ವಿಜಯಪುರ: ಪಟ್ಟಣದ ಸರ್ಕಾರಿ ಉರ್ದು ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ಬೆಳಿಗ್ಗೆ ಸಂಭವಿಸಿದ ಸ್ಫೋಟವೊಂದರಲ್ಲಿ ವಿದ್ಯಾರ್ಥಿಯೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಶೌಚಾಲಯದಲ್ಲಿ ವಿದ್ಯಾರ್ಥಿ ನಡೆಸಿದ ಅಪಾಯಕಾರಿ ರಾಸಾಯನಿಕ ಪ್ರಯೋಗವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ

ವಿಜಯಪುರ: ಪಟ್ಟಣದ ಸರ್ಕಾರಿ ಉರ್ದು ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ಬೆಳಿಗ್ಗೆ ಸಂಭವಿಸಿದ ಸ್ಫೋಟವೊಂದರಲ್ಲಿ ವಿದ್ಯಾರ್ಥಿಯೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಶೌಚಾಲಯದಲ್ಲಿ ವಿದ್ಯಾರ್ಥಿ ನಡೆಸಿದ ಅಪಾಯಕಾರಿ ರಾಸಾಯನಿಕ ಪ್ರಯೋಗವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಘಟನೆ ವಿವರ:

ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆ, ಬೆಳಗ್ಗೆ ೧೧ ಗಂಟೆಗೆ ೭ನೇ ತರಗತಿ ವಿದ್ಯಾರ್ಥಿ ಮೂತ್ರ ವಿಸರ್ಜನೆಗೆಂದು ಶಿಕ್ಷಕರ ಅನುಮತಿ ಪಡೆದು ಶೌಚಾಲಯಕ್ಕೆ ತೆರಳಿದ್ದನು. ಸ್ವಲ್ಪ ಸಮಯದ ಬಳಿಕ ಶೌಚಾಲಯದ ಕಡೆಯಿಂದ ಭಾರಿ ಸ್ಫೋಟದ ಶಬ್ದ ಕೇಳಿಬಂದಿದೆ. ವಿದ್ಯಾರ್ಥಿ ವಾಪಸ್ ಬರದಿದ್ದಾಗ ಅನುಮಾನಗೊಂಡ ಶಿಕ್ಷಕರು ಮತ್ತೊಬ್ಬ ವಿದ್ಯಾರ್ಥಿಯನ್ನು ಕಳುಹಿಸಿದ್ದಾರೆ. ಈ ವೇಳೆ ಶೌಚಾಲಯಕ್ಕೆ ಹೋಗಿದ್ದ ವಿದ್ಯಾರ್ಥಿ ಬಟ್ಟೆಗಳಿಗೆ ಬೆಂಕಿ ಹತ್ತಿದೆ.

ಕೆಮಿಕಲ್ ಪ್ರಯೋಗದ ವಿಕೋಪ:

ವಿದ್ಯಾರ್ಥಿಯು ಶೌಚಾಲಯಕ್ಕೆ ತೆರಳುವ ಮುನ್ನ ಶಾಲೆ ವಿಜ್ಞಾನ ಪ್ರಯೋಗಾಲಯದಿಂದ ಅಥವಾ ಹೊರಗಿನಿಂದ ತಂದಿದ್ದ ’ಕಾರ್ಬನ್ ಕೆಮಿಕಲ್’ ತನ್ನೊಂದಿಗೆ ಒಯ್ದಿದ್ದ ಎನ್ನಲಾಗಿದೆ. ಶೌಚಾಲಯದಲ್ಲಿದ್ದ ಪ್ಲಾಸ್ಟಿಕ್ ಜಗ್‌ ನೀರಿಗೆ ಈ ರಾಸಾಯನಿಕ ಹಾಕಿ ಪ್ರಯೋಗ ಮಾಡಲು ಯತ್ನಿಸಿದಾಗ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಜಗ್ ಪುಡಿಯಾಗಿ ವಿದ್ಯಾರ್ಥಿಯ ಮೈಮೇಲಿನ ಬಟ್ಟೆಗೆ ಬೆಂಕಿ ಹತ್ತಿಕೊಂಡಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಶಿಕ್ಷಕರು ಬೆಂಕಿ ನಂದಿಸಿ, ವಿದ್ಯಾರ್ಥಿಯ ಸುಟ್ಟ ಬಟ್ಟೆಗಳನ್ನು ತೆರವುಗೊಳಿಸಿ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ.

ತನಿಖಾ ತಂಡಗಳಿಂದ ಪರಿಶೀಲನೆ:

ಘಟನೆ ತಿಳಿಯುತ್ತಿದ್ದಂತೆಯೇ ಇನ್‌ಸ್ಪೆಕ್ಟರ್ ಜನರಲ್ ಲಾಬೂರಾಮ್, ಪೊಲೀಸ್ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಫೋಟದ ತೀವ್ರತೆ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದರು.

ವಿದ್ಯಾರ್ಥಿಯ ಬಳಿಗೆ ಆ ಅಪಾಯಕಾರಿ ರಾಸಾಯನಿಕ ವಸ್ತು ಎಲ್ಲಿಂದ ಬಂತು ಮತ್ತು ಅದು ಶಾಲೆಯ ಒಳಗೆ ಹೇಗೆ ತರಲಾಯಿತು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.