ಪೀಣ್ಯ ಮೇಲ್ಸೇತುವೆ ಸಂಚಾರಕ್ಕೆ ಅಡ್ಡಿ : ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರ ಅಸಮಾಧಾನ

ಸಾರಾಂಶ

ಪೀಣ್ಯ ಮೇಲ್ಸೇತುವೆ ಮೇಲೆ ‘ಪೀಕ್‌ ಅವರ್‌’ನಲ್ಲಿ ಸಂಚರಿಸಲು ಸಂಚಾರ ಪೊಲೀಸರು ಅವಕಾಶ ನೀಡದಿರುವುದಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದ ಹಲವು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು : ಪೀಣ್ಯ ಮೇಲ್ಸೇತುವೆ ಮೇಲೆ ‘ಪೀಕ್‌ ಅವರ್‌’ನಲ್ಲಿ ಸಂಚರಿಸಲು ಸಂಚಾರ ಪೊಲೀಸರು ಅವಕಾಶ ನೀಡದಿರುವುದಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದ ಹಲವು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯ ತುಮಕೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಪಾರ್ಲೇಜಿ ಫ್ಯಾಕ್ಟರಿಯಿಂದ ಪೀಣ್ಯ ಮೇಲ್ಸೇತುವೆ ಮೇಲೆ ಸಂಚರಿಸಬೇಕು. ಆದರೆ, ಸೋಮವಾರ ಬೆಳಗ್ಗೆ ಮತ್ತು ಸಂಜೆ ಮೇಲ್ಸೇತುವೆ ಮೇಲೆ ಸಂಚರಿಸಲು ಸಂಚಾರ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಬೆಳಗ್ಗೆ ಕಚೇರಿ ಕೆಲಸಕ್ಕೆ ತೆರಳುವವರು, ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಯಿತು ಎಂದು ಕೆಲ ಚಾಲಕರು ‘ಪತ್ರಿಕೆ’ಯೊಂದಿಗೆ ಅಳಲು ತೋಡಿಕೊಡಿದ್ದಾರೆ.

ಆದರೆ, ಸಂಚಾರ ಪೊಲೀಸರು ಹೇಳುವುದೇನೆಂದರೆ, ‘ಪೀಕ್‌ ಅವರ್‌’ನಲ್ಲಿ ತುಮಕೂರು ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಎಲ್ಲ ವಾಹನಗಳಿಗೂ ಮೇಲ್ಸೇತುವೆ ಮೇಲೆ ಅವಕಾಶ ನೀಡಿದರೆ, ಮೇಲ್ಸೇತುವೆ ಅಂತ್ಯವಾಗುವ ಗೊರಗುಂಟೆ ಪಾಳ್ಯ ಜಂಕ್ಷನ್‌ನಲ್ಲಿ ಒಮ್ಮೆಲೇ ವಾಹನಗಳ ಸಂಖ್ಯೆ ಹೆಚ್ಚಾಗಿ ಕಿಲೋ ಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡುತ್ತಾರೆ.

ಹೆಚ್ಚುವರಿ ರಸ್ತೆ ವಿಭಜಕದಿಂದ ಪರಿಹಾರ

ಗೊರಗುಂಟೆ ಪಾಳ್ಯ ಜಂಕ್ಷನ್‌ಗೆ ಮೇಲ್ಸೇತುವೆ ಮೇಲಿನಿಂದ ಬಂದಂತಹ ವಾಹನಗಳು ಸರಾಗವಾಗಿ ಸಂಚರಿಸಲು ಇನ್ನೂ ನಾಲ್ಕೈದು ರಸ್ತೆ ವಿಭಜಕಗಳನ್ನು ಹೆಚ್ಚುವರಿಯಾಗಿ ಅಳವಡಿಸಿದರೆ ಸಮಸ್ಯೆ ಪರಿಹಾರವಾಗಲಿದೆ. 

ಮೇಲ್ಸೇತುವೆ ಇಳಿಯುವ ವಾಹನಗಳು ಬಿಇಎಲ್‌ ಸರ್ಕಲ್‌, ಯಶವಂತಪುರದ ಕಡೆ ಸರಾಗವಾಗಿ ಸಂಚರಿಸಬೇಕೆಂದರೆ ಈಗಾಗಲೇ ಮೆಟ್ರೋ ಪಿಲ್ಲರ್‌ ಕೆಳಗಿರುವ ರಸ್ತೆಯಲ್ಲಿ ಹೆಚ್ಚುವರಿ ರಸ್ತೆ ವಿಭಜಕಗಳನ್ನು ಅಳವಡಿಸಿದರೆ ಕಂಠೀರವ ಸ್ಟುಡಿಯೋ ಕಡೆ ತೆರಳುವವರು ಯಶವಂತಪುರ ಕಡೆ ತೆರಳುವ ರಸ್ತೆಗೆ ಅಡ್ಡಲಾಗಿ ಬಂದು ನಿಂತು ಸಂಚಾರ ದಟ್ಟಣೆ ಉಂಟಾಗುವುದನ್ನು ತಪ್ಪಿಸಬಹುದು.

 ವಾರದ ಹಿಂದೆ ಮೂರ್ನಾಲ್ಕು ರಸ್ತೆ ವಿಭಜಕಗಳನ್ನು ಅಳವಡಿಸಿರುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ಒಂದಷ್ಟು ಸುಧಾರಿಸಿದೆ. ಇನ್ನೂ ನಾಲ್ಕೈದು ರಸ್ತೆ ವಿಭಜಕಗಳನ್ನು ಅಳವಡಿಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹಲವು ವಾಹನ ಸವಾರರು ಅಭಿಪ್ರಾಯಪಟ್ಟಿದ್ದಾರೆ.

Share this article