ಕಪ್‌ತುಳಿತಕ್ಕೆ ಪೊಲೀಸ್ ವೈಫಲ್ಯ ಕಾರಣ : ಕೇಂದ್ರಕ್ಕೆ ರಾಜ್ಯ ವರದಿ

Sujatha NRPublished : Jun 24, 2025 6:37 AM
Karnataka Crowd Control Bill 2025 Strict Law After RCB Victory Stampede Tragedy

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ, ಎಡಿಜಿಪಿ ಬಿ.ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಸಂಬಂಧ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಮಗ್ರ ವರದಿ ಸಲ್ಲಿಸಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ, ಎಡಿಜಿಪಿ ಬಿ.ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಸಂಬಂಧ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಮಗ್ರ ವರದಿ ಸಲ್ಲಿಸಿದೆ.

ಕೇಂದ್ರಕ್ಕೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮೂಲಕ ವರದಿ ಸಲ್ಲಿಸಿದ್ದು, ಇದರಲ್ಲಿ ಕಾಲ್ತುಳಿತ ದುರಂತಕ್ಕೆ ಪೊಲೀಸ್ ಭದ್ರತಾ ವೈಫಲ್ಯ ಹಾಗೂ ಸಂವಹನ ಕೊರತೆ ಪ್ರಮುಖ ಕಾರಣಗಳು. ಈ ಅಂಶಗಳನ್ನಾಧರಿಸಿಯೇ ಐಪಿಎಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಉಲ್ಲೇಖಿಸಿದೆ ಎನ್ನಲಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಸರ್ಕಾರದ ವರದಿಗೆ ಕೇಂದ್ರ ಒಪ್ಪಿಗೆ ಸೂಚಿಸುವುದೇ ಅಥವಾ ತಿರಸ್ಕರಿಸುವುದೇ ಎಂಬ ಬಗ್ಗೆ ಕುತೂಹಲ ಮೂಡಿದ್ದು, ಕೆಲವೇ ದಿನಗಳಲ್ಲಿ ಅಮಾನತು ಕುರಿತು ಕೇಂದ್ರದ ಅಂತಿಮ ತೀರ್ಮಾನ ಹೊರಬೀಳಲಿದೆ.

ಅಖಿಲ ಭಾರತ ಆಡಳಿತ ಸೇವಾಮಟ್ಟದ ಅಧಿಕಾರಿಗಳು ಅಂದರೆ ಐಎಎಸ್‌ ಹಾಗೂ ಐಪಿಎಸ್ ಅಧಿಕಾರಿಗಳ ಅಮಾನತು ಬಗ್ಗೆ ನಿಯಮಾನುಸಾರ ಕೇಂದ್ರ ಸರ್ಕಾರ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಿದೆ. ಅಧಿಕಾರಿಗಳ ಕೇಡರ್ ಹಾಗೂ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರ ಅಧಿಕಾರ ಹೊಂದಿದೆ. ಆದರೆ ಅಮಾನತು ವಿಚಾರದಲ್ಲಿ ಕೇಂದ್ರದ ತೀರ್ಮಾನವೇ ಅಂತಿಮವಾಗಿರಲಿದೆ. ಹೀಗಾಗಿ ಈಗಿನ ಐಪಿಎಸ್ ಅಧಿಕಾರಿಗಳ ತಲೆದಂಡ ಕುರಿತು ಕೇಂದ್ರಕ್ಕೆ ರಾಜ್ಯ ವರದಿ ಸಲ್ಲಿಸಿದೆ.

ತನ್ನ ರಾಜ್ಯದ ಐಪಿಎಸ್ ಅಥವಾ ಐಎಎಸ್ ಕೇಡರ್‌ ಅಧಿಕಾರಿಗಳನ್ನು ಅಮಾನತುಗೊಳಿಸಿದ ಬಗ್ಗೆ ಒಂದು ದಿನದಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕು. ನಂತರ 15 ದಿನಗಳಲ್ಲಿ ಆ ಅಧಿಕಾರಿಗಳ ಅಮಾನತಿಗೆ ಕಾರಣಗಳ ಕುರಿತು ಸಮಗ್ರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಬೇಕು. ಈ ವರದಿ ಆಧರಿಸಿ 1 ತಿಂಗಳಲ್ಲಿ ಅಮಾನತು ಆದೇಶದ ಒಪ್ಪಿಗೆ ಅಥವಾ ತಿರಸ್ಕಾರದ ಬಗ್ಗೆ ಕೇಂದ್ರ ನಿರ್ಣಯಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭಕ್ಕೆ’ ಮಾಹಿತಿ ನೀಡಿದರು.

ಡಿಎಪಿಆರ್‌ನಿಂದ ವರದಿ ಅಂಚೆ:

ಜೂ.5 ರಂದು ರಾತ್ರಿ ಕಾಲ್ತುಳಿತ ದುರ್ಘಟನೆಗೆ ಭದ್ರತಾ ಲೋಪ ಕಾರಣ ಕೊಟ್ಟು ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಎಡಿಜಿಪಿ ದಯಾನಂದ್, ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್‌, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್‌ ಗಿರೀಶ್ ಅ‍ವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ಹೀಗಾಗಿ ನಿಯಮಾನುಸಾರ ಐಪಿಎಸ್ ಅಧಿಕಾರಿಗಳ ಅಮಾನತು ಕುರಿತು ಜೂ.19 ರೊಳಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ವರದಿ ಸಲ್ಲಿಸಬೇಕಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಈಗಿನ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿ ಹಿರಿಯ ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಸಿ ಡಿಪಿಎಆರ್‌ ಇಲಾಖೆ ವರದಿ ಸಿದ್ಧಪಡಿಸಿತು ಎನ್ನಲಾಗಿದೆ.

ಐಪಿಎಲ್‌ ಟ್ರೋಫಿ ಗೆದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ತಂಡಕ್ಕೆ ಅಭಿನಂದಿಸಲು ಜೂ.4 ರಂದು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧ ಮುಂದೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದ ಸಮಾರಂಭಕ್ಕೆ ಹೋಗಲೆತ್ನಿಸಿದಾಗ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತದಿಂದ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಭದ್ರತಾ ಲೋಪ ಹಾಗೂ ಸಂವಹನ ಕೊರತೆ ಕಾರಣ ಕೊಟ್ಟು ಆಗಿನ ಪೊಲೀಸ್ ಆಯುಕ್ತ ಸೇರಿ ಐವರು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. ಆಯುಕ್ತರ ತಲೆದಂಡಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ವರದಿಯಲ್ಲಿ ಏನಿದೆ?:

ಕಾರ್ಯಕ್ರಮ ನಡೆಯುವ ಬಗ್ಗೆ ಮಾಹಿತಿ ಇದ್ದರೂ ಕ್ರೀಡಾಂಗಣ ಹಾಗೂ ವಿಧಾನಸೌಧ ಸುತ್ತಮುತ್ತ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದೆ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದರು. ಅಲ್ಲದೆ, ಸಮಾರಂಭಕ್ಕೆ ಆಗಮಿಸಲಿರುವ ಅಭಿಮಾನಿಗಳ ಅಂದಾಜಿಸುವಲ್ಲಿ ಪೊಲೀಸರು ಹಾಗೂ ಗುಪ್ತಚರ ಅಧಿಕಾರಿಗಳು ವಿಫಲರಾಗಿದ್ದರು. ಭದ್ರತಾ ಉಸ್ತುವಾರಿ ಹೊತ್ತಿದ್ದ ಅಧಿಕಾರಿಗಳು ಮುಂಜಾಗ್ರತೆ ವಹಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ ಎನ್ನಲಾಗಿದೆ. ಅಲ್ಲದೆ, ಕಾಲ್ತುತಳಿತ ಘಟನೆ ಸಂಬಂಧ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡುವಲ್ಲಿ ವಿಳಂಬವಾಗಿದೆ. ಅಂದು ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳ ನಡುವೆ ಸಂವಹನ ಕೊರತೆ ಉಂಟಾಗಿದೆ. ಇಲಾಖೆಗಳ ನಡುವೆ ಪರಸ್ಪರ ಸಮನ್ವಯತೆ ಸಾಧಿಸಿಲ್ಲ. ಇತಿಹಾಸದಲ್ಲೇ ದೊಡ್ಡ ದುರಂತ ಸಂಭವಿಸಿ ಜನ ಪ್ರಾಣ ಕಳೆದುಕೊಂಡ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೇ ಕಾರಣಕ್ಕೆ ಅಂದು ಭದ್ರತಾ ಹೊಣೆಗಾರಿಕೆ ಹೊತ್ತಿದ್ದ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿರುವುದಾಗಿ ತಿಳಿದು ಬಂದಿದೆ.

ಬಂದೋಬಸ್ತ್ ಮಾಹಿತಿ ನೀಡಿದ ಸರ್ಕಾರ

ಕಾಲ್ತುಳಿತ ದುರ್ಘಟನೆಗೆ ಪೊಲೀಸ್ ಭದ್ರತಾ ವೈಫಲ್ಯದ ಬಗ್ಗೆ ಸರ್ಕಾರ ಪ್ರಸ್ತಾಪಿಸಿದೆ. ಇದಕ್ಕೆ ಪೂರಕವಾಗಿ ಅಂದು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧ ಸುತ್ತಮುತ್ತ ಬಂದೋಬಸ್ತ್ ನಿಯೋಜನೆಗೊಂಡಿದ್ದ ಪೊಲೀಸರ ಅಂಕಿ-ಸಂಖ್ಯೆ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಐಪಿಎಲ್ ಪಂದ್ಯಾವಳಿಗಳ ಭದ್ರತೆಗೆ 800 ಪೊಲೀಸರನ್ನು ಬಳಸಲಾಗುತ್ತಿತ್ತು. ಆದರೆ ಅಭಿನಂದನಾ ಸಮಾರಂಭಕ್ಕೆ ಹೆಚ್ಚಿನ ಜನ ಸಂದಣಿ ಇದ್ದರೂ 1300 ಪೊಲೀಸರನ್ನು ಮಾತ್ರ ನಿಯೋಜಿಸಲಾಗಿತ್ತು ಎಂದು ಸರ್ಕಾರ ಹೇಳಿರುವುದಾಗಿ ತಿಳಿದು ಬಂದಿದೆ.

ರಾಜ್ಯದ ವರದಿಯಲ್ಲೇನಿದೆ?

- ಪೊಲೀಸ್ ಭದ್ರತಾ ವೈಫಲ್ಯ, ಸಂವಹನ ಕೊರತೆಯಿಂದ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ

- ವಿಜಯೋತ್ಸವ ನಡೆಯುವ ಬಗ್ಗೆ ಮಾಹಿತಿ ಇದ್ದರೂ ಭದ್ರತೆ ಕಲ್ಪಿಸದೆ ಅಧಿಕಾರಿಗಳ ನಿರ್ಲಕ್ಷ್ಯ

- ಎಷ್ಟು ಅಭಿಮಾನಿಗಳು ಸೇರುತ್ತಾರೆ ಎಂದು ಅಂದಾಜಿಸುವಲ್ಲಿ ಪೊಲೀಸ್‌, ಗುಪ್ತದಳ ವಿಫಲ

- ಭದ್ರತಾ ಉಸ್ತುವಾರಿ ಹೊತ್ತಿದ್ದ ಅಧಿಕಾರಿಗಳು ಮುಂಜಾಗ್ರತೆ ವಹಿಸಿದ್ದರೆ ದುರಂತ ಆಗ್ತಿರಲಿಲ್ಲ

- 11 ಜನರ ಬಲಿಪಡೆದ ಇದು ರಾಜ್ಯದ ಇತಿಹಾಸದಲ್ಲೇ ದೊಡ್ಡ ದುರಂತ, ಅತಿ ಗಂಭೀರ ವಿಚಾರ

- ಇದೇ ವೈಫಲ್ಯದಿಂದ ಬೆಂಗಳೂರು ಪೊಲೀಸ್‌ ಆಯುಕ್ತ ದಯಾನಂದ್‌ ಸೇರಿ ಮೂವರು ಸಸ್ಪೆಂಡ್‌

PREV
Read more Articles on