ಉದ್ದೇಶಪೂರ್ವಕವಾಗಿ ಕಂಡಕ್ಟರ್‌ ಮೇಲೆ ಪೋಕ್ಸೋ ಕೇಸ್ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೇಸರ

ಸಾರಾಂಶ

ಬಸ್‌ ನಿರ್ವಾಹಕನ ಮೇಲೆ ಬೇಕೆಂತಲೇ ಪೋಕ್ಸೋ ಪ್ರಕರಣ ಕುರಿತು ದೂರು ಕೊಟ್ಟಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

  ಬೆಳಗಾವಿ : ಬಸ್‌ ನಿರ್ವಾಹಕನ ಮೇಲೆ ಬೇಕೆಂತಲೇ ಪೋಕ್ಸೋ ಪ್ರಕರಣ ಕುರಿತು ದೂರು ಕೊಟ್ಟಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಬಸ್‌ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಿರ್ವಾಹಕ ಅದೇ ಮಾರ್ಗದಲ್ಲಿ ಕೆಲಸ ಮಾಡುತ್ತಾರೆ. ಅಂದು ಇಬ್ಬರು ಅಪ್ರಾಪ್ತರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರೂ ಜಿರೋ ಟಿಕೆಟ್‌ ಪಡೆದು ಪ್ರಯಾಣ ಮಾಡುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ ನಿರ್ವಾಹಕನಿಗೆ ಮರಾಠಿ ಬರಲ್ಲ, ಅವರಿಗೆ ಕನ್ನಡ ಬರಲ್ಲ. ಹಾಗಾಗಿ ಮಾತಿಗೆ ಮಾತು ಬೆಳೆದಿದ್ದು, ಯುವಕ ತನ್ನ ಸ್ನೇಹಿತರನ್ನು ಕರೆಸಿ ಹಲ್ಲೆ ಮಾಡಿಸಿದ್ದಾನೆ.

ನಿರ್ವಾಹಕರು ದೂರು ನೀಡಿದ ಬಳಿಕ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ, ಅಪ್ರಾಪ್ತೆಯು ನಿರ್ವಾಹಕನ ವಿರುದ್ಧ ಬೇಕೆಂತಲೇ ಪೋಕ್ಸೋ ಪ್ರಕರಣ ದಾಖಲಿಸಿದ್ದಾಳೆ. ಪೋಕ್ಸೋ ಕಾಯ್ದೆ ಪ್ರಕರಣಕ್ಕೂ ಮೊದಲು ಪೊಲೀಸರು ಕಾಮನ್‌ಸೆನ್ಸ್‌ ಉಪಯೋಗಿಸಬೇಕಿತ್ತು. ಉದ್ದೇಶಪೂರ್ವಕವಾಗಿ ಪೋಕ್ಸೋ ಕೇಸ್ ಕೊಟ್ಟಿದ್ದಾರೆ. ಪೋಕ್ಸೋ ಕೇಸ್ ದಾಖಲಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಎಂಡಿ ಮಾತನಾಡಿದ್ದಾರೆ. ನಾನು ಕೂಡ ಈ ಸಂಬಂಧ ಗೃಹ ಸಚಿವರ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.--

ಬಸ್‌ ಸಂಚಾರ ಸಮಸ್ಯೆ ಪರಿಹಾರಕ್ಕೆ ಮಂಗಳವಾರ ಸೊಲ್ಲಾಪುರದಲ್ಲಿ ಜಿಲ್ಲೆಯ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯಲಿದೆ. ಸಮಸ್ಯೆ ಬಗೆಹರಿಯದಿದ್ದರೆ ಮಹಾರಾಷ್ಟ್ರ ಸರ್ಕಾರದ ಜೊತೆ ನಾನೇ ಮಾತನಾಡುವೆ.

-ರಾಮಲಿಂಗಾರೆಡ್ಡಿ, ಸಚಿವ.

Share this article