ಮೆಟ್ರೋ ಪರಿಷ್ಕೃತ ದರ ಹೆಚ್ಚಳ : ಕೇಂದ್ರಕ್ಕೆ ವರದಿ - ಬಿಎಂಆರ್‌ಸಿಎಲ್‌ನಿಂದ ವರದಿ ಸಲ್ಲಿಕೆ

Published : Jan 28, 2025, 05:41 AM IST
metro

ಸಾರಾಂಶ

ಮೆಟ್ರೋ ರೈಲು ಪ್ರಯಾಣ ದರ ಪರಿಷ್ಕರಿಸುವ ಸಂಬಂಧ ಅನುಸರಿಸಿದ ಮಾನದಂಡ, ಅಧ್ಯಯನ ಕುರಿತ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.

 ಬೆಂಗಳೂರು : ಮೆಟ್ರೋ ರೈಲು ಪ್ರಯಾಣ ದರ ಪರಿಷ್ಕರಿಸುವ ಸಂಬಂಧ ಅನುಸರಿಸಿದ ಮಾನದಂಡ, ಅಧ್ಯಯನ ಕುರಿತ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.

ದರ ಪರಿಷ್ಕೃತ ಸಂಬಂಧ ರಚಿಸಲಾಗಿದ್ದ ಸಮಿತಿಯು ಸಲ್ಲಿಸಿದ್ದ ವರದಿಯ ಕುರಿತು ಕಳೆದ ಜ.17ರಂದು ಬಿಎಂಆರ್‌ಸಿಎಲ್‌ ಬೋರ್ಡ್‌ ಸಭೆಯಲ್ಲಿ ಚರ್ಚಿಸಲಾಗಿದೆ. ಸಮಿತಿಯು ಶೇ.40 ಶೇ. 45ರವರೆಗೆ ಹೆಚ್ಚಿಸಲು ಶಿಫಾರಸ್ಸು ಮಾಡಿದೆ. ಸಭೆಯಲ್ಲಿ ಈ ಕುರಿತು ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಈ ನಡುವೆ ದರ ಹೆಚ್ಚಳಕ್ಕೆ ಅನುಸರಿಸಿದ ಮಾನದಂಡ, ಕೈಗೊಂಡ ಅಧ್ಯಯನದ ಬಗ್ಗೆ ಬಿಎಂಆರ್‌ಸಿಎಲ್‌ಗೆ ವರದಿ ನೀಡುವಂತೆ ಕೇಂದ್ರ ಸರ್ಕಾರ ಕೇಳಿತ್ತು. ಅದರಂತೆ ಸಂಸ್ಥೆಯಿಂದ ವರದಿ ಸಲ್ಲಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಮೆಟ್ರೋ ದರ ಹೆಚ್ಚಳದ ಮಾಹಿತಿಯನ್ನೂ ನೀಡುವ ಸಾಧ್ಯತೆಗಳಿವೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.

ಮೆಟ್ರೋದಲ್ಲಿ ಪ್ರತಿದಿನ 8-9ಲಕ್ಷ ಜನ ಸಂಚರಿಸುತ್ತಿದ್ದು, ದರ ಹೆಚ್ಚಳದಿಂದ ಕಾರ್ಮಿಕ, ಸಾಮಾನ್ಯ ವರ್ಗದ ಜನತೆಗೆ ಹೊರೆಯಾಗಲಿದೆ. ಮೆಟ್ರೋ ಸಾರಿಗೆ ವ್ಯವಸ್ಥೆಯಿಂದಲೇ ಜನ ವಿಮುಖರಾಗಬಹುದು. ಹೀಗಾಗಿ ಈಗಿನ ದರವನ್ನು ಮುಂದುವರಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

 ಮೆಟ್ರೋ ದರ ಹೆಚ್ಚಳ ಪ್ರಸ್ತಾವ ವಿರೋಧಿಸಿ ಧರಣಿ 

ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳ ಪ್ರಸ್ತಾವ ವಿರೋಧಿಸಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಕಮ್ಯೂನಿಸ್ಟ್‌ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಎನ್‌.ರವಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ನಿರ್ಮಾಣವಾಗಿರುವ ನಮ್ಮ ಮೆಟ್ರೋ ಖಾಸಗಿ ಕಾರ್ಪೊರೇಟ್‌ ಉದ್ದಿಮೆಯಲ್ಲ. ಇದರಲ್ಲಿ ಲಾಭದ ಲೆಕ್ಕಾಚಾರ ಹಾಕಬಾರದು. ಯಾವುದೇ ಕಾರಣಕ್ಕೂ ದರ ಹೆಚ್ಚಳ ಮಾಡಬಾರದು ಎಂದು ಆಗ್ರಹಿಸಿದರು.

ಸಾರ್ವಜನಿಕರಿಗೆ ಗುಣಮಟ್ಟದ ಮತ್ತು ಕಡಿಮೆ ಬೆಲೆಯಲ್ಲಿ ಸೇವೆಯನ್ನು ನೀಡುವುದು ಮೆಟ್ರೋ ಗುರಿ ಆಗಬೇಕು. ಮೆಟ್ರೋ ರೈಲು ಸೇವೆಗಾಗಿ ಹಲವು ವರ್ಷಗಳಿಂದ ಜನರ ತೆರಿಗೆ ಹಾಕಲಾಗಿದೆ. ಈಗಾಗಲೇ ಬಸ್‌ ಪ್ರಯಾಣ ದರ ಹೆಚ್ಚಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದ್ದರಿಂದ ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಬಾರದು ಎಂದು ಒತ್ತಾಯಿಸಿದರು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 30 ಮಂದಿ ತಂಡ ರಚಿಸಿದ ಸರ್ಕಾರ
ಗ್ರಾಪಂಗಳಲ್ಲಿ 10 ವರ್ಷಗಳಲ್ಲಿ ₹50000 ಕೋಟಿ ಅಕ್ರಮ: ಶಾಸಕ