ಸಂವಿಧಾನ ರಕ್ಷಣೆಗೆ ಹೋರಾಟ ಅನಿವಾರ್ಯ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ

Published : Jan 27, 2025, 10:07 AM IST
Mallikarjun Kharge

ಸಾರಾಂಶ

ದೇಶದ ಸಂವಿಧಾನ ರಕ್ಷಣೆ ಹಾಗೂ ಐಕ್ಯತೆಗೆ ನಾವು ಹೋರಾಟ ಮಾಡಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

 ಬೆಂಗಳೂರು : ಕೇಂದ್ರ ಸರ್ಕಾರವು ಸಂವಿಧಾನದ ಮೌಲ್ಯಗಳನ್ನು ಮೂಲೆಗುಂಪು ಮಾಡಿದ್ದು, ನಾಗರಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ. ಕೇಂದ್ರ ಸಚಿವ ಅಮಿತ್‌ ಶಾರಂತಹ ಪ್ರಮುಖ ನಾಯಕರೇ ಬಹಿರಂಗವಾಗಿ ಸಂವಿಧಾನವನ್ನು ಹೀಯಾಳಿಸುತ್ತಿದ್ದಾರೆ. ಈ ಹಂತದಲ್ಲಿ ದೇಶದ ಸಂವಿಧಾನ ರಕ್ಷಣೆ ಹಾಗೂ ಐಕ್ಯತೆಗೆ ನಾವು ಹೋರಾಟ ಮಾಡಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜತೆ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಅಂಬೇಡ್ಕರ್ ಅವರ ಜನ್ಮಸ್ಥಳದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಸಭೆ ನಡೆಸುತ್ತಿದ್ದು, ನಾನೂ ಅದರಲ್ಲಿ ಭಾಗವಹಿಸುತ್ತಿದ್ದೇನೆ. ಮೋದಿ ಹಾಗೂ ಅಮಿತ್ ಶಾ ಅವರು ದೇಶಕ್ಕೆ ಮಾಡುತ್ತಿರುವ ತೊಂದರೆ, ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವ ವಿರುದ್ಧ ಅಲ್ಲಿ ಧ್ವನಿ ಎತ್ತಲಾಗುವುದು ಎಂದು ಹೇಳಿದರು.

ಮಹಿಳೆಯರ ಸ್ವಾತಂತ್ರ್ಯ ಮೊಟಕು: ಸಂವಿಧಾನ ರಕ್ಷಣೆ ಹಾಗೂ ಸಂವಿಧಾನದ ಪ್ರಕಾರವಾಗಿ ನಡೆದುಕೊಳ್ಳುವುದು ಅತಿ ಮುಖ್ಯ. ಆದರೆ ಈಗಿರುವ ಕೇಂದ್ರ ಸರ್ಕಾರ ಸಂವಿಧಾನದ ಎಲ್ಲಾ ಮೌಲ್ಯಗಳನ್ನು ಮೂಲೆಗುಂಪು ಮಾಡುತ್ತಿದೆ. ಇದರಿಂದ ನಾಗರಿಕರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳು, ಅದರಲ್ಲೂ ಮಹಿಳೆಯರಿಗೆ ವಿಶೇಷವಾಗಿ ಸಿಗುವ ಸ್ವಾತಂತ್ರ್ಯ ಮೊಟಕುಗೊಳಿಸಲಾಗುತ್ತಿದೆ ಎಂದು ದೂರಿದರು.

ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನ ಸಿಕ್ಕ ನಂತರ ನಮಗೆ ವಿಶೇಷವಾದ ಸ್ಥಾನಮಾನ ಸಿಕ್ಕಿದೆ. ಇದು ಅನೇಕರಿಗೆ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಿ ಮತ ಕೇಳಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಪಂಡಿತ್ ಜವಹಾರ್ ಲಾಲ್ ನೆಹರು ಅವರ ಕೊಡುಗೆ. ಆದರೆ ದುಃಖದ ವಿಚಾರವೆಂದರೆ ಅಮಿತ್ ಶಾರಂತಹ ನಾಯಕರು ಸಂವಿಧಾನವನ್ನು ಹೀಯಾಳಿಸುತ್ತಿದ್ದಾರೆ. ಸಂವಿಧಾನ ರಚಿಸಿದವರ ಬಗ್ಗೆ ಟೀಕೆ ಮಾಡಿ ಅವರಿಗೆ ಅಗೌರವ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಯೊಂದಕ್ಕೂ ಅಂಬೇಡ್ಕರ್ ಹೆಸರು ಜಪ ಮಾಡುತ್ತೀರಿ. ಅದರ ಬದಲು ದೇವರ ಹೆಸರು ಜಪಿಸಿದ್ದರೆ 7 ಜನ್ಮದಲ್ಲಿ ಸ್ವರ್ಗ ಸಿಗುತ್ತಿತ್ತು ಎಂದು ಸಂಸತ್ತಿನಲ್ಲಿ ಶಾ ಹೇಳಿದ್ದಾರೆ. ಈ ದೇಶ ನರಕದಲ್ಲಿದ್ದಾಗ ಇವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲಿಲ್ಲ. ಕೇಂದ್ರ ಸರ್ಕಾರ ದೇಶದ ಪ್ರಜೆಗಳನ್ನು ಹೀನಾಯವಾಗಿ ನೋಡುತ್ತಿದೆ. ಅತೀ ಶ್ರೀಮಂತರು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಸರ್ಕಾರ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ಬಡವರನ್ನು ಕಡೆಗಣಿಸುತ್ತಿದೆ. ಹೀಗಾಗಿ ನಾವು ಹೋರಾಟ ಮಾಡಬೇಕಾಗಿದೆ ಎಂದು ಖರ್ಗೆ ಹೇಳಿದರು.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌