಧರಿಸಿ ಪಥಸಂಚಲನದಲ್ಲಿ ಭಾಗವಹಿಸಿದ್ದರು.