;Resize=(412,232))
ಬೆಂಗಳೂರು : ಡೈರಿ ವೃತ್ತದ ಮೇಲ್ಸೇತುವೆ ಮೇಲೆ ದರೋಡೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ನಗರದ ಎಲ್ಲ ಮೇಲ್ಸೇತುವೆ, ಸ್ಕೈವಾಕ್ ಮತ್ತು ಅಂಡರ್ ಪಾಸ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿದ್ಯುತ್ ದೀಪ ಅಳವಡಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ 42 ಫ್ಲೈ ಓವರ್, 29 ಸ್ಕೈವಾಕ್ ಮತ್ತು ಅಂಡರ್ ಪಾಸ್ ಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಪ್ರಮುಖವಾಗಿ ಫ್ಲೈ ಓವರ್ ಮೇಲೆ ಹೈಟೆಕ್ ಸಿಸಿ ಕ್ಯಾಮೆರಾ ಅಳವಡಿಸಿ ಎಂದು ತಿಳಿಸಿದೆ. ಕೆಲವು ಕಡೆ ಪಾಳು ಬಿದ್ದಿರುವ ಪಾಲಿಕೆ ಸಿಸಿ ಕ್ಯಾಮೆರಾಗಳ ಸರಿಪಡಿಸುವಂತೆ ಪತ್ರದಲ್ಲಿ ಕೋರಿದೆ ಎಂದರು.
ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ನಡೆದಿದೆ. ನಿರ್ಭಯಾ ಯೋಜನೆಯಡಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಆಗಬೇಕಾಗಿದೆ. ಯಾವ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು ಎಂದು ಪೊಲೀಸರು ಮಾಹಿತಿ ನೀಡಿದರೆ ಅಂತಹ ಕಡೆಗಳಲ್ಲಿ ಅಳವಡಿಸಲು ಸಂಬಂಧ ಪಟ್ಟ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಲಾಗುವುದು ಎಂದರು.
ನಿರ್ಭಯಾ ಯೋಜನೆಯ ಹಣ ಬಳಸಬೇಕೇ ಅಥವಾ ಪಾಲಿಕೆಯ ಅನುದಾನ ಬಳಸಬೇಕೇ ಎಂಬ ಬಗ್ಗೆ ತೀರ್ಮಾನಿಸಲಾಗುವುದು. ಪ್ರಮುಖ ಸರ್ಕಲ್. ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳ ಜತೆ ಎಲ್ ಇಡಿ ಲೈಟ್ ಅಳವಡಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸರ ಸಲಹೆಯಂತೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸೂಚನೆ ನೀಡುವುದಾಗಿ ಮಹೇಶ್ವರ ರಾವ್ ವಿವರಿಸಿದರು.
ನಗರದಲ್ಲಿ ಖಾಸಗಿ ಸ್ಥಳದಲ್ಲಿ ಬೀದಿ ನಾಯಿಗಳ ಪೋಷಿಸಲು ಆಸಕ್ತಿ ವಹಿಸುವವರಿಗೆ ಹಣ ನೀಡಲಾಗುವುದು ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಬಗ್ಗೆ ಪಾಲಿಕೆ ವ್ಯಾಪ್ತಿಯಲ್ಲಿ ಮಾಹಿತಿ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ. ಜಿಬಿಎ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆಳು, ಆಸ್ಪತ್ರೆಗಳು, ಕ್ರೀಡಾಂಗಣಗಳಿಗೆ ನೋಟಿಸ್ ನೀಡಿ ಸಂಬಂಧಪಟ್ಟ ನೋಡಲ್ ಅಧಿಕಾರಿ ನೇಮಿಸಬೇಕು ಎಂದು ಸೂಚನೆ ನೀಡಲಾಗಿದೆ.
ಕನಿಷ್ಠ 6000 ಶಾಲೆ, 1,500 ಪಿಯುಸಿ, ಕಾಲೇಜುಗಳು ಇರಬಹುದು ಎಂದು ಅಂದಾಜಿಸಲಾಗಿದ್ದು, ಆಸ್ಪತ್ರೆಗಳು ಸೇರಿ ಎಲ್ಲ ಸಂಸ್ಥೆಗಳು ತಮ್ಮ ಆವರಣ ವ್ಯಾಪ್ತಿಯಲ್ಲಿರುವ ಬೀದಿನಾಯಿಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಖಾಸಗಿ ಸ್ಥಳದಲ್ಲಿ ಬೀದಿ ನಾಯಿಗಳನ್ನು ಸಾಕಾಣಿಕೆ, ಪೋಷಣೆ ಮಾಡುವುದಾದರೆ ಅಂತವರಿಗೆ ಸರ್ಕಾರದ ದರದಲ್ಲಿ ಹಣ ನೀಡಲಾಗುವುದು ಎಂದು ಹೇಳಿದರು.
ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಆವರಣದಲ್ಲಿ ಇರುವ ನಾಯಿಗಳನ್ನು ಸ್ಥಳಾಂತರಿಸಲಾಗುವುದು. ಡಂಪಿಂಗ್ ಯಾರ್ಡ್ ಅಥವಾ ಅನುಪಯುಕ್ತ ಸ್ಥಳದ ವ್ಯಾಪ್ತಿಯಲ್ಲಿರುವ ನಾಯಿಗಳ ಸ್ಥಳಾಂತರಕ್ಕೆ ತಿಳಿಸಲಾಗಿದೆ. ಇದಕ್ಕೆ ಆಗುವ ವೆಚ್ಚವನ್ನು ಆಯಾ ಪಾಲಿಕೆಯಿಂದ ಭರಿಸಲಾಗುವುದು ಎಂದು ತಿಳಿಸಿದರು.